ಭಾರತೀಯರ ಹೆಸರಿನಲ್ಲಿ ನಕಲಿ ಪಾಸ್‌ ಪೋರ್ಟ್‌ ಪಡೆದು ಸಿಂಗಾಪುರ ದೇಶಕ್ಕೆ ಪ್ರವಾಸ ಹೋಗಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಏ.09): ಭಾರತೀಯರ ಹೆಸರಿನಲ್ಲಿ ನಕಲಿ ಪಾಸ್‌ ಪೋರ್ಟ್‌ ಪಡೆದು ಸಿಂಗಾಪುರ ದೇಶಕ್ಕೆ ಪ್ರವಾಸ ಹೋಗಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾ ಪ್ರಜೆಗಳಾದ ಲಿಯಾಕತ್‌ ಅಲಿ ಹಾಗೂ ರಿಜಾಉಲ್‌ ಶೇಖ್‌ ಬಂಧಿತರಾಗಿದ್ದು, ಸಿಂಗಾಪುರದಿಂದ ಮಂಗಳವಾರ ಕೆಐಎಗೆ ಆರೋಪಿಗಳು ಆಗಮಿಸಿದ್ದರು. ವಲಸೆ ವಿಭಾಗದಲ್ಲಿ ಅಲಿ ಹಾಗೂ ಶೇಖ್‌ಗೆ ಸಂಬಂಧಿಸಿದ ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಪಾಸ್‌ಪೋರ್ಟ್‌ಗಳು ಎಂಬುದು ಗೊತ್ತಾಯಿತು. 

ಬಳಿಕ ಕೆಐಎಯ ವಲಸೆ ವಿಭಾಗದ ಅಧಿಕಾರಿಗಳ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎರಡು ದಶಕಗಳ ಹಿಂದೆ ಅಕ್ರಮವಾಗಿ ಭಾರತದ ಗಡಿ ದಾಟಿ ಒಳ ನುಸುಳಿದಿದ್ದ ಲಿಯಾಕತ್‌ ಅಲಿ ಹಾಗೂ ರಿಜಾಉಲ್‌ ಶೇಖ್‌, ಬಳಿಕ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ನೆಲೆಸಿದ್ದರು. ಕಾರ್ಪೆಂಟರ್‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆರೋಪಿಗಳು, ಬಳಿಕ ಸ್ಥಳೀಯ ನಿವಾಸಿಗಳೆಂದು ಆಧಾರ್‌ ಕಾರ್ಡ್‌, ಪಡಿತರ ಹಾಗೂ ಮತದಾರನ ಗುರುತಿನ ಪತ್ರಗಳನ್ನು ನಕಲಿ ದಾಖಲೆ ಬಳಸಿ ಪಡೆದಿದ್ದರು. 

ಕುಡಿದ ನಶೆಯಲ್ಲಿ ಇಂಡಿಗೋ ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆಯಲೆತ್ನ: ಪ್ರಯಾಣಿಕನ ಬಂಧನ

ಈ ದಾಖಲೆಗಳನ್ನು ಬಳಸಿಕೊಂಡು ಇಬ್ಬರು ಪಾಸ್‌ಪೋರ್ಟ್‌ ಕೂಡ ಪಡೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.‘ಲಿಯಾಕತ್‌ ಶೇಖ್‌’ ಹೆಸರಿನಲ್ಲಿ ಲಿಯಾಕತ್‌ ಅಲಿ ಹಾಗೂ ‘ರೀಗನ್‌ ಶೇಖ್‌’ ಎಂದು ರಿಜಾಉಲ್‌ ಶೇಖ್‌ ಭಾರತೀಯ ಪ್ರಜೆಗಳ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್‌ ಸೃಷ್ಟಿಸಿಕೊಂಡಿದ್ದರು. ಎರಡು ದಿನಗಳ ಹಿಂದೆ ಸಿಂಗಾಪುರ ಪ್ರವಾಸಕ್ಕೆ ಆರೋಪಿಗಳು ತೆರಳಿದ್ದರು. 

ಆಗ ಅಲ್ಲಿನ ವಲಸೆ ವಿಭಾಗದ ಅಧಿಕಾರಿಗಳು, ಅಲಿ ಹಾಗೂ ಶೇಖ್‌ ಪಾಸ್‌ಪೋರ್ಟ್‌ ಬಗ್ಗೆ ಅನುಮಾನಗೊಂಡು ವಿಚಾರಿಸಿದ್ದಾಗ ಅಸಲಿ ಮುಖ ಬಯಲಾಗಿದೆ. ಬಳಿಕ ಸಿಂಗಾಪುರದ ಅಧಿಕಾರಿಗಳು, ಇಬ್ಬರನ್ನು ಭಾರತಕ್ಕೆ ವಾಪಸ್‌ ಕಳುಹಿಸಿದ್ದರು. ಅಂತೆಯೇ ಮಂಗಳವಾರ ರಾತ್ರಿ ಸಿಂಗಾಪುರದಿಂದ ಕೆಐಎಗೆ ಬಂದಿಳಿದ್ದ ಅಲಿ ಹಾಗೂ ಶೇಖ್‌ನನ್ನು ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದರು. ನಂತರ ಈ ಬಗ್ಗೆ ಎಫ್‌ಐಆರ್‌ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.

ಹಲವು ಬಾರಿ ವಿದೇಶ ಯಾತ್ರೆ: ಹಲವು ಬಾರಿ ನಕಲಿ ಪಾಸ್‌ ಪೋರ್ಟ್‌ ಬಳಸಿಯೇ ಆರೋಪಿಗಳು ವಿದೇಶ ಪ್ರವಾಸ ಹೋಗಿದ್ದ ಸಂಗತಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಎರಡ್ಮೂರು ಬಾರಿ ಸಿಂಗಾಪುರಕ್ಕೆ ಲಿಯಾಕತ್‌ ಅಲಿ ಪ್ರವಾಸ ಹೋಗಿದ್ದ. ಆದರೆ ಇದೇ ಮೊದಲ ಬಾರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಮತ್ತಷ್ಟು ಬಂಡಾಯ, ಪ್ರತಿಭಟನೆಯ ಬಿಸಿ: ಪಕ್ಷ ಬಿಡಲು ಮಾಲಕರೆಡ್ಡಿ ಪುತ್ರಿ ಸಿದ್ಧತೆ

ನಕಲಿ ದಾಖಲೆ ಸೃಷ್ಟಿಸಿದ ವ್ಯಕ್ತಿಗಾಗಿ ಖಾಕಿ ತಲಾಶ್‌: ತಮ್ಮ ಕುಟುಂಬವನ್ನು ಬಾಂಗ್ಲಾದೇಶದಲ್ಲೇ ಆರೋಪಿಗಳು ಬಿಟ್ಟಿದ್ದರು. ಆದರೆ ತಾವು ಮಾತ್ರ ಭಾರತೀಯರೆಂದು ನಕಲಿ ಸರ್ಕಾರಿ ದಾಖಲೆಗಳನ್ನು ಇಬ್ಬರು ಪಡೆದಿದ್ದರು. ಆರೋಪಿಗಳಿಗೆ ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌, ಮತದಾರನ ಗುರುತಿನ ಪತ್ರ ವಿತರಿಸಿದ್ದ ವ್ಯಕ್ತಿಗಳ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.