ಮಳವಳ್ಳಿ: ಪುಟ್ಟ ಬಾಲಕಿ ಮೇಲೆ ಕಾಮುಕ ಕಾಂತರಾಜು ಅತ್ಯಾಚಾರ, ಕೊಲೆ!
- ಪುಟ್ಟಬಾಲಕಿ ಮೇಲೆ ಅತ್ಯಾಚಾರ, ಹತ್ಯೆ
- ಈ ಕೊಲೆ ಸಮಾಜವೇ ತಲೆತಗ್ಗಿಸುವ ಸಂಗತಿ
- ಕಾಮುಕನಿಗೆ ಕಠಿಣ ಶಿಕ್ಷೆ ವಿಧಿಸಲು ನಾಗರಿಕರ ಒತ್ತಾಯ
ಸಿ.ಸಿದ್ದರಾಜು ಮಾದಹಳ್ಳಿ
ಮಳವಳ್ಳಿ (ಅ.13) : ಟ್ಯೂಷನ್‌ಗೆ ತೆರಳಿದ್ದ 10 ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿ ಅತ್ಯಾಚಾರಗೈದು ಕೊಲೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವ ಸಂಗತಿಯಾಗಿದೆ. ಕಾಮುಕ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಿ ಬಾಲಕಿ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.
10 ವರ್ಷದ ಬಾಲಕಿ ಮೇಲೆ ಎರಗಿದ 8 ಕಾಮುಕರು; ಇದರಲ್ಲಿ 7 ಮಂದಿ ಅಪ್ರಾಪ್ತರು!
ಟ್ಯೂಷನ್ ಸೆಂಟರ್‌ನಲ್ಲಿ ಮೇಲ್ವಿಚಾರಕನಾಗಿದ್ದ ಆರೋಪಿ ಕಾಂತರಾಜು ಪುಟ್ಟಬಾಲಕಿಯ ಮೇಲೆ ಅತ್ಯಾಚಾರಗೈದು ಬೆಳೆಯುವ ಸಿರಿ ಮೊಳಕೆಯಲ್ಲೇ ಚಿವುಟಿ ಹಾಕಿದಂತೆ ಬಾಲಕಿಯನ್ನು ಕೊಲೆ ಮಾಡಿ ಪೋಷಕರು ಜೀವವಿರುವ ತನಕ ಕೊರಗುವಂತೆ ಮಾಡಿದ್ದಾನೆ.
ಪಟ್ಟಣದ ಅಶ್ವಿನಿ ಮತ್ತು ಸುರೇಶ್‌ಕುಮಾರ್ ದಂಪತಿಗೆ ಓರ್ವ ಪುತ್ರಿ, ಪುತ್ರರಿದ್ದಾರೆ. ದಿವ್ಯ ಹಿರಿಯ ಪುತ್ರಿ. ಶಾಲೆಗೆ ದಸರಾ ರಜೆ ಇದ್ದ ಕಾರಣ ಜ್ಞಾನ ಕುಠೀರದ ಟ್ಯೂಷನ್‌ಗೆ ಪುತ್ರಿ ದಿವ್ಯ ಸಂಜೆ ವೇಳೆ ತೆರಳುತ್ತಿದ್ದಳು. ಆದರೆ, ಆರೋಪಿ ಕಾಂತರಾಜು ಮಂಗಳವಾರ ಸಂಜೆ ಬಾಲಕಿ ಟ್ಯೂಷನ್ ಬಗ್ಗೆ ವಿಚಾರಿಸಿದಾಗ ಬೆಳಗ್ಗೆಯೇ ಟ್ಯೂಷನ್ ಇರುವುದಾಗಿ ಹೇಳಿಕೆ ಕರೆಸಿಕೊಂಡು ಚಾಕೋಲೆಟ್ ಆಸೆ ತೋರಿಸಿ ಅತ್ಯಾಚಾರಗೈದು ನಂತರ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸರ ಜೊತೆಯಲ್ಲಿ ಇದ್ದ ಆರೋಪಿ:
ಪಟ್ಟಣದ ಮೈಸೂರು ರಸ್ತೆ ಜ್ಞಾನ ಕುಠೀರ ಸೆಂಟರ್‌ಗೆ ಟ್ಯೂಷನ್‌ಗೆ ಬಂದ ಬಾಲಕಿ ವಾಪಸ್ ಬಾರದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿದ್ದರು. ಸಂಜೆಯಾಗುತ್ತಿದ್ದಂತೆ ದಿವ್ಯಾ ಶವವಾಗಿ ಪತ್ತೆಯಾದರು. ಪೊಲೀಸರು ಹಲವು ರೀತಿಯಲ್ಲಿ ತನಿಖೆ ಕೈಗೊಂಡ ವೇಳೆ ಪೊಲೀಸರ ಜೊತೆಯಲ್ಲಿಯೇ ಇದ್ದ ಆರೋಪಿ ಕಾಂತರಾಜು ಬಾಲಕಿಯ ಹುಡುಕಾಟ ನಡೆಸಲು ಮುಂದಾಗಿದ್ದನು ಎಂದು ಗೊತ್ತಾಗಿದೆ.
ಪೋಷಕರಿಗೆ ಕರೆ ಮಾಡಿ ನಿಮ್ಮ ಪುತ್ರಿ ಇನ್ನೂ ಬಂದಿಲ್ವ ಎಂದು ವಿಚಾರಿಸುವ ಜೊತೆಗೆ ಪೋಷಕರ ಜೊತೆಯಲ್ಲಿಯೇ ಸಿಸಿ ಕ್ಯಾಮೆರಾ ಹುಟುಕಾಟ ನಡೆಸಿದ್ದನು ಎನ್ನಲಾಗಿದೆ. ಪೊಲೀಸರಿಗೆ ಯಾರೋ ಮೂರು ಮಂದಿ ಯುವಕರು ಟ್ಯೂಷನ್ ಬಳಿ ಕುಳಿತಿದ್ದರು ಎಂದು ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾನೆ.
ಆರೋಪಿ ಮೊಬೈಲ್ ಪರಿಶೀಲಿಸಿದ ಪೊಲೀಸರು:
ನಾಗರಾಜು ಎಂಬುವವರು ಕರೆ ಮಾಡಿ ಸಂಪಿನಲ್ಲಿ ಮೃತ ದೇಹ ಇರುವ ಬಗ್ಗೆ ಮಾಹಿತಿ ನೀಡಿರುವುದು ಕಾಲ… ರೇಕಾರ್ಡ್ ಬಗ್ಗೆ ಕಾಂತರಾಜು ಪೊಲೀಸರಿಗೆ ತಿಳಿಸಿ ಮೊಬೈಲ… ನೀಡಿದಾಗ ಪೊಲೀಸರು ಆತನ ಮೊಬೈಲ್ ಪರಿಶೀಲಿಸಿದ್ದಾರೆ. ಈ ವೇಳೆ ಬಾಲಕಿಗೆ ಕಾಲ… ಮಾಡಿರುವುದು ಕೂಡ ಕಂಡು ಬಂದಿದೆ. ಮೊಬೈಲ್ ರೆಕಾರ್ಡ್‌ನಲ್ಲಿ ಸರ್ ಟ್ಯೂಷನ್ ಎಷ್ಟುಗಂಟೆಗೆ ಎಂದಾಗ 5 ಗಂಟೆಗೆ ಎಂದು ಹೇಳಿ, ನಂತರ ಶಾಲೆ ರಜೆನಾ ಎಂದು ಕೇಳಿದಾಗ ಅ.17ರ ತನಕ ರಜೆ ಎಂದು ಹೇಳಿದ ಬಾಲಕಿಗೆ ಬೆಳಗ್ಗೆ 11 ಗಂಟೆಗೆ ಟ್ಯೂಷನ್ ಬಾ ಎಂದು ಕರೆದಿರುವುದು ಮೊಬೈಲ… ಕಾಲ… ರೆಕಾರ್ಡ್‌ನಲ್ಲಿ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿ ಕಾಂತರಾಜನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆ ನಡೆಸಿದಾಗ ನಾನೇ ಬಾಲಕಿಯನ್ನು ಅತ್ಯಾಚಾರಗೈದು ನಂತರ ಕೊಲೆ ಮಾಡಿ ನಾಗರಾಜು ಎಂಬುವವರ ನಿರ್ಮಾಣ ಹಂತದ ಮನೆಯ ಕಟ್ಟಡದ ನೀರಿನ ಸಂಪ್‌ಗೆ ಬಿಸಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.
ಎಸ್ಪಿ ಭೇಟಿ, ಪರಿಶೀಲನೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಘಟನೆ ನಡೆದ ನಂತರ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಸಂಶಯಪಟ್ಟವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿ ಎಲ್ಲ ರೀತಿಯಲ್ಲಿ ತನಿಖೆ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ವಿವಿಧ ಸಂಘಟನೆಗಳಿಂದ ಪ್ರತಿಭಟನೆ:
ಬಾಲಕಿ ಅತ್ಯಾಚಾರ, ಹತ್ಯೆ ಖಂಡಿಸಿ ಕುರುಬರ ಸಂಘ, ಜನವಾದಿ ಮಹಿಳಾ ಸಂಘಟನೆ, ಕೃಷಿಕೂಲಿಕಾರರ ಸಂಘ, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ದಿವ್ಯರ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ಒಳಪಡಿಸಬೇಕು. ಆರೋಪಿಯನ್ನು ತಮ್ಮ ವಶಕ್ಕೆ ನೀಡಿದರೆ ತಕ್ಕ ಪಾಠ ಕಲಿಸುವುದಾಗಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಪಾಲ್ಗೊಂಡು ಮಾತನಾಡಿ, ತಾಲೂಕು ಆಡಳಿತ ಸಂಪೂರ್ಣ ಕುಸಿದಿದೆ. ಪಟ್ಟಣ ಹಾಗೂ ತಾಲೂಕಿನಾದ್ಯಂತ ಅಕ್ರಮಗಳು, ಕೊಲೆ, ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಎಲ್ಲೆಡೆ ಗಾಂಜಾ ಮಾರಾಟವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ಜೋರಾಗಿದೆ. ಪೊಲೀಸರು ತಡೆಯುವ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.
ಪಟ್ಟಣದ ಲಾಡ್ಜ್‌ಗಳಲ್ಲಿ ದಂಧೆಗಳು ನಡೆಯುತ್ತಿವೆ. ಪುರಠಾಣೆ ಇನ್ಸ್‌ಪೆಕ್ಟರ್‌ರೊಬ್ಬರು ಟೌನ್‌ನಿಂದ ಗ್ರಾಮಾಂತರ ಠಾಣೆಗೆ, ಗ್ರಾಮಾಂತರ ಠಾಣೆಯಿಂದ ಟೌನ್‌ಗೆ ಮೂರು ಬಾರಿ ವರ್ಗವಣೆ ಮಾಡಿಸಿಕೊಂಡು ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸರ್ಕಲ್ ಇನ್ಸ್‌ಪೆಕ್ಟರ್ ರಾಜೇಶ್ ವಿರುದ್ಧ ಕಿಡಿಕಾರಿದರು.
ಮಕ್ಕಳ ಅತ್ಯಾಚಾರಿಗೆ ಸಾರ್ವಜನಿಕ ಗಲ್ಲು ಶಿಕ್ಷೆ, ಮಸೂದೆ ಪಾಸ್!
ಪಾರ್ಥಿವ ಶರೀರ ಮೆರವಣಗೆ:
ಬಾಲಕಿ ಮೃತದೇಹ ಪಟ್ಟಣಕ್ಕೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿದರು. ಪಟ್ಟಣದ ಅನಂತ್‌ರಾಂ ವೃತ್ತಕ್ಕೆ ಪಾರ್ಥಿವ ಶರೀರ ತರುತ್ತಿದ್ದಂತೆ ಮೃತರ ಕುಟುಂಬಸ್ಥರು, ಸಂಬಂಧಿಕರು ಸೇರಿದಂತೆ ಸಾರ್ವಜನಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಟ್ಯೂಷನ್‌ಗೆ ಬಂದ ಪುಟ್ಟಬಾಲಕಿ ಮೇಲೆ ವ್ಯಕ್ತಿ ಹೀನಕೃತ್ಯ ನಡೆಸಿ ಕೊಲೆಗೈದಿರುವುದನ್ನು ಕುರುಬರ ಸಂಘ ಖಂಡಿಸುತ್ತದೆ. ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಘಟನೆ ಮರುಕಲಿಸದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು.
ಪುಟ್ಟಬಸವಯ್ಯ, ಉಪಾಧ್ಯಕ್ಷ, ಅಖಿಲ ಕರ್ನಾಟಕ ರಾಜ್ಯ ಕುರುಬರ ಸಂಘ,
ಬಾಲಕಿ ಅತ್ಯಾಚಾರಗೈದು ಕೊಲೆ ಮಾಡಿರುವುದು ತಲೆ ತಗ್ಗಿಸುವ ವಿಚಾರ. ಆರೋಪಿಯನ್ನು ಬಂಧಿಸಲಾಗಿದೆ. ಕೃತ್ಯ ಎಸಗಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಘಟನೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೃತ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಜಿಲ್ಲಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
ಡಾ.ಕೆ.ಅನ್ನದಾನಿ, ಶಾಸಕರು, ಮಳವಳ್ಳಿ
ಪುಟ್ಟಕಂದಮ್ಮನ ಮೇಲೆ ಇಂತಹ ಕೃತ್ಯ ನಡೆದಿರುವುದು ಖಂಡನೀಯ. ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಹಾಳಾಗಿದೆ. ಮತ್ತೆ ಇಂತಹ ಘಟನೆಗಳು ಜರುಗದಂತೆ ಕ್ರಮ ವಹಿಸಬೇಕು.
- ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಸಚಿವರು,