ಬೆಂಗಳೂರು(ಮಾ.26): ತನ್ನ ಪ್ರೇಮಕ್ಕೆ ಅಡ್ಡಿ ಎಂಬ ಕಾರಣಕ್ಕೆ ಕೋಪಗೊಂಡು ಸುಪಾರಿ ಕೊಟ್ಟು ಪತಿಯನ್ನು ಕೊಲೆ ಮಾಡಿಸಿದ್ದ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿದಂತೆ 9 ಮಂದಿ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಿಲಕ್‌ನಗರದ ತಸ್ಲಿಂ ಬಾನು (29), ಆಕೆಯ ಪ್ರಿಯಕರ ಅಪ್ಸರ್‌ ಖಾನ್‌ (41) ಹಾಗೂ ಸುಪಾರಿ ಹಂತಕರಾದ ತಬ್ರೇಜ್‌ ಪಾಷ (26), ಸೈಯದ್‌ ವಸೀಂ (26), ವೆಂಕಟೇಶ್‌ (19), ಭೈರಸಂದ್ರದ ಭರತ್‌ (18), ಯುಗೇಂದ್ರ (19), ಚೇತನ್‌ (19), ಇಬ್ರಾಹಿಂ (19) ಹಾಗೂ ಮತ್ತೊಬ್ಬ ಅಪ್ರಾಪ್ತನನ್ನು ಬಂಧಿಸಲಾಗಿದೆ.

ನ್ಯೂ ಗುರಪ್ಪನಪಾಳ್ಯದ ಟಿಂಬರ್‌ ಗಲ್ಲಿ ಸಮೀಪ ಮಾ.19ರ ಸಂಜೆ 6.30ರಲ್ಲಿ ಮಹಮ್ಮದ್‌ ಶಫಿ ಮೇಲೆ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಬಳಿಕ ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಮೈಕೋ ಲೇಔಟ್‌ ಉಪವಿಭಾಗದ ಎಸಿಪಿ ಸುಧೀರ್‌ ಹೆಗಡೆ ಮತ್ತು ಇನ್‌ಸ್ಪೆಕ್ಟರ್‌ ನಟರಾಜ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಬೆಳಗಾವಿ; ಅನೈತಿಕ ಸಂಬಂಧ ಬಹಿರಂಗ, ವಿವಾಹಿತೆ ಮತ್ತು ಪ್ರಿಯಕರನಿಗೆ ವಿಚಿತ್ರ ಶಿಕ್ಷೆ

ಹನ್ನೊಂದು ವರ್ಷಗಳ ಹಿಂದೆ ಹಳೇ ಕಾರು ಮಾರಾಟದ ದಲ್ಲಾಳಿ ಶಫಿ ಹಾಗೂ ತಸ್ಲೀಂ ಭಾನು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ತಿಲಕ್‌ನಗರದ ಸಮೀಪ ಅವರು ನೆಲೆಸಿದ್ದರು. ಹೀಗಿರುವಾಗ ನ್ಯೂಗುರಪ್ಪನಪಾಳ್ಯ ಟಿಂಬರ್‌ ಗಲ್ಲಿ ಸಮೀಪ ‘ಸರ್ಕಾರ್‌ ಗ್ಲಾಸ್‌ ಆ್ಯಂಡ್‌ ಪ್ಲೇವುಡ್‌’ ಹೆಸರಿನ ಪೀಠೋಪಕರಣ ಮಾರಾಟ ಮಳಿಗೆಯನ್ನು ನಡೆಸುತ್ತಿದ್ದ ಅಪ್ಸರ್‌ ಖಾನ್‌ಗೆ ಎರಡು ವರ್ಷಗಳ ಹಿಂದೆ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾನು ಪರಿಚಯವಾಗಿದೆ. ಬಳಿಕ ಕ್ರಮೇಣ ಅವರಲ್ಲಿ ಆತ್ಮೀಯ ಒಡನಾಟ ಮೂಡಿ ಅನೈತಿಕ ಸಂಬಂಧಕ್ಕೆ ತಿರುಗಿದೆ. ಆದರೆ ಈ ವಿಚಾರ ಶಫಿಗೆ ಗೊತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಪ್ರೇಮಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ ಭಾನು, ಕೊನೆಗೆ ಪತಿ ಕೊಲೆಗೆ ಪ್ರಿಯಕರ ಜತೆ ಸೇರಿ ಸಂಚು ರೂಪಿಸಿದ್ದಾಳೆ. ಅಂತೆಯೇ ಶಫಿಯನ್ನು ಸ್ನೇಹದ ಬಲೆಗೆ ಬೀಳಿಸಿಕೊಂಡ ಅಪ್ಸರ್‌, ಬಳಿಕ ಶಫಿ ಪಾಲುದಾರಿಕೆಯಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಶುರು ಮಾಡಿದ್ದ. ಮೈಸೂರಿನಲ್ಲಿ ಭೂಮಿ ಖರೀದಿಗೆ ಶಫಿ 75 ಲಕ್ಷ ಬಂಡವಾಳ ತೊಡಗಿಸಿದ್ದ. ಅಪ್ಸರ್‌, ಶಫಿ ಕೊಲೆಗೆ ತಬ್ರೇಜ್‌ ಮತ್ತು ವಸೀಂನಿಗೆ 2 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಂತೆಯೇ ಮಾ.19ರಂದು ಭೂ ವ್ಯವಹಾರದ 5 ಲಕ್ಷ ಕಮೀಷನ್‌ ಕೊಡುವ ನೆಪದಲ್ಲಿ ತನ್ನ ಅಂಗಡಿ ಬಳಿಗೆ ಶಫಿಯನ್ನು ಅಪ್ಸರ್‌ ಕರೆಸಿಕೊಂಡಿದ್ದ. ಆಗ ಅಲ್ಲಿಗೆ ಬಂದ ಆತನ ಮೇಲೆ ಸುಪಾರಿ ಹಂತಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಸುದ್ದಗುಂಟೆಪಾಳ್ಯಠಾಣೆಗೆ ಮೃತನ ತಂದೆ ದೂರು ದಾಖಲಿಸಿದ್ದರು.

ಶಫಿ ಬಗ್ಗೆ ಮಾಹಿತಿ ಕೊಟ್ಟ ಪತ್ನಿ

ಪೂರ್ವ ಯೋಜಿತ ಸಂಚಿನಂತೆ ಶಫಿ ಮನೆ ಬಿಟ್ಟಕೂಡಲೇ ಅಪ್ಸರ್‌ ಖಾನ್‌ ಕರೆ ಮಾಡಿ ಭಾನು ಮಾಹಿತಿ ಕೊಟ್ಟಿದ್ದಳು. ಈ ಕೃತ್ಯದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಅಪ್ಸರ್‌ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಭಾನು ಪಾತ್ರವು ಬಯಲಾಯಿತು. ತನ್ನ ಪ್ರಿಯತಮೆಗೆ ‘ಎ’ ಗುರುತಿನ ಪೆಂಡೆಂಟ್‌ ಇರುವ ಚಿನ್ನದ ಸರ ಕೊಡಿಸಿದ್ದ. ಈ ಎಲ್ಲ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾಟ ಸಾಯದಿದ್ದಾಗ ಸುಪಾರಿ ಕೊಟ್ಟು ಹತ್ಯೆ

ಶಫಿ ಹತ್ಯೆ ಸಲುವಾಗಿ ಕೇರಳದಲ್ಲಿ ಮೂರ್ನಾಲ್ಕು ಬಾರಿ ಮಾಟ-ಮಂತ್ರ ಸಹ ಅಪ್ಸರ್‌ ಮಾಡಿಸಿದ್ದ. ಬಳಿಕ ಮಂತ್ರವಾದಿ ನೀಡಿದ್ದ ಬೂದಿ ತಂದು ಭಾನುಗೆ ಆತ ಕೊಟ್ಟಿದ್ದ. ಇದನ್ನು ಊಟ ಹಾಗೂ ಪಾನೀಯದಲ್ಲಿ ಮಿಶ್ರಣ ಮಾಡಿ ಪ್ರತಿ ದಿನ ಗಂಡನಿಗೆ ಆಕೆ ಕುಡಿಸುತ್ತಿದ್ದಳು. ಆದರೆ ಮಾಟ ಮಂತ್ರದಿಂದ ಆತ ಸಾಯದೆ ಹೋದಾಗ ಅವರು ಕೊಲೆಗೆ ಸುಪಾರಿ ಕೊಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.