*  ಬೆಂಗ್ಳೂರಲ್ಲಿ ಐವರ ಬಂಧನ*  80 ಕೆ.ಜಿ. ಅಂಬರ್‌ಗೀಸ್‌ ವಶ*  ಅಂಬರ್‌ಗ್ರೀಸ್‌ ಪ್ರಕರಣದ ಪತ್ತೆ ಹಚ್ಚಿದ ಸಿಸಿಬಿ ವಿಶೇಷ ವಿಚಾರಣಾ ದಳಕ್ಕೆ 1 ಲಕ್ಷ ಬಹುಮಾನ 

ಬೆಂಗಳೂರು(ಆ.11): ಸಮುದ್ರದಲ್ಲಿ ಪತ್ತೆಯಾಗುವ ಅಂಬರ್‌ಗೀಸ್‌ ಗಟ್ಟಿಯನ್ನು (ತಿಮಿಂಗಿಲದ ವಾಂತಿ) ಅಕ್ರಮವಾಗಿ ಮಾರಾಟ ಯತ್ನಿಸಿದ್ದ ಐವರನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು, ಬಂಧಿತರಿಂದ 80 ಕೋಟಿ ರು.ಮೌಲ್ಯದ ಅಂಬರರ್ಗೀಸ್‌ ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಮಜೀಬ್‌ ಪಾಷಾ, ಮಹಮ್ಮದ್‌ ಮುನ್ನಾ, ಗುಲಾಬ್‌ ಚಂದ್‌ ಅಲಿಯಾಸ್‌ ಗುಡ್ಡು, ಸಂತೋಷ ಹಾಗೂ ಜಗನ್ನಾಥಾಚಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ 80 ಕೆ.ಜಿ. ಅಂಬರ್‌ಗೀಸ್‌, ಬ್ರಿಟಿಷರ ಕಾಲದ ರೆಡ್‌ ಮರ್‌ಕ್ಯುರಿಯ 2 ತ್ರಾಮದ ಬಾಟಲ್‌, 1818ನೇ ಇಸವಿಯ ಸ್ಟೀಮ್‌ ಫ್ಯಾನ್‌ ಜಪ್ತಿ ಮಾಡಲಾಗಿದೆ. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.

ಅಂಬರ್‌ಗೀಸ್‌ ವಸ್ತುವು ಸಮುದ್ರಗಳಲ್ಲಿ ತಿಮಿಂಗಿಲ ಪ್ರಾಣಿಯ ವಾಂತಿಯಾಗಿದ್ದು, ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ವಿದೇಶಗಳಲ್ಲಿ ಈ ವಸ್ತುವಿಗೆ ಭಾರೀ ಬೇಡಿಕೆ ಇದೆ. ಬಾಗಲಗುಂಟೆ ಠಾಣಾ ವ್ಯಾಪ್ತಿಯ ಆರ್‌ಎಂಕೆ ಎಂಟರ್‌ಪ್ರೈಸಸ್‌ ಕಚೇರಿಯಲ್ಲಿ ಅಂಬರ್‌ಗ್ರೀಸ್‌ ಗಟ್ಟಿಎಂಬ ವಸ್ತು ಇದ್ದು, ಅದರ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲಾ ಕೆ.ಜಿ. ಒಂದು ಕೋಟಿ ರು. ಬೆಲೆ ಇದೆ ಎಂದು ಹೇಳಿ ಸಾರ್ವಜನಿಕರಿಗೆ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು. ಹಾಗೆಯೇ ಪ್ರಾಚೀನ ಕಾಲದ ವಸ್ತುಗಳನ್ನು ಕಾನೂನುಬಾಹಿರವಾಗಿ ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತು. 

ಕರ್ನಾಟಕದಿಂದ ತಂದಿದ್ದ 26 ಕೋಟಿ ರೂ. ತಿಮಿಂಗಿಲ ವಾಂತಿ ವಶಕ್ಕೆ

ಈ ಸುಳಿವು ಆಧರಿಸಿ ಸಿಸಿಬಿಯ ವಿಶೇಷ ವಿಚಾರಣಾ ದಳದ ಎಸಿಪಿ ಎನ್‌.ಹನುಮಂತರಾಯ ನೇತೃತ್ವದ ಇನ್ಸ್‌ಪೆಕ್ಟರ್‌ ಶಿವಪ್ರಸಾದ್‌ ತಂಡ ದಾಳಿ ನಡೆಸಿ ಬಂಧಿಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಬಂಧಿತ ಐವರು ಕೂಲಿ ಕೆಲಸಗಾರರಾಗಿದ್ದು, ಇವರಿಗೆ ಹಣದಾಸೆ ತೋರಿಸಿ ಅಂಬಗ್ರೀಸ್‌ ಮಾರಾಟ ಕೃತ್ಯದಲ್ಲಿ ದುಷ್ಕರ್ಮಿಗಳು ಬಳಸಿಕೊಂಡಿದ್ದಾರೆ.

ದಾಳಿ ವೇಳೆ ಪ್ರಕರಣದ ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದಾನೆ. ಆತ ಪತ್ತೆಯಾದ ಬಳಿಕ ಅಂಬರ್‌ ಗ್ರೀಸ್‌ ಎಲ್ಲಿಂದ ತರಲಾಯಿತು ಎಂಬುದು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಗೇನು ಗೊತ್ತಿಲ್ಲ. ಕೂಲಿ ಕೆಲಸವಿದೆ ಎಂದು ಹೇಳಿ ನಮ್ಮ ಕಚೇರಿಗೆ ಕರೆಸಿಕೊಂಡಿದ್ದರು ಎಂದು ವಿಚಾರಣೆ ವೇಳೆ ಐವರು ಆರೋಪಿಗಳು ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

1 ಲಕ್ಷ ಬಹುಮಾನ:

ಅಂಬರ್‌ಗ್ರೀಸ್‌ ಪ್ರಕರಣದ ಪತ್ತೆ ಹಚ್ಚಿದ ಸಿಸಿಬಿ ವಿಶೇಷ ವಿಚಾರಣಾ ದಳದ ಕಾರ್ಯವನ್ನು ಶ್ಲಾಘಿಸಿದ ಆಯುಕ್ತ ಕಮಲ್‌ ಪಂತ್‌ ಅವರು, ತನಿಖಾ ತಂಡಕ್ಕೆ ಒಂದು ಲಕ್ಷ ರು. ನಗದು ಬಹುಮಾನ ಘೋಷಿಸಿದ್ದಾರೆ.