ಮಕ್ಕಳಿಗೆ ಸ್ವಲ್ಪ ಆತುರ. ಅವರು ಒಂದೇ ವಸ್ತು ಅಥವಾ ವಿಷ್ಯವನ್ನು ಪದೇ ಪದೇ ಕೇಳ್ತಿರುತ್ತಾರೆ ಇಲ್ಲ ಹೇಳ್ತಿರುತ್ತಾರೆ. ಅದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.

ಉತ್ತರ ಪ್ರದೇಶದ ಅಲಿಗಢದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಂಗಡಿಯಲ್ಲಿ ಹಾಲು ಕೇಳಿದ್ದಕ್ಕೆ ಆರು ವರ್ಷದ ಬಾಲಕನನ್ನು ಸಿಹಿತಿಂಡಿ ಅಂಗಡಿಯ ಮಾಲೀಕ ಬಿಸಿ ಪ್ಯಾನ್ನಲ್ಲಿ ಬಲವಂತವಾಗಿ ಕೂರಿಸಿದ್ದಾನೆ ಎನ್ನಲಾಗಿದೆ. ಇದರಿಂದ ಬಾಲಕನ ಹಿಂಭಾಗಕ್ಕೆ ತೀವ್ರ ಸುಟ್ಟ ಗಾಯಗಳಾಗಿವೆ.

ಹಾಲು ತರಲು ಹೋಗಿದ್ದ ಬಾಲಕನಿಗೆ ಕಾದಿತ್ತು ಆಘಾತ!

ಅಲಿಗಢದ ದೆಹಲಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗ್ಲಾ ಮೆಹ್ತಾಬ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸುಂದರ್ ಲಾಲ್ ಎಂಬುವವರ ಆರು ವರ್ಷದ ಮಗ ಶನಿವಾರ ರಾತ್ರಿ ಮನೆಯ ಸಮೀಪದಲ್ಲಿದ್ದ ಸಿಹಿತಿಂಡಿ ಅಂಗಡಿಗೆ ಹಾಲು ತರಲು ಹೋಗಿದ್ದ.

ಆದರೆ ಅಂಗಡಿಯಲ್ಲಿ ಹಾಲು ಕೊಡಲು ತಡವಾಗಿದೆ. ಹೀಗಾಗಿ ಬಾಲಕ ಪದೇ ಪದೇ ಹಾಲು ಕೇಳಿದ್ದಾನೆ. ಇದರಿಂದ ಕೋಪಗೊಂಡ ಅಂಗಡಿ ಮಾಲೀಕ ಲಲ್ಲು, ಬಾಲಕನನ್ನು ಬಲವಂತವಾಗಿ ಬಿಸಿ ಪ್ಯಾನ್ನಲ್ಲಿ ಕೂರಿಸಿದ್ದಾನೆ ಎಂದು ದೂರಲಾಗಿದೆ. ಬಿಸಿ ಪ್ಯಾನ್ನಿಂದಾಗಿ ಬಾಲಕನ ಹಿಂಭಾಗಕ್ಕೆ ತೀವ್ರ ಸುಟ್ಟ ಗಾಯಗಳಾಗಿವೆ.

ಮಗನಿಗೆ ಗಾಯಗಳಾಗಿರುವುದನ್ನು ಕಂಡು ಕುಟುಂಬದವರು ಆತಂಕಗೊಂಡಿದ್ದಾರೆ. ತಕ್ಷಣವೇ ಬಾಲಕನನ್ನು ಅಲಿಗಢದ ಮಲ್ಖಾನ್ ಸಿಂಗ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ವೈದ್ಯರು ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬಾಲಕನ ತಂದೆ ಸುಂದರ್ ಲಾಲ್ ಅವರು ದೆಹಲಿ ಗೇಟ್ ಪೊಲೀಸ್ ಠಾಣೆಗೆ ತೆರಳಿ ಅಂಗಡಿ ಮಾಲೀಕನ ವಿರುದ್ಧ ಲಿಖಿತ ದೂರು ನೀಡಿದ್ದಾರೆ. ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಂಗಡಿ ಮಾಲೀಕ ಲಲ್ಲು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನಿಗೆ ವೈದ್ಯಕೀಯ ಪರೀಕ್ಷೆ ನಡೆದಿದೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಲು ಕೇಳಿದ ಆರು ವರ್ಷದ ಬಾಲಕನ ಮೇಲೆ ನಡೆದಿರುವ ಈ ಘಟನೆ ಸ್ಥಳೀಯವಾಗಿ ಆಕ್ರೋಶಕ್ಕೆ ಕಾರಣವಾಗಿದೆ.