ಅಂತರ ಕಾಯ್ದುಕೊಂಡಿದ್ದ ಪ್ರಿಯತಮೆಯನ್ನು ಮಾತನಾಡಲು ಕರೆಸಿದ ಬಳಿಕ ಆಕೆಯ ಜತೆಗೆ ಜಗಳ ತೆಗೆದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದ ಪ್ರಿಯಕರನನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಆ.6) : ಅಂತರ ಕಾಯ್ದುಕೊಂಡಿದ್ದ ಪ್ರಿಯತಮೆಯನ್ನು ಮಾತನಾಡಲು ಕರೆಸಿದ ಬಳಿಕ ಆಕೆಯ ಜತೆಗೆ ಜಗಳ ತೆಗೆದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದ ಪ್ರಿಯಕರನನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್‌ನ 2ನೇ ಹಂತದ ನಿವಾಸಿ ಸ್ನೇಹಾ ಶಿಕ್ತ ಚಟರ್ಜಿ (25) ಹಲ್ಲೆಗೆ ಒಳಗಾದವರು. ಆಕೆಯ ಪ್ರಿಯಕರ ಬಿಟಿಎಂ 2ನೇ ಹಂತದ ಸ್ಟ್ರಾಂಜೋ ಪಿಜಿ ನಿವಾಸಿ ರವಿಕುಮಾರ್‌ನನ್ನು (27) ಬಂಧಿಸಲಾಗಿದೆ. ಹಲ್ಲೆಯಿಂದ ಸ್ನೇಹಾ ತಲೆಗೆ ಗಂಭೀರ ಪೆಟ್ಟು ಬಿದ್ದು ನಿಮ್ಹಾನ್ಸ್ ಆಸ್ಪತ್ರೆ(Nimhans hospital)ಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇಡಿಗಾಗಿ ಎಕ್ಸ್ ಬಾಯ್‌ಫ್ರೆಂಡ್‌ಗೆ ಕ್ಯಾಶ್ ಆನ್ ಡೆಲಿವರಿ ಫುಡ್ ಆರ್ಡರ್ ಮಾಡಿದ ಅಂಕಿತಾ!
ಆರೋಪಿ ರವಿಕುಮಾರ್ ಮತ್ತು ಸ್ನೇಹ ಪಶ್ಚಿಮ ಬಂಗಾಳ ಮೂಲದವರು. ಒಂದು ವರ್ಷದ ಹಿಂದೆ ರವಿಕುಮಾರ್ ಇಂದಿರಾನಗರದ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಸ್ನೇಹಾ ಆ ಕಂಪನಿಗೆ ಕೆಲಸಕ್ಕೆ ಸೇರಿದ್ದಳು. ಸಹಜವಾಗಿ ಇಬ್ಬರು ಪರಿಚಯಗೊಂಡು ಸ್ನೇಹಿತರಾಗಿ, ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಸ್ನೇಹಾ ಬೇರೆ ಕಂಪನಿಗೆ ಕೆಲಸಕ್ಕೆ ಸೇರಿದ್ದರು. ರವಿಕುಮಾರ್ ಕರೆ ಮಾಡಿದಾಗ ಸರಿಯಾಗಿ ಸ್ಪಂದಿಸದೆ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ರವಿಕುಮಾರ್ ಆಕೆಯ ಮೇಲೆ ಕೋಪಗೊಂಡಿದ್ದ ಎನ್ನಲಾಗಿದೆ.
ಮಾತನಾಡಲು ಕರೆಯಿಸಿ ಹಲ್ಲೆ
ಆ.2ರ ಮುಂಜಾನೆ 3ರ ಸುಮಾರಿಗೆ ಪ್ರೇಯಸಿ ಸ್ನೇಹಗೆ ಕರೆ ಮಾಡಿದ್ದ ರವಿಕುಮಾರ್, ಪಿಜಿ ಬಳಿ ಬರುವಂತೆ ತಿಳಿಸಿದ್ದ. ಅದರಂತೆ ಸ್ನೇಹ ಪಿಜಿ ಬಳಿಗೆ ತೆರಳಿದ್ದಳು. ಆಗ ರವಿಕುಮಾರ್, ತನ್ನಿಂದ ಅಂತರ ಕಾಯ್ದುಕೊಳ್ಳಲು ಕಾರಣವೇನು? ಮೊಬೈಲ್ ಕರೆಗಳಿಗೆ ಏಕೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೋಪೋದ್ರಿಕ್ತನಾದ ರವಿಕುಮಾರ್, ಅಲ್ಲೇ ಇದ್ದ ಕಬ್ಬಿಣದ ರಾಡ್‌ನಿಂದ ಸ್ನೇಹ ತಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಬೆಂಗಳೂರಲ್ಲಿ ಲವರ್ಸ್‌ಗಳ ಕಾದಾಟ: ಹಿಗ್ಗಾಮುಗ್ಗಾ ಹೊಡೆದಾಡಿಕೊಂಡ ಪ್ರೇಮಿಗಳು..!
ಕುಸಿದು ಬಿದ್ದ ಸ್ನೇಹಳನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಸ್ನೇಹ ತಾಯಿ ಮಿಥು ಚಟರ್ಜಿ ನೀಡಿದ ದೂರಿನ ಮೇರೆಗೆ ಮೈಕೋ ಲೇಔಟ್ ಠಾಣೆ ಪೊಲೀಸರು ಕೊಲೆಗೆ ಯತ್ನ ಪ್ರಕರಣ ದಾಖಲಿಸಿ, ಆರೋಪಿ ರವಿಕುಮಾರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
