ಶಿವಾಜಿ ನಗರದ ನಸೀಬ್‌, ಅಟ್ಟೂರು ಲೇಔಟ್‌ನ ಮಂಜುನಾಥ್‌, ಮೈಸೂರಿನ ಶಾಭಾಯ್‌ ಖಾನ್‌, ಫ್ರೇಜರ್‌ ಟೌನ್‌ನ ಸೈಯದ್‌ ರಿಯಾಝ್‌, ಬಾಗಲೂರಿನ ಇಮ್ರಾನ್‌ ಹಾಗೂ ಸಾರಾಯಿಪಾಳ್ಯದ ನಯಾಜ್‌ ಖಾನ್‌ ಬಂಧಿತರಾಗಿದ್ದು, ಆರೋಪಿಗಳಿಂದ 3 ಕೋಟಿ ಮೌಲ್ಯದ 8 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು (ಏ.10): ಎರಡು ತಿಂಗಳ ಹಿಂದೆ ಚಿಕ್ಕಮಗಳೂರಿನ ಜೆಡಿಎಸ್‌ ವಿಧಾನಪರಿಷತ್‌ ಸದಸ್ಯ ಭೋಜೇಗೌಡ ಅವರ ಕಾರಿನ ನಂಬರ್‌ ಬಳಸಿಕೊಂಡು ಬೇರೆ ಐಷಾರಾಮಿ ಕಾರು ಮಾರಾಟ ಯತ್ನ ಪ್ರಕರಣ ಸಂಬಂಧ ಮತ್ತೇ ಆರು ಮಂದಿಯನ್ನು ಬಂಧಿಸಿ ಮೂರು ಕೋಟಿ ರುಪಾಯಿ ಮೌಲ್ಯದ ಕಾರುಗಳನ್ನು ಹೈಗ್ರೌಂಡ್‌್ಸ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಶಿವಾಜಿ ನಗರದ ನಸೀಬ್‌, ಅಟ್ಟೂರು ಲೇಔಟ್‌ನ ಮಂಜುನಾಥ್‌, ಮೈಸೂರಿನ ಶಾಭಾಯ್‌ ಖಾನ್‌, ಫ್ರೇಜರ್‌ ಟೌನ್‌ನ ಸೈಯದ್‌ ರಿಯಾಝ್‌, ಬಾಗಲೂರಿನ ಇಮ್ರಾನ್‌ ಹಾಗೂ ಸಾರಾಯಿಪಾಳ್ಯದ ನಯಾಜ್‌ ಖಾನ್‌ ಬಂಧಿತರಾಗಿದ್ದು, ಆರೋಪಿಗಳಿಂದ 3 ಕೋಟಿ ಮೌಲ್ಯದ 8 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಈ ಹಿಂದೆ ಮಂಜುನಾಥ್‌ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು. ಈಗ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಕಾಂಗಿಯಾಗಿ ವಾಸವಿದ್ದ ಮಹಿಳೆಗೆ ಇರಿದು ಕೊಲೆ: ಪರಿಚಿತರಿಂದಲೇ ಕೃತ್ಯ ಶಂಕೆ

ಅಂತರ್‌ ರಾಜ್ಯ ಕಾರುಗಳ್ಳರ ತಂಡ: ಎಂಎಲ್‌ಸಿ ಭೋಜೇಗೌಡರ ಕಾರಿನ ನಂಬರ್‌ ಬಳಕೆ ಮಾಡಿಕೊಂಡಿರುವ ಪ್ರಕರಣದ ತನಿಖೆ ನಡೆಸಿದಾಗ ಕೃತ್ಯದಲ್ಲಿ ಅಂತರ್‌ ರಾಜ್ಯ ಕಳ್ಳರ ತಂಡ ಪಾಲ್ಗೊಂಡಿರುವುದು ತನಿಖೆಯಲ್ಲಿ ಬಯಲಾಯಿತು. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮನೆ ಮುಂದೆ ಅಥವಾ ಪಾರ್ಕಿಂಗ್‌ ಸ್ಥಳದಲ್ಲಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುತ್ತಿದ್ದ ಇನೋವಾ, ಫಾರ್ಚೂನರ್‌ ಹಾಗೂ ಆಡಿ ಹೀಗೆ ಐಷರಾಮಿ ಕಾರುಗಳನ್ನು ಈ ತಂಡ ಕಳವು ಮಾಡುತ್ತಿತ್ತು. ಬಳಿಕ ಅವುಗಳಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಮಾರಾಟ ಮಾಡುತ್ತಿತ್ತು.

ಗ್ಯಾರೇಜ್‌ಗೆ ಕೊಂಡೊಯ್ದು ಎಂಜಿನ್‌ ಮತ್ತು ಚಾಸಿ ನಂಬರ್‌ ಬದಲಾಯಿಸಿ ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಪಂಜಾಬ್‌, ಆಂಧ್ರಪ್ರದೇಶ, ತೆಲಂಗಾಣ ಭಾಗದಲ್ಲಿ ಮಾರುತ್ತಿದ್ದರು. ಇದಕ್ಕೆ ಪೂರಕವಾಗಿ ನಕಲಿ ದಾಖಲೆಗಳನ್ನು ಆರೋಪಿಗಳು ಸೃಷ್ಟಿಸುತ್ತಿದ್ದರು. ಈ ಕಾರುಗಳನ್ನು ಸೆಕೆಂಡ್‌ ಹ್ಯಾಂಡ್‌ ಶೋರೂಮ್‌ಗೆ ಮಾರಾಟ ಮಾಡುತ್ತಿರಲಿಲ್ಲ. ಬದಲಿಗೆ ಸೆಕೆಂಡ್‌ ಹ್ಯಾಂಡ್‌ ಡೀಲರ್‌ಗಳ ಮೂಲಕ ವಿಲೇವಾರಿ ಮಾಡುತ್ತಿದ್ದರು. ಇನ್‌ಸ್ಪೆಕ್ಟರ್‌ ಸಿ.ಬಿ.ಶಿವಸ್ವಾಮಿ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಹಚ್ಚಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

ನಕಲಿ ಪಾಸ್‌ಪೋರ್ಟ್‌ ಮಾಡಿಸಿ ವಿದೇಶ ಸುತ್ತಿ ಬಂದ ಬಾಂಗ್ಲಾ ಪ್ರಜೆಗಳಿಬ್ಬರ ಬಂಧನ

ಏನಿದು ಪ್ರಕರಣ: ಫೆ.22ರಂದು ನಗರದ ಕ್ವೀನ್ಸ್‌ ರಸ್ತೆ ಸಮೀಪ ಸೆಕೆಂಡ್‌ ಹ್ಯಾಂಡ್‌ ಐ-ಕಾರು ಶೋರೂಮ್‌ ಮುಂಭಾಗ ಎಂಎಲ್‌ಸಿ ಭೋಜೇಗೌಡ ಅವರ ಬಳಸುವ ಕಾರಿನ ನಂಬರ್‌ ಪ್ಲೇಟ್‌ (ಕೆಎ-18-ಝಡ್‌-5977) ಇದ್ದ ಮತ್ತೊಂದು ಕಾರು ಭೋಜೇಗೌಡ ಅವರ ಆಪ್ತ ಸಹಾಯಕ ಮಾದೇಶ್‌ ಕಣ್ಣಿಗೆ ಬಿದ್ದಿದೆ. ಕೂಡಲೇ ಆ ಕಾರಿನ ಬಗ್ಗೆ ವಿಚಾರಿಸಿದಾಗ ನಕಲಿ ನಂಬರ್‌ ಎಂಬುದು ಗೊತ್ತಾಯಿತು.