ಚಿಕ್ಕೋಡಿ(ಜೂ.17): ತಾಲೂಕಿನ ಕಬ್ಬೂರ ಗ್ರಾಮದ ಹೊರವಲಯದಲ್ಲಿ ಇತ್ತೀಚೆಗೆ ತಮಿಳುನಾಡು ಮೂಲದ ಅರಿಶಿನ ತುಂಬಿದ ಟ್ರಕ್‌ ಕಳವು ಮತ್ತು ದರೋಡೆ ಪ್ರಕರಣವನ್ನು ಚಿಕ್ಕೋಡಿ ಪೊಲೀಸರು ಬೇಧಿಸಿದ್ದು ಒಟ್ಟು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಮಾತ್ರವಲ್ಲ ಬಂಧಿತರಿಂದ 20 ಲಕ್ಷ ಮೌಲ್ಯದ ಎರಡು ಲಾರಿ, ಟ್ರ್ಯಾಕ್ಟರ್‌, ಒಂದು ಬೈಕ್‌, 13 ಲಕ್ಷ ಮೌಲ್ಯದ ಅರಿಷಿಣ ಸೇಹರಿದಂತೆ ಒಟ್ಟು 1.03 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕುರಿತು ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ್‌ ನಿಂಬರಗಿ ಈ ಮಾಹಿತಿ ನೀಡಿದರು. ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಗಣೇಶ ಕಲ್ಲಪ್ಪ ಕೋಳಿ, ದಾದಾಸಾಬ ಶಂಕರ ಟೋಣಿ, ಮಹಾರಾಷ್ಟ್ರ ಕವಟೆ ಮಹಾಂಕಾಳ ತಾಲೂಕಿನ ಪಿಂಪಳವಾಡಿ ಗ್ರಾಮದ ಜನಾರ್ದನ ಅಲಿಯಾಸ್‌ ಲಾಲಾ ಮಲ್ಹಾರಿ ಅಂಡ್‌, ರಾಯಭಾಗ ತಾಲೂಕಿನ ಇಟ್ನಾಳ ಗ್ರಾಮದ ಗರುನಾಥ ನಾಗಪ್ಪ ಹಾಲಳ್ಳಿ, ಮುಗುಳಖೋಡದ ಶಿವಾನಂದ ಸದಾಶಿವ ಪನದಿ, ಚಿಂಚಲಿಯ ಕಲೀಮ್‌ ಮುಸಾ ಮಾಲದಾರ, ಮಾಲದಿನ್ನಿ ಗ್ರಾಮದ ಪಾಂಡುರಂಗ ರಾಮಪ್ಪ ಹಳ್ಳೂರ ಬಂಧಿತ ಆರೋಪಿಗಳು ಎಂದರು.

ಒಂದೇ ದಿನದಲ್ಲಿ 9 ಬಾಲ್ಯ ವಿವಾಹ..! ಪೊಲೀಸ್ ಬಂದೋಬಸ್ತಿನೊಂದಿಗೆ ದಾಳಿ

ಏನಿದು ಘಟನೆ?:

ಕಳೆದ ಜೂನ್‌ 6 ರಂದು ಗೋಕಾಕ್‌ ತಾಲೂಕಿನ ಪಾಮಲದಿನ್ನಿ ಗ್ರಾಮದಿಂದ ಅರಿಶಿಣ ತುಂಬಿಸಿಕೊಂಡು ರಾತ್ರಿ 2.30ಕ್ಕೆ ನಿಪ್ಪಾಣಿ- ಮುಧೋಳ ಹೈವೇ ಮೂಲಕ ಮಹಾರಾಷ್ಟ್ರದ ಸಾಂಗ್ಲಿಗೆ ಲಾರಿ ಹೊರಟಿತ್ತು. ತಮಿಳುನಾಡು ಮೂಲದ ಈ ಲಾರಿಯನ್ನು ತಾಲೂಕಿನ ಕಬ್ಬೂರ ಗ್ರಾಮದ ಬಳಿ ಕಾರನ್ನು ಅಡ್ಡಗಟ್ಟಿ4 ಜನ ದರೋಡೆಕೋರರು ನಿಲ್ಲಿಸಿದ್ದರು. ನಂತರ ಕಾರಿನಿಂದ ಮತ್ತು ಪಕ್ಕದ ಕಟ್ಟಡದಿಂದ ಓಡಿಬಂದ ದುಷ್ಕರ್ಮಿಗಳು ರಾಡ್‌ಗಳಿಂದ ಚಾಲಕ ಹಾಗೂ ಕ್ಲೀನರ್‌ನನ್ನು ಮನಬಂದಂತೆ ಥಳಿಸಿದ್ದಾರೆ. ನಂತರ ಅವರನ್ನು ಅಪಹರಣ ಮಾಡಿ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದ ಕಾಲುವೆಯೊಂದರಲ್ಲಿ ಒಗೆದು ಹೋಗಿದ್ದಾರೆ. ನಂತರ .13 ಲಕ್ಷ ಮೌಲ್ಯದ ಅರಿಶಿಣ ತುಂಬಿದ ಲಾರಿ ಸಮೇತ ದರೋಡೆಕೋರರು ಪರಾರಿಯಾಗಿದ್ದರು.

ನಂತರ ಅಲ್ಲಿಂದ ಪಾರಾದ ತಮಿಳುನಾಡಿನ ಲಾರಿ ಚಾಲಕ ಎಂ.ಚಿನ್ನಸ್ವಾಮಿ ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ಬಂದು ದೂರು ನೀಡಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಸ್ಪಿ ಹಾಗೂ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅವರ ಮಾರ್ಗದರ್ಶನ ಮತ್ತು ಚಿಕ್ಕೋಡಿ ಡಿವೈಎಸ್ಪಿ ನೇತೃತ್ವದಲ್ಲಿ ಸಿಪಿಐ, ಪಿಎಸ್‌ಐ ನೇತೃತ್ವದ 20 ಜನರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದೆ. ನಂತರ ಆರೋಪಿಗಳನ್ನು ಬಲೆಗೆ ಬೀಳಿಸಿದ್ದಾರೆ.

ಜಿಲ್ಲೆಯ ಹುಕ್ಕೇರಿ, ಗೋಕಾಕ, ರಾಯಭಾಗ, ಮೂಡಲಗಿ ಭಾಗದಲ್ಲಿ ರೈತರು ಹೆಚ್ಚಾಗಿ ಅರಿಶಿಣ ಬೆಳೆಯುತ್ತಾರೆ. ಬೆಳೆದ ಅರಿಶಿಣವನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ದರೋಡೆಕೋರರು, ಒಬ್ಬ ಹಮಾಲನ ಮೂಲಕ ಮಾಹಿತಿ ಪಡೆಯುತ್ತಿದ್ದರು. ನಂತರ ಪ್ಲಾನ್‌ ಮಾಡಿಕೊಂಡು ದರೋಡೆ ನಡೆಸುತ್ತಿದ್ದರು. ಪ್ರಮುಖ ಆರೋಪಿ ಪಾಂಡುರಂಗ ಹಳ್ಳೂರ ಗೋಕಾಕ ಹಾಗೂ ರಾಯಬಾಗ ತಾಲೂಕಿನ ಸುತ್ತಮುತ್ತ ಅರಿಶಿಣ ತುಂಬಿಸುವ ಕೆಲಸ ಮಾಡಿಸುತ್ತಿದ್ದ. ತಾನು ತುಂಬಿಸಿದ ಲಾರಿಗಳು ಹೊರಡುವ ಸಮಯ ಮತ್ತು ವಿವರ ತನ್ನ ಸಹಚರರಿಗೆ ಕೊಟ್ಟು ತಾನೆ ದರೋಡೆ ಮಾಡಿಸಲು ಸುಪಾರಿ ಕೊಡುತ್ತಿದ್ದ. ಕದ್ದ ಮಾಲ್‌ ಮತ್ತೆ ತನ್ನ ಮನೆಗೆ ತಂದು ಪಾಲಿಶ್‌ ಮಾಡಿಸಿ ಬೇರೆ ಕಡೆಗೆ ಮಾರಾಟ ಮಾಡುತ್ತಿದ್ದ. ಬಂದ ಹಣವನ್ನು ಎಲ್ಲರೂ ಸೇರಿ ಹಂಚಿಕೊಳ್ಳುತ್ತಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.

ಮೊದಲು ಒಬ್ಬ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸುತ್ತ ಹೋದಂತೆ ಇಡೀ ಗ್ಯಾಂಗ್‌ ಸಿಕ್ಕಿ ಬಿದ್ದಿದೆ. ಇದೆ ರೀತಿ ಇನ್ನೂ ಅನೇಕ ದರೋಡೆಗಳನ್ನು ಈ ಗ್ಯಾಂಗ್‌ ಮಾಡಿದೆ ಎನ್ನಲಾಗಿದೆ. ಸದ್ಯ ದರೋಡೆಯಲ್ಲಿ ಭಾಗಿಯಾದ ಮತ್ತು ಸಹಾಯ ಮಾಡಿರುವ 7 ಆರೋಪಿಗಳನ್ನು ಬಂಧಿಸಲಾಗಿದೆ. ಇತರೆ ಮೂವರು ಪರಾರಿಯಾಗಿದ್ದಾರೆ ಎಂದರು. ಅಲ್ಲದೆ, ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡಕ್ಕೆ ಎಸ್‌ಪಿ ಲಕ್ಷ್ಮಣ ನಿಂಬರಗಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.