ಬೆಂಗಳೂರಿನ 94 ವರ್ಷದ ಹಿರಿಯ ಸಂಶೋಧಕರೊಬ್ಬರನ್ನು ಸಿಬಿಐ ಮತ್ತು ಬಳ್ಳಾರಿ ಪೊಲೀಸರ ಹೆಸರಿನಲ್ಲಿ ಸಂಪರ್ಕಿಸಿದ ಸೈಬರ್ ವಂಚಕರು, ಡಿಜಿಟಲ್ ಬಂಧನಕ್ಕೊಳಪಡಿಸಿದ್ದಾರೆ. ಮಾನವ ಕಳ್ಳಸಾಗಣೆ ಪ್ರಕರಣದ ನಕಲಿ ಆರೋಪ ಹೊರಿಸಿ, ಬೆದರಿಸಿ ಹಂತ ಹಂತವಾಗಿ 4.9 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿರುವ ಘಟನೆ ತಡವಾಗಿ ವರದಿಯಾಗಿದೆ.

ಬೆಂಗಳೂರು: ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿ ಬೆಳಗಾವಿ ವೃದ್ಧ ಉದ್ಯಮಿಯಿಂದ 15 ಕೋಟಿ ರು. ಸುಲಿಗೆ ಕೃತ್ಯ ಮರೆಯುವ ಮುನ್ನವೇ ರಾಜಧಾನಿಯಲ್ಲಿ 94 ವರ್ಷದ ಹಿರಿಯ ಸಂಶೋಧಕರೊಬ್ಬರನ್ನು ಸಿಬಿಐ-ಬಳ್ಳಾರಿ ಪೊಲೀಸರ ಹೆಸರಿನಲ್ಲಿ ಕಿಡಿಗೇಡಿಗಳು ಡಿಜಿಟಲ್ ಬಂಧನಕ್ಕೊಳಪಡಿಸಿ 4.9 ಕೋಟಿ ರು. ವಸೂಲಿ ಮಾಡಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ವಿಕ್ಟೋರಿಯಾ ರಸ್ತೆ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಹಿರಿಯರು ಹಣ ಕಳೆದುಕೊಂಡಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಮಾನವ ಕಳ್ಳ ಸಾಗಾಣಿಕೆ ಪ್ರಕರಣದ ತನಿಖೆ ಹೆಸರಿನಲ್ಲಿ ಸಂತ್ರಸ್ತರಿಗೆ ಬೆದರಿಸಿ ಸುಲಿಗೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಸೋಗಿನಲ್ಲಿ ಬೆಳಗಾವಿ ಉದ್ಯಮಿಗೆ ಬೆದರಿಸಿ 15 ಕೋಟಿ ರು. ಹಣವನ್ನು ಸೈಬರ್ ದುರುಳರು ವಂಚಿಸಿದ್ದರು. ಈಗ ಮತ್ತೊಬ್ಬ ಹಿರಿಯ ನಾಗರಿಕರು ಸೈಬರ್ ವಂಚನೆಗೆ ತುತ್ತಾಗಿದ್ದಾರೆ.

ವಂಚನೆಯ ವಿವರ: 

ತಮ್ಮ ಪತ್ನಿ ಜತೆ ಹಿರಿಯ ಸಂಶೋಧಕರು ನೆಲೆಸಿದ್ದಾರೆ. ಫೆ.12 ರಂದು ಅವರ ಮನೆಯ ದೂರವಾಣಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತನ್ನನ್ನು ಬೆಸ್ಕಾಂ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ವಿರುದ್ಧ ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ಸಂಬಂಧ ಪ್ರಕರಣ ದಾಖಲಾಗಿದ್ದು, ನಿಮಗೆ ಪೊಲೀಸ್ ಇನ್ಸ್‌ಪೆಕ್ಟರ್ ಕರೆ ಮಾಡುತ್ತಾರೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ಕೆಲ ಹೊತ್ತಿನ ನಂತರ ಸಂದೀಪ್‌ ರಾವ್ ಎನ್ನುವ ಮತ್ತೊಬ್ಬ ವ್ಯಕ್ತಿ ಮೊಬೈಲ್ ಸಂಖ್ಯೆ:70223200069 ರಿಂದ ಕರೆ ಮಾಡಿ ನಾವು ಸಿಬಿಐ ಅಧಿಕಾರಿಗಳು ಎಂದಿದ್ದಾನೆ. ಈ ದೂರನ್ನು ಸಿಬಿಐಗೆ ವರ್ಗಾಯಿಸುತ್ತಿರುವುದಾಗಿ ತಿಳಿಸಿ, ಸಂತ್ರಸ್ತರಿಂದ ಆಧಾರ್‌ ಕಾರ್ಡ್ ಮಾಹಿತಿಯನ್ನು ವಾಟ್ಸಪ್ ಮೂಲಕ ಕಳುಹಿಸುವಂತೆ ಸೂಚಿಸಿದ್ದಾನೆ. ನಂತರ ವಾಟ್ಸಪ್ ಮೂಲಕ ನಕಲಿ ಎಫ್‌ಐಆರ್‌ ಅನ್ನು ಕಳುಹಿಸಿದ್ದಾನೆ. ತರುವಾಯ (+9384538542, +8790619580, +8438454683, 9652706938, 8945570794) ವಾಟ್ಸಪ್ ಮೂಲಕ ವೀಡಿಯೋ ಕರೆ ಮಾಡಿ ಪೊಲೀಸರ ರೀತಿ ಸಮವಸ್ತ್ರ ಧರಿಸಿ ಸಿಐಬಿ ಅಧಿಕಾರಿ ಎಂಬಾತ ಕರೆ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಹಂತ ಹಂತವಾಗಿ ₹4.9 ಕೋಟಿ ಪೀಕಿದರು!

ನಿಮ್ಮನ್ನು ಡಿಜಿಟಲ್‌ ಅರೆಸ್ಟ್ ಮಾಡಿದ್ದು ನೀವು ಯಾರ ಜೊತೆಯು ಮಾತನಾಡಬಾರದು ಮತ್ತು ವಾಟ್ಸಪ್‌ನಲ್ಲಿ ಪ್ರತಿ ಮೂರು ಗಂಟೆಗೊಮ್ಮೆ ನಾವು ಕಳುಹಿಸುವ ಮೆಸೇಜ್‌ಗೆ ಪ್ರತಿಕ್ರಿಯಿಸುವಂತೆ ಕಿಡಿಗೇಡಿ ತಾಕೀತು ಮಾಡಿದ್ದಾನೆ. ಅಲ್ಲದೆ ನಿಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವು ತುಂಬಾ ಗಂಭೀರವಾಗಿದೆ. ನಿಮ್ಮ ಹೆಸರನ್ನು ಕೈಬಿಡಲು ಹಣ ಕೊಡಬೇಕು ಎಂದು ಬೆದರಿಸಿದ್ದಾನೆ. ಈ ಮಾತಿಗೆ ಹೆದರಿದ ಅವರಿಂದ ಹಂತ ಹಂತವಾಗಿ 4.9 ಕೋಟಿ ರು. ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಹೇಗೆಲ್ಲಾ ವಂಚನೆ ಮಾಡಿದ್ರು ಗೊತ್ತಾ?

-ಕಳೆದ ಫೆ.12 ರಂದು ಹಿರಿಯ ಸಂಶೋಧಕರ ಮನೆಯ ದೂರವಾಣಿಗೆ ಅಪರಿಚಿತನಿಂದ ಕರೆ

- ತನ್ನನ್ನು ಬೆಸ್ಕಾಂ ಸಿಬ್ಬಂದಿ ಎಂದೇಳಿಕೊಂಡಿದ್ದು ನಿಮ್ಮ ವಿರುದ್ಧ ಬಳ್ಳಾರಿಯಲ್ಲಿ ಕೇಸು ದಾಖಲಾಗಿದೆ

- ನಿಮಗೆ ಪೊಲೀಸ್ ಇನ್ಸ್‌ಪೆಕ್ಟರ್ ಕರೆ ಮಾಡುತ್ತಾರೆ ಎಂದು ಕರೆಯನ್ನು ಸ್ಥಗಿತಗೊಳಿಸಿದ್ದಾನೆ

- ಕೆಲ ಹೊತ್ತಿನ ಬಳಿಕ ಸಂದೀಪ್‌ ರಾವ್ ಎಂಬ ಮತ್ತೊಬ್ಬ ಕರೆ ಮಾಡಿ ನಾವು ಸಿಬಿಐ ಅಧಿಕಾರಿಗಳೆಂದಿದ್ದಾನೆ

- ನಿಮ್ಮನ್ನು ಡಿಜಿಟಲ್‌ ಅರೆಸ್ಟ್ ಮಾಡಿದ್ದು ನೀವು ಯಾರ ಜೊತೆ ಮಾತನಾಡಬಾರದೆಂದು ಬೆದರಿಸಿದ್ದಾರೆ

-ಬಳಿಕ 3 ಗಂಟೆಗೊಮ್ಮೆ ನಾವು ಕಳುಹಿಸುವ ಮೆಸೇಜ್‌ಗೆ ಪ್ರತಿಕ್ರಿಯಿಸುವಂತೆ ತಾಕೀತು ಮಾಡಿದ್ದಾನೆ

-ನಂತರ ಹಂತ ಹಂತವಾಗಿ ಹೆದರಿದ ವೃದ್ಧನಿಂದ 4.9 ಕೋಟಿ ಹಣವನ್ನು ಸುಲಿಗೆ ಮಾಡಿದ್ದಾರೆ