*  ಕೊಲೆ ಕೇಸೊಂದರಲ್ಲಿ ಜೈಲು ಸೇರಿದ್ದ ರೌಡಿ ಪತ್ನಿಯೊಂದಿಗೆ ಆಟೋ ಚಾಲಕನಿಗೆ ಅಕ್ರಮ ಸಂಬಂಧ*  ಆತನ ಕೊಲೆಗೆ ಜೈಲಿಂದಲೇ ಸೂಚನೆ*  ಮೈಸೂರು ಬಳಿ ಸಮಾಧಿ ಸಿದ್ಧಪಡಿಸಿ ಬಳಿಕ ಆಟೋ ಚಾಲಕನ ಅಪಹರಣ 

ಬೆಂಗಳೂರು(ಮಾ.20): ಕೊಲೆ ಪ್ರಕರಣದಲ್ಲಿ(Murder Case) ಹಿರಿಯ ಮಗ ಜೈಲು ಸೇರಿದ ಬಳಿಕ ಸೊಸೆಯ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಆಟೋ ಚಾಲಕನ ಕೊಲೆಗೆ ಯತ್ನಿಸಿದ್ದ ರೌಡಿಯೊಬ್ಬನ ತಂದೆ-ತಾಯಿ ಹಾಗೂ ಕಿರಿಯ ಸೋದರ ಸೇರಿದಂತೆ 9 ಮಂದಿ ಕಿಡಿಗೇಡಿಗಳು ಸಿಸಿಬಿ(CCB) ಬಲೆಗೆ ಬಿದ್ದಿದ್ದಾರೆ.

ಲಗ್ಗೆರೆ ಸವಿತಾ, ಆಕೆಯ ಪತಿ ಸತೀಶ, ಪುತ್ರ ವಿನಯ್‌, ರಘು, ಬಾಲರಾಜ್‌, ಹರೀಶ್‌, ದರ್ಶನ್‌, ವಿನಯ್‌ ಹಾಗೂ ನವೀನ್‌ ಬಂಧಿತರಾಗಿದ್ದು, ಆರೋಪಿಗಳಿಂದ ಮೊಬೈಲ್‌ಗಳು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಆಟೋ ಚಾಲಕ ಗಿರೀಶ್‌ನನ್ನು ಅಪಹರಿಸಿ(Kindnap) ಆರೋಪಿಗಳು(Accused) ಕೊಲೆಗೆ ಯತ್ನಿಸಿದ್ದರು.

Minor Girl Rape in Pune ಅಪ್ಪ, ಅಣ್ಣ, ಅಜ್ಜ, ಅಂಕಲ್ ಎಲ್ಲರಿಂದಲೂ ಪುಟ್ಟ ಹುಡುಗಿಯ ಮೇಲೆ ರೇಪ್!

ಈ ಬಗ್ಗೆ ಅಪಹೃತನ ಸೋದರ ನೀಡಿದ ದೂರಿನ ಮೇರೆಗೆ ಸಿಸಿಬಿ ಸಂಘಟಿತ ಅಪರಾಧ ದಳದ (OCW) ಎಸಿಪಿ ಎಚ್‌.ಎನ್‌.ಧರ್ಮೇಂದ್ರ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆಟೋ ಚಾಲಕನನ್ನು ರಕ್ಷಿಸಿದ್ದಲ್ಲದೆ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಡಿ ತೋಡಿಸಿದ್ದರು:

12 ವರ್ಷಗಳ ಹಿಂದೆ ಲಗ್ಗೆರೆ ರೌಡಿ ಮಣಿ ಹಾಗೂ ಗಾರ್ಮೆಂಟ್ಸ್‌ ಉದ್ಯೋಗಿ ರೇಷ್ಮಾ ವಿವಾಹವಾಗಿದ್ದು, ದಂಪತಿಗೆ 7 ವರ್ಷದ ಮಗನಿದ್ದಾನೆ. ಮದುವೆ ಬಳಿಕ ಮಹಾಲಕ್ಷ್ಮಿ ಲೇಔಟ್‌ ಸಮೀಪದ ಮಾರುತಿ ನಗರದಲ್ಲಿ ಮಣಿ ಕುಟುಂಬ ನೆಲೆಸಿತ್ತು. ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಯಲ್ಲಿ ಮಣಿ ಸೋದರರು ತೊಡಗಿದ್ದು, ಈ ಹಿನ್ನೆಲೆಯಲ್ಲಿ ಸೋದರರ ಮೇಲೆ ಮಹಾಲಕ್ಷ್ಮಿ ಲೇಔಟ್‌ ಠಾಣೆಯಲ್ಲಿ ರೌಡಿಪಟ್ಟಿತೆರೆಯಲಾಗಿತ್ತು. 2017ರಲ್ಲಿ ವೈಯಕ್ತಿಕ ದ್ವೇಷದ ಕಾರಣಕ್ಕೆ ರೌಡಿ ಆಂಡ್ರೋಸ್‌ನನ್ನು ಮಣಿ ಸೋದರರು ಕೊಲೆ ಮಾಡಿದ್ದರು. ಈ ಕೃತ್ಯದಲ್ಲಿ ಮಣಿ ಮತ್ತು ಆತನ ಸೋದರ ರಾಕೇಶ್‌ ಜೈಲು ಸೇರಿದರೆ, ಅಪ್ರಾಪ್ತ ಕಾರಣಕ್ಕೆ ಆತನ ಮತ್ತೊಬ್ಬ ಕಿರಿಯ ಸೋದರ ವಿನಯ್‌ ಪಾರಾಗಿದ್ದ.

ಐದು ವರ್ಷಗಳಿಂದ ಪರಪ್ಪನ ಅಗ್ರಹಾರ ಕೇಂದ್ರದಲ್ಲಿರುವ ಮಣಿ, ಅಲ್ಲಿನಿಂದಲೇ ತನ್ನ ಸಹಚರರ ಮೂಲಕ ಕಾನೂನುಬಾಹಿರ ಕೃತ್ಯಗಳನ್ನು ಮುಂದುವರೆಸಿದ್ದಾನೆ. ಇತ್ತೀಚೆಗೆ ತನ್ನ ಪತ್ನಿ ಜತೆ ಆಟೋ ಚಾಲಕ ಗಿರೀಶ್‌ ಸ್ನೇಹ ಹೊಂದಿದ್ದ ಸಂಗತಿ ತಿಳಿದು ಮಣಿ ಕೆರಳಿದ್ದ. ಈ ವಿಚಾರವನ್ನು ತನ್ನ ಪೋಷಕರಿಗೆ ಜೈಲಿನಿಂದಲೇ(Jail) ಕರೆ ಮಾಡಿದ ತಿಳಿಸಿದ ಮಣಿ, ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಆಟೋ ಚಾಲಕನ ಹತ್ಯೆಗೆ ಸೂಚಿಸಿದ. ಆಗ ಮಣಿ ಕುಟುಂಬದವರು, ಗಿರೀಶ್‌ನನ್ನು ಅಪಹರಿಸಿ ಬಳಿಕ ಹತ್ಯೆಗೈದು ಮೈಸೂರಿನ ಸ್ನೇಹಿತನ ಊರಿನಲ್ಲಿ ಹೂತು ಹಾಕಲು ಸಂಚು ರೂಪಿಸಿದ್ದರು. 

ಸಬ್‌ಜೈಲ್ ಮುಖ್ಯದ್ವಾರದಿಂದಲೇ ಕೈದಿ ಪರಾರಿ: ಜೈಲಿನ ಮುಖ್ಯ ವೀಕ್ಷಕನ ಮೇಲೆ ಬಿತ್ತು ಕೇಸ್

ಅಂತೆಯೇ ಮೈಸೂರಿನಲ್ಲಿ(Mysuru) ಮೃತದೇಹ(Deadbody) ಹೂಳಲು ಗುಂಡಿಯನ್ನು ಗುರುವಾರ ರಾತ್ರಿ ತೊಡಿಸಿದ್ದ ಆರೋಪಿಗಳು, ಅಂದು ರಾತ್ರಿ ಪೂರ್ವ ನಿಯೋಜಿತದಂತೆ ಯಶವಂತಪುರದ ರೈಲ್ವೆ ನಿಲ್ದಾಣ ಸಮೀಪದಿಂದ ಗಿರೀಶ್‌ನನ್ನು ಅಪಹರಿಸಿದರು. ಬಳಿಕ ಲಗ್ಗೆರೆಯಲ್ಲಿರುವ ಆರೋಪಿ ಬಲರಾಜ್‌ ಗ್ಯಾರೇಜ್‌ನಲ್ಲಿ ಕೈ-ಕಾಲು ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಜೀವ ಉಳಿಸಿದ ಸ್ನೇಹಿತನ ಎಚ್ಚರಿಕೆ

ಗಿರೀಶ್‌ ಅಪಹರಣಕ್ಕೆ ಯತ್ನಿಸಿದ್ದ ಆರೋಪಿಗಳು ಗುರುವಾರ ಬೆಳಗ್ಗೆಯಿಂದಲೇ ಆತನಿಗೆ ಹುಡುಕಾಟ ನಡೆಸಿದ್ದರು. ಆಗ ಮಧ್ಯಾಹ್ನ ಯಶವಂತಪುರ ರೈಲ್ವೆ ನಿಲ್ದಾಣದ ಮುಂದಿನ ಆಟೋ ನಿಲ್ದಾಣ ಬಳಿ ಹೋಗಿ ಮಣಿ ಸೋದರ ವಿನಯ್‌ ಹಾಗೂ ಹರೀಶ್‌, ಗಿರೀಶ್‌ ಬಗ್ಗೆ ವಿಚಾರಿಸಿದ್ದರು. ಈ ಸಂಗತಿಯನ್ನು ಗಿರೀಶ್‌ಗೆ ಆತನ ಸ್ನೇಹಿತ ಕರೆ ಮಾಡಿ ತಿಳಿಸಿದ್ದ. ಕೂಡಲೇ ಎಚ್ಚೆತ್ತ ಗಿರೀಶ್‌, ಮನೆಗೆ ತೆರಳಿ ತನ್ನ ಅಣ್ಣನಿಗೆ ಮಣಿ ಕುಟುಂಬದವರು ತನ್ನನ್ನು ಹುಡುಕುತ್ತಿದ್ದಾರೆ. ನನಗೆ ಜೀವ ಭಯವಿದೆ ಎಂದು ಹೇಳಿದ್ದ. ರಾತ್ರಿ ಗಿರೀಶ್‌ ಅಪಹರಣ ವಿಚಾರ ತಿಳಿದ ತಕ್ಷಣವೇ ಆತನ ಸೋದರ, ಆರ್‌ಎಂಸಿ ಯಾರ್ಡ್‌ ಪೊಲೀಸರಿಗೆ ದೂರು ನೀಡಿ ಮಣಿ ಕುಟುಂಬದ ಮೇಲೆ ಶಂಕೆ ವ್ಯಕ್ತಪಡಿಸಿದ್ದ. ಈ ಮಾಹಿತಿ ತಿಳಿದ ಸಿಸಿಬಿ ತಂಡವು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಣ್ಣನ ಮಗನಿಗೆ ಹುಚ್ಚು ಹಿಡಿದಿದೆ ಎಂದ ಸವಿತಾ!

ಯಶವಂತಪುರದಿಂದ ಆಟೋದಲ್ಲಿ ಅಪಹರಿಸಿ ಲಗ್ಗೆರೆಗೆ ಗಿರೀಶ್‌ನನ್ನು ಕರೆತಂದಾಗ ಚೀರಾಟ ಕೇಳಿ ಸವಿತಾ ಮನೆಯ ನೆರೆಹೊರೆಯವರು ಹೊರ ಬಂದಿದ್ದಾರೆ. ಆಗ ಸವಿತಾ, ನಮ್ಮ ಅಣ್ಣನ ಮಗನಿಗೆ ಹುಚ್ಚು ಹಿಡಿದಿದೆ. ಚಿಕಿತ್ಸೆ ಸಲುವಾಗಿ ಮನೆಗೆ ಕರೆ ತಂದಿದ್ದೇವೆ ಎಂದಿದ್ದಳು. ಅಲ್ಲದೆ ಗಿರೀಶ್‌ಗೆ ಹಲ್ಲೆ ನಡೆಸುವ ವಿಡಿಯೋ ಹಾಗೂ ಫೋಟೋಗಳನ್ನು ಜೈಲಿನಲ್ಲಿದ್ದ ಮಣಿಗೆ ಆರೋಪಿಗಳು ವಾಟ್ಸ್‌ಆ್ಯಪ್‌ ಮಾಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.