10 ವರ್ಷದಿಂದ ಬೆಂಗಳೂರಲ್ಲಿ ನೆಲೆಸಿದ್ದ ಬಾಂಗ್ಲಾ ಗುಜರಿ ವ್ಯಾಪಾರಿ ಬಂಧನ
ಕಳೆದ 10 ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ದೇಶದ ಪ್ರಜೆಯನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಅ.29): ಕಳೆದ 10 ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ದೇಶದ ಪ್ರಜೆಯನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿ ಸಮೀಪದ ಚಿಕ್ಕನಹಳ್ಳಿ ನಿವಾಸಿ ರಂಜಾನ್ ಷೇಕ್(38) ಬಂಧಿತ. ಈತ ಪಶ್ಚಿಮ ಬಂಗಾಳದಲ್ಲಿ ಜನಿಸಿರುವುದಾಗಿ ನಕಲಿ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ. ರಾಜ್ಯ ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ರಂಜಾನ್ ಷೇಕ್ ಈ ಹಿಂದೆ ಬಾಂಗ್ಲಾ ದೇಶದಲ್ಲಿ ಯುವತಿಯನ್ನು ಮದುವೆಯಾಗಿದ್ದಾನೆ. ಬಳಿಕ ಆಕೆಯನ್ನು ಬಾಂಗ್ಲಾ ದೇಶದಲ್ಲಿಯೇ ಬಿಟ್ಟು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ. ಈ ಸಂಬಂಧ ಆತನ ಪತ್ನಿ ಬಾಂಗ್ಲಾ ದೇಶದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.ಯುವತಿ ಜತೆ ಮದುವೆ,
ವಿಜಯಪುರ ಬಳಿಕ ಧಾರವಾಡ ರೈತರಿಗೂ ಬಿಗ್ ಶಾಕ್; ಪೂರ್ವಜರಿಂದ ಬಂದ ಭೂಮಿಗೂ ವಕ್ಫ್ ಆಸ್ತಿ ಹೆಸರು!
ಗುಜರಿ ವ್ಯಾಪಾರ ಶುರು:
ಆರೋಪಿಯು ಅಕ್ರಮವಾಗಿ ಭಾರತಕ್ಕೆ ಬಂದು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಮತ್ತೊಬ್ಬ ಯುವತಿಯನ್ನು ಮದುವೆಯಾಗಿ ಬೆಂಗಳೂರಿನ ಚಿಕ್ಕನಹಳ್ಳಿಯಲ್ಲಿ ನೆಲೆಸಿದ್ದ. ಗುಜರಿ ವ್ಯಾಪಾರ ಮಾಡಿಕೊಂಡು ಜೀವನ ದೂಡುತ್ತಿದ್ದ. ಈ ಹಿಂದೆ ಕಾರ್ಮಿಕನೊಬ್ಬನ ಆತ್ಮಹತ್ಯೆ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(ಎಫ್‌ಆರ್‌ಆರ್‌ಓ)ಗೂ ಮಾಹಿತಿ ನೀಡಲಾಗಿತ್ತು. ಬಳಿಕ ಆರೋಪಿಯು ಜೈಲಿನಿಂದ ಬಿಡುಗಡೆಗೊಂಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ವೈದ್ಯಕೀಯ ಸೀಟು ಕೊಡಿಸೋದಾಗಿ 8 ವಿದ್ಯಾರ್ಥಿಗಳಿಗೆ ಬರೋಬ್ಬರಿ ₹6.38 ಕೋಟಿ ವಂಚನೆ!
ಆರೋಪಿ ರಂಜಾನ್ ಷೇಕ್ ನಗರದಲ್ಲಿ ಪತ್ನಿ ಜತೆಗೆ ನೆಲೆಸಿದ್ದ. ಈತನ ಪತ್ನಿ ಬಾಂಗ್ಲಾ ಪ್ರಜೆಯೇ ಅಥವಾ ಭಾರತೀಯ ಪ್ರಜೆಯೇ ಎಂಬುದು ಹೆಚ್ಚಿನ ತನಿಖೆಯಿಂದ ತಿಳಿದು ಬರಲಿದೆ. ಸದ್ಯಕ್ಕೆ ಆರೋಪಿ ರಂಜಾನ್ ಷೇಕ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂರು ದಿನ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.