ಸುಮ್ನೇ ಹೋಗ್ತಿದ್ದ ಬಸವನ ಹೊಡೆದ ಆಸಾಮಿ: ಮುಂದಾದದ್ದು ಮಾತ್ರ ಘೋರ ದುರಂತ- ವಿಡಿಯೋ ವೈರಲ್
ತನ್ನ ಪಾಡಿಗೆ ಹೋಗುತ್ತಿದ್ದ ಹೋರಿಯನ್ನು ವ್ಯಕ್ತಿಯೊಬ್ಬ ಕೋಲಿನಿಂದ ಹೊಡೆದಿದ್ದಾನೆ. ಮುಂದಾಗಿರುವ ಘಟನೆ ಮಾತ್ರ ಘೋರ ದುರಂತವಾಗಿದ್ದು ಅದರ ವಿಡಿಯೋ ವೈರಲ್ ಆಗಿದೆ.
ಕೆಲವರಿಗೆ ಕೆಟ್ಟ ಚಾಳಿ ಇರುತ್ತದೆ. ಸುಮ್ಮನೇ ಹೋಗುತ್ತಿರುವ ಪ್ರಾಣಿಗಳನ್ನು ಕೆರಳಿಸುವ ಚಟವದು. ನಾಯಿಗಳು ಅದರ ಪಾಡಿಗೆ ಅವು ಆಡುತ್ತಿದ್ದರೆ ಕಲ್ಲು ಹೊಡೆಯುವುದು, ಕೊನೆಗೆ ಅದು ಬಂದು ಕಚ್ಚಿದರೆ ಅದನ್ನು ಸಾಯಿಸುವುದು; ಸುಮ್ಮನೇ ಹೋಗುತ್ತಿರುವ ಹಾವನ್ನು ಕೆಣಕುವುದು, ಅದು ಮರಳಿ ಕಚ್ಚಿದರೆ ಅದನ್ನು ಹೊಡೆದು ಸಾಯಿಸುವುದು... ಹೀಗೆ ಮನುಷ್ಯದ ಕೆಟ್ಟ ಬುದ್ಧಿಗೆ ವಿನಾಕಾರಣ ಪಶು-ಪಕ್ಷಿಗಳು ಜೀವ ಕಳೆದುಕೊಳ್ಳುವುದು ಇದೆ. ಅದು ಜೀವ ಕಳೆದುಕೊಳ್ಳುವುದು ಒಂದೆಡೆಯಾದರೆ, ತಮ್ಮ ಜೀವಕ್ಕೂ ಅಪಾಯವನ್ನು ತಂದುಕೊಳ್ಳುವುದು ಇನ್ನೊಂದು ಕಡೆ. ಇದಾಗಲೇ ನಾಯಿಯ ವಿಷಯದಲ್ಲಿ ಸಾಕಷ್ಟು ಇಂಥ ಘಟನೆಗಳು ನಡೆದಿವೆ. ಅದರಲ್ಲಿಯೂ ಮಕ್ಕಳಿಗೆ ನಾಯಿಗಳನ್ನು ಕೆಣಕುವುದು ಎಂದರೆ ಅದ್ಯಾಕೋ ತುಂಬಾ ಇಷ್ಟ. ಇಂಥ ಪ್ರಕರಣಗಳಲ್ಲಿ ನಾಯಿಯ ದಾಳಿಗೆ ಒಳಗಾಗಿರುವ ಮಕ್ಕಳಿಗೆ ಲೆಕ್ಕವೇ ಇಲ್ಲ. ಕೆಲವೇ ಪ್ರಕರಣಗಳಲ್ಲಿ ನಾಯಿಗಳು ಸುಮ್ಮನಿದ್ದ ಮಕ್ಕಳ ಮೇಲೆ ದಾಳಿ ಮಾಡುವುದು ನಡೆಯುತ್ತಿವೆಯಾದರೂ, ಹಲವು ಪ್ರಕರಣಗಳಲ್ಲಿ ಮಕ್ಕಳು ಕಲ್ಲು, ಕೋಲುಗಳಿಂದ ನಾಯಿಯನ್ನು ಹೊಡೆದು ಅವುಗಳನ್ನು ಕೆರಳಿಸುವುದನ್ನು ನೋಡಬಹುದಾಗಿದೆ.
ಇಂಥದ್ದೇ ಒಂದು ಭಯಾನಕ ಘಟನೆ ಸಿಸಿಟಿವಿಯೊಂದರಲ್ಲಿ ದಾಖಲಾಗಿದೆ. ಇದು ನಾಯಿಯ ವಿಷಯವಲ್ಲ. ಬದಲಿಗೆ ಬಸವನ ವಿಷಯ. ಹೋರಿಯೊಂದು ತನ್ನ ಪಾಡಿಗೆ ತಾನು ಹೋಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿರುವ ಈ ವಿಡಿಯೋದಲ್ಲಿ ನೋಡಬಹುದು. ಹೋರಿ ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕೋಲನ್ನು ತಂದು ಅದಕ್ಕೆ ಹಿಂಬದಿಯಿಂದ ಹೊಡೆದಿದ್ದಾನೆ. ಒಂದೆರಡು ಏಟನ್ನು ಹೋರಿ ತಡೆದುಕೊಂಡಿದೆ. ಆದರೆ ಮತ್ತೆ ಹೊಡೆದಾಗ ಅದು ಕೋಪದಿಂದ ಹಿಂದುರಿಗಿ ಆ ವ್ಯಕ್ತಿಯನ್ನು ಹಿಂಬಾಲಿಸಿದೆ. ಈಗ ಭಯಗೊಂಡ ವ್ಯಕ್ತಿ ಅದಕ್ಕೆ ಸಿಕ್ಕಾಪಟ್ಟೆ ಹೊಡೆದಿದ್ದಾನೆ. ಇನ್ನೂ ಕೆರಳಿದ ಹೋರಿ ತನ್ನ ಚೂಪಾದ ಕೋಡುಗಳಿಂದ ಆ ವ್ಯಕ್ತಿಯನ್ನು ಎತ್ತಿ ಬೀಸಾಡಿದೆ.
ಕಾರನ್ನು ಬೆನ್ನಟ್ಟಿ ಕೊನೆಗೂ ಕಂದಮ್ಮನ ಕಾಪಾಡಿದ ಹಸುಗಳು! ಮನ ಮಿಡಿಯುವ ವಿಡಿಯೋ ವೈರಲ್
ಅವನು ಕೂಗುವುದನ್ನು ಇದರಲ್ಲಿ ಕೇಳಬಹುದಾಗಿದೆ. ಅವನನ್ನು ಬೀಳಿಸಿದ ಹೋರಿ ಅದರ ಪಾಡಿಗೆ ಅದು ಹೊರಟು ಹೋಗಿದೆ. ಅಷ್ಟೊತ್ತಿಗೆ ಅಲ್ಲಿ ಒಬ್ಬ ನೀರನ್ನು ತುಂಬಲು ಬಂದಿದ್ದಾನೆ. ಆಗ ಆತ ಈ ವ್ಯಕ್ತಿ ಬಿದ್ದದ್ದನ್ನು ನೋಡಿ ಧಾವಿಸಿದ್ದಾನೆ. ಕೈಯನ್ನು ಮೇಲಕ್ಕೆ ಎತ್ತಿದಾಗ ಅದು ತಂತಾನೇ ಕೆಳಗೆ ಬಿದ್ದಿದೆ. ಬಹುಶಃ ಆ ವ್ಯಕ್ತಿ ಸತ್ತಿರಬಹುದು ಎಂದು ಈ ವಿಡಿಯೋ ನೋಡಿದರೆ ಎನ್ನಿಸುತ್ತದೆ. ಕೂಡಲೇ ಆ ವ್ಯಕ್ತಿ ಪಕ್ಕದ ಮನೆಯವರಿಗೆ ಕೂಗಿ ಕರೆದಿದ್ದಾನೆ. ಅಲ್ಲಿಗೆ ವಿಡಿಯೋ ಕಟ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೂರಾರು ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಪ್ರತಿಯೊಬ್ಬರೂ ಈ ವ್ಯಕ್ತಿಗೆ ತಕ್ಕ ಶಾಸ್ತಿ ಆಗಿದೆ ಎಂದು ಹೇಳುತ್ತಿದ್ದಾರೆ. ಸುಮ್ಮನೇ ಹೋಗುತ್ತಿರುವ ಬಸವನ ಕೆಣಕಿರುವುದು ಈ ವ್ಯಕ್ತಿಯ ತಪ್ಪು, ಸರಿಯಾದ ಶಾಸ್ತಿ ಮಾಡಿದೆ ಹೋರಿ ಎಂದೇ ಎಲ್ಲರೂ ಹೇಳುತ್ತಿದ್ದಾರೆ.
ಆದರೆ, ಆ ವ್ಯಕ್ತಿ ಮನೆಯಿಂದಲೇ ಕೋಲನ್ನು ತಂದಿದ್ದು ಏಕೆ? ಈ ಹೋರಿಯ ಮೇಲೆ ಆತನಿಗೆ ಯಾಕೆ ಸಿಟ್ಟಿತ್ತು? ಅದೇ ವೇಳೆ, ಈ ಹೋರಿಯ ಸಿಟ್ಟು ನೋಡಿದರೆ ಅದಕ್ಕೆ ಮೊದಲೇ ಆ ವ್ಯಕ್ತಿಯ ಮೇಲೆ ಇನ್ನಿಲ್ಲದ ಸಿಟ್ಟು ಇದ್ದಂತೆ ಕಾಣಿಸುತ್ತಿದೆ. ಈ ಘಟನೆ ಸಂಭವಿಸುವ ಮೊದಲು ಏನು ಆಗಿತ್ತು, ಆ ವ್ಯಕ್ತಿ ಮನೆಯಿಂದ ಹೊರಕ್ಕೆ ಬರುವಾಗಲೇ ಆತನ ಕೈಯಲ್ಲಿ ಕೋಲು ಇದ್ದುದು ನೋಡಿದರೆ ಹೋರಿಯನ್ನು ಹೊಡೆಯಲಿಕ್ಕೇ ಬಂದಿದ್ದ ಎನ್ನುವುದು ತಿಳಿಯುತ್ತದೆ. ಅಲ್ಲಿ ಏನು ಘಟನೆ ನಡೆದಿತ್ತು ಎನ್ನುವುದು ತಿಳಿದಿಲ್ಲ. ಆದರೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋದಿಂದ ಸುಮ್ಮನೇ ಹೋಗುತ್ತಿರುವ, ತನ್ನ ಪಾಡಿಗೆ ತಾನು ಮಲಗಿರುವ ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳನ್ನು ಕೆಣಕಬಾರದು ಎನ್ನುವುದಷ್ಟೇ ಹೇಳಲು ಸಾಧ್ಯವಾಗಿದೆ.
ಸೌಂದರ್ಯ ವೃದ್ಧಿಗೆ ನಾಗರಹಾವಿನ ಪಕೋಡಾ: ಒಂದಕ್ಕೆ ಒಂದು ಸಾವಿರ ರೂ! ಮೈ ಝುಂ ಎನ್ನೋ ವಿಡಿಯೋ ವೈರಲ್