ವೈಯಕ್ತಿಕ ಕಾರಣದಿಂದ ಮನೆಯಲ್ಲಿ ಏಕಾಂಗಿಯಾಗಿ ನೆಲೆಸಿದ್ದ ಮಹಿಳೆಯೊಬ್ಬಳಿಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟಿ.ಸಿ.ಪಾಳ್ಯ ನಿವಾಸಿ ಅಂಬಿಕಾ (40) ಕೊಲೆಯಾದ ದುರ್ದೈವಿ. 

ಬೆಂಗಳೂರು (ಏ.10): ವೈಯಕ್ತಿಕ ಕಾರಣದಿಂದ ಮನೆಯಲ್ಲಿ ಏಕಾಂಗಿಯಾಗಿ ನೆಲೆಸಿದ್ದ ಮಹಿಳೆಯೊಬ್ಬಳಿಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟಿ.ಸಿ.ಪಾಳ್ಯ ನಿವಾಸಿ ಅಂಬಿಕಾ (40) ಕೊಲೆಯಾದ ದುರ್ದೈವಿ. ನಾಲ್ಕು ದಿನಗಳ ಹಿಂದೆಯೇ ಈ ಹತ್ಯೆ ನಡೆದಿದೆ. ಮೃತಳ ಮನೆಯಿಂದ ಬರುತ್ತಿದ್ದ ದುರ್ವಾಸನೆ ಹಿನ್ನೆಲೆಯಲ್ಲಿ ಪೊಲೀಸರಿಗೆ ಶನಿವಾರ ಸ್ಥಳೀಯರು ತಿಳಿಸಿದ್ದಾರೆ. ಮೃತಳ ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿ ಪೊಲೀಸರು ಪರಿಶೀಲಿಸಿದಾಗ ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. 

ಬಳಿಕ ಅಂಬಿಕಾಳ ಮೊಬೈಲ್‌ನಲ್ಲಿ ನಂಬರ್‌ ಪಡೆದು ಆಕೆಯ ಕುಟುಂಬದವರಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಅಂಬಿಕಾ ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ಎಚ್‌.ಹೊಸಹಳ್ಳಿ ಗ್ರಾಮದವಳಾಗಿದ್ದು, ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಟಿ.ಸಿ.ಪಾಳ್ಯದ ಗಾರ್ಡನ್‌ ಸಿಟಿ ಕಾಲೇಜು ಸಮೀಪ ಅಂಬಿಕಾ ನೆಲೆಸಿದ್ದಳು. ಹಲವು ತಿಂಗಳ ಹಿಂದೆಯೇ ಅನಾರೋಗ್ಯ ಹಿನ್ನೆಲೆಯಲ್ಲಿ ಆಕೆಯ ಪತಿ ಸಹ ಮೃತಪಟ್ಟಿದ್ದರು. ಇಬ್ಬರು ಮಕ್ಕಳ ಪೈಕಿ ಹಿರಿಯ ಮಗ ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಓದುತ್ತಿದ್ದಾನೆ. ಈ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏ.3ರಂದು ತನ್ನ ನೆರೆಮನೆಯ ಮಹಿಳೆಯನ್ನು ಭೇಟಿಯಾಗಿ ಅಂಬಿಕಾ ಮಾತನಾಡಿದ್ದಳು. ನಂತರ ಆಕೆ ಹೊರಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಹೀಗಾಗಿ ಏ.4 ಅಥವಾ ಏ.5ರಂದು ಆಕೆಯ ಮನೆಗೆ ಬಂದಿರುವ ಪರಿಚಿತರೇ ಹತ್ಯೆ ಮಾಡಿದ್ದಾರೆ. ಮೃತಳ ದೇಹದಲ್ಲಿ ನಾಲ್ಕೈದು ಬಾರಿ ಚೂರಿ ಇರಿತದ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನಕಲಿ ಪಾಸ್‌ಪೋರ್ಟ್‌ ಮಾಡಿಸಿ ವಿದೇಶ ಸುತ್ತಿ ಬಂದ ಬಾಂಗ್ಲಾ ಪ್ರಜೆಗಳಿಬ್ಬರ ಬಂಧನ

ಪೊಲೀಸ್‌ ಆಗುತ್ತೇನೆ ಎಂದ ಮೃತಳ ಮಗ: ಮೃತ ಅಂಬಿಕಾ ಸಾವಿನ ಬಗ್ಗೆ ಶ್ರೀ ಸಿದ್ಧಗಂಗಾ ಮಠದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಆಕೆಯ ಮಗನಿಗೆ ಕುಟುಂಬ ಸದಸ್ಯರು ತಿಳಿಸಿದ್ದರು. ತಾಯಿ ಹತ್ಯೆ ವಿಚಾರ ತಿಳಿದು ಆಘಾತಗೊಂಡು ಆತ, ನಗರಕ್ಕೆ ಶನಿವಾರ ರಾತ್ರಿಯೇ ಬಂದು ಪೊಲೀಸರನ್ನು ಭೇಟಿಯಾಗಿದ್ದ. ಸೋಮವಾರ ಆತನಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದೆ. ನಾನು ಚೆನ್ನಾಗಿ ಓದಿ ಮುಂದೆ ಪೊಲೀಸ್‌ ಆಗುವೆ ಎಂದು ಪಿಎಸ್‌ಐ ಅನಿತಾ ಅವರಿಗೆ ಹೇಳಿ ಅಂಬಿಕಾ ಪುತ್ರ ಕಣ್ಣೀರಿಟ್ಟಿದ್ದಾನೆ. ಆಗ ಆತನನ್ನು ಸಂತೈಸಿ ಶಿಕ್ಷಣಕ್ಕೆ ನೆರವು ನೀಡುವ ಭರವಸೆಯನ್ನು ಪಿಎಸ್‌ಐ ನೀಡಿದ್ದಾರೆ.