ಖಾಸಗಿ ಕಂಪನಿಯ ಪ್ರತಿನಿಧಿಗಳು ಎಂದು ನಗರಕ್ಕೆ ಬಂದಿದ್ದ ವಂಚಕರು, ನಗರ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ, ಮಾಹಿತಿ ಆಧರಿಸಿ ಪೊಲೀಸರ ದಾಳಿ, ರೈಸ್‌ಪುಲ್ಲಿಂಗ್‌ ಯಂತ್ರ, ಮೊಬೈಲ್‌ ಜಪ್ತಿ. 

ಬೆಂಗಳೂರು(ಜ.01): ಹಣ ದ್ವಿಗುಣಗೊಳಿಸುವ (ರೈಸ್‌ ಫುಲ್ಲಿಂಗ್‌) ಯಂತ್ರವೆಂದು ಹೇಳಿ ಖಾಸಗಿ ಕಂಪನಿಯ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ವಂಚಿಸಲು ಯತ್ನಿಸಿದ್ದ ಎಂಟು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಂಗಪುರ ಲೇಔಟ್‌ ನಿವಾಸಿ ರಾಜೇಶ್‌, ಆರ್‌.ಟಿ.ನಗರದ ಮಹಮ್ಮದ್‌ ಗೌಸ್‌ ಪಾಷಾ, ಕೊಯಮತ್ತೂರಿನ ಸ್ಟೀಫನ್‌ ಅಲಿಯಾಸ್‌ ನಯೀಮ್‌, ಪುಣೆಯ ಸಾಹೀಲ್‌, ಲಿಂಗರಾಜಪುರದ ಶ್ರೀನಿವಾಸ, ಯಲಹಂಕದ ಕುಮಾರ್‌, ತಮಿಳುನಾಡಿನ ಚೆನ್ನೈ ನಗರದ ವಿಕಾಸ ಹಾಗೂ ಕೊಯಮತ್ತೂರಿನ ಶ್ರೀವಲ್ಸನ್‌ ಬಂಧಿತರಾಗಿದ್ದು, ಆರೋಪಿಗಳಿಂದ ರೈಸ್‌ಫುಲ್ಲಿಂಗ್‌ ಯಂತ್ರ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಮೂರು ದಿನಗಳ ಹಿಂದೆ ಎಂ.ಜಿ.ರಸ್ತೆಯ ಓಬೆರಾಯ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಈ ವಂಚಕರ ತಂಡವನ್ನು ಸಿಸಿಬಿ ದಾಳಿ ನಡೆಸಿ ಬಂಧಿಸಿದೆ ಎಂದು ಎಂದು ಪೊಲೀಸರು ಹೇಳಿದ್ದಾರೆ.

9 ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣ ಪತ್ತೆ ಹಚ್ಚಿದ ಕಬ್ಬನ್ ಪಾರ್ಕ್ ಪೊಲೀಸರು!

ಮಹಾರಾಷ್ಟ್ರದ ಪುನಾ ನಗರದ ಪ್ರತಿಷ್ಠಿತ ಖಾಸಗಿ ಕಂಪನಿಯ ಪ್ರತಿನಿಧಿಗಳ ಸೋಗಿನಲ್ಲಿ ಕೋಟ್ಯಂತರ ಮೌಲ್ಯದ ರೈಸ್‌ಫುಲ್ಲಿಂಗ್‌ ಯಂತ್ರವನ್ನು ಕಡಿಮೆ ಬೆಲೆ ಮಾರಾಟ ಮಾಡುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚಿಸಲು ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಇನ್‌ಸ್ಪೆಕ್ಟರ್‌ ಚಂದ್ರಪ್ಪ ಬಾರ್ಕಿ ನೇತೃತ್ವದ ತಂಡ, ಕೂಡಲೇ ಹೋಟೆಲ್‌ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಹಲಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.