ಧಾರವಾಡ: ಸಾಲಬಾಧೆಗೆ ಒಂದೂವರೆ ತಿಂಗಳಲ್ಲಿ ಆರು ಜನ ರೈತರ ಆತ್ಮಹತ್ಯೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಹತ್ತಾರು ಯೋಜನೆ ರೂಪಿಸಿ ಅನುಕೂಲ ಕಲ್ಪಿಸಿದರೂ, ರೈತ ಆತ್ಮಹತ್ಯೆ ಆಗದಂತೆ ಜಾಗೃತಿ ಮೂಡಿಸಿದರೂ ರೈತರ ಆತ್ಮಹತ್ಯೆಗಳು ಮಾತ್ರ ನಿಂತಿಲ್ಲ. ಕೃಷಿ ಹಾಗೂ ತನ್ನ ಕುಟುಂಬದ ಜೀವನ ನಿರ್ವಹಣೆಗೆ ಬ್ಯಾಂಕ್‌ ಸೇರಿದಂತೆ ವಿವಿಧೆಡೆ ಸಾಲ ಮಾಡುವ ರೈತರು ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ಸಾಮಾನ್ಯವಾಗಿದೆ.

6 farmers committed suicide in one and a half months at dharwad rav

ಬಸವರಾಜ ಹಿರೇಮಠ

 ಧಾರವಾಡ (ಜು.18) :  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಹತ್ತಾರು ಯೋಜನೆ ರೂಪಿಸಿ ಅನುಕೂಲ ಕಲ್ಪಿಸಿದರೂ, ರೈತ ಆತ್ಮಹತ್ಯೆ ಆಗದಂತೆ ಜಾಗೃತಿ ಮೂಡಿಸಿದರೂ ರೈತರ ಆತ್ಮಹತ್ಯೆಗಳು ಮಾತ್ರ ನಿಂತಿಲ್ಲ. ಕೃಷಿ ಹಾಗೂ ತನ್ನ ಕುಟುಂಬದ ಜೀವನ ನಿರ್ವಹಣೆಗೆ ಬ್ಯಾಂಕ್‌ ಸೇರಿದಂತೆ ವಿವಿಧೆಡೆ ಸಾಲ ಮಾಡುವ ರೈತರು ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ಸಾಮಾನ್ಯವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಅದರಲ್ಲೂ ಜೂನ್‌ ತಿಂಗಳಲ್ಲಿಯೇ ಐವರು ಹಾಗೂ ಜುಲೈ 15ರೊಳಗೆ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ಬೇಸರದ ಸಂಗತಿ. ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪದ ಮಲ್ಲನಗೌಡ ಚನ್ನಪ್ಪಗೌಡ ಪಾಟೀಲ (31), ಗಂಗಿವಾಳದ ನಾಗರಾಜ ಗುರುನಾಥ ಗೊಡ್ಡೆಮ್ಮಿ (31) ಹಾಗೂ ಬಸವಣ್ಣೆವ್ವ ಗಂಗನಗೌಡರ, ಕುಂದಗೋಳ ತಾಲೂಕಿನ ಮುಳ್ಳೊಳ್ಳಿಯ ಗುರುಪ್ಪ ವಿರೂಪಾಕ್ಷಪ್ಪ ಅಡವಿ (38) ಹಾಗೂ ನವಲಗುಂದ ತಾಲೂಕಿನ ಮೊರಬ ಗ್ರಾಮದ ಶಹಜಾನಬಾನು ಹಮ್ಮದಮಿಯಾ ಬಡಿಮಿಯಾ (46) ಮೃತಪಟ್ಟರೈತರು.

ಮುಂಗಾರು ವೈಫಲ್ಯ: ಎರಡೇ ತಿಂಗಳಲ್ಲಿ 42 ರೈತರ ಆತ್ಮಹತ್ಯೆ!

ಆರು ಜನರ ಪೈಕಿ ಯುವ ರೈತರೇ ಹೆಚ್ಚಾಗಿದ್ದು ಇಬ್ಬರು ಮಹಿಳೆಯರು ಎನ್ನುವುದು ಸಹ ಗಮನಾರ್ಹ. ಇನ್ನು, ಒಂದೂವರೆ ತಿಂಗಳಲ್ಲಿ ಆರು ಪ್ರಕರಣ ಹೊರತು ಪಡಿಸಿ ಜುಲೈ 10ರಂದು ಧಾರವಾಡ ತಾಲೂಕು ಸೈಬನಕೊಪ್ಪದಲ್ಲೊಂದು ರೈತ ಆತ್ಮಹತ್ಯೆ ಪ್ರಕರಣ ನಡೆದಿದೆ. ಗರಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಲ್ಲಪ್ಪ ಕುರಗುಂದ (55) ಮೃತ ರೈತ. ಈ ಸಾವಿನ ಬಗ್ಗೆ ಜಿಲ್ಲಾಡಳಿತದ ಪರಿಶೀಲನೆ ನಡೆಯುತ್ತಿದ್ದು ನಂತರದಲ್ಲಿ ಅಧಿಕೃತ ರೈತ ಆತ್ಮಹತ್ಯೆ ಎಂದು ಪರಿಗಣಿಸಲಾಗುತ್ತದೆ.

ಕಾರಣವೇನು?

ಮೃತ ರೈತರ ಪೈಕಿ ಬಹುತೇಕರು ನೇಣಿಗೆ ಕೊರಳೊಡ್ಡಿದವರು. ಇದರೊಂದಿಗೆ ಒಂದು ಪ್ರಕರಣ ವಿಷ ಸೇವನೆ. ಎಲ್ಲ ರೈತರ ಆತ್ಮಹತ್ಯೆಗೆ ಸಾಲದ ಬಾಧೆಯೇ ಎಂದು ಕಂಡು ಬಂದಿದೆ. ಉತ್ತಮ ಫಸಲು ಬರಲಿದೆ ಎಂದು ಸಾಲ ಮಾಡಿ ಲಕ್ಷಾಂತರ ವೆಚ್ಚ ಮಾಡಿಕೊಂಡ ರೈತರಿಗೆ ಬೆಳೆ ಕೈಕೊಟ್ಟಾಗ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾದ ಪ್ರಕರಣಗಳಿವು. ಬ್ಯಾಂಕ್‌ ಹಾಗೂ ಕೈಗಡ ಸಾಲ ಮಾಡಿಕೊಂಡು ಬಡ್ಡಿ ಹಾಗೂ ಅಸಲು ತುಂಬಲಾಗದೇ ತೊಂದರೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಜಿಲ್ಲಾಡಳಿತವು ನಡೆಸಿದ ಪರಿಶೀಲನೆಯಿಂದ ಕಂಡು ಬಂದಿದೆ. ಬಹುತೇಕ ಪ್ರಕರಣಗಳನ್ನು ಪರಿಶೀಲಿಸಿ ರೈತರಿಗೆ ಸರ್ಕಾರ ಪರಿಹಾರ ಸಹ ನೀಡಿದೆ. ಕೆಲವು ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ.

ಎಷ್ಟೇ ಕಷ್ಟಬಂದರೂ ಎದುರಿಸಿ ಮತ್ತೆ ಕೃಷಿಯಲ್ಲಿ ತೊಡಗಿಕೊಳ್ಳುವ ರೈತರು ಒಂದೆಡೆಯಾದರೆ, ಸಾಲದ ಹೊರೆ ಹಾಗೂ ಅದರಿಂದಾಗುವ ಪರಿಣಾಮಗಳಿಂದಾಗಿ ಆತ್ಮಹತ್ಯೆಗೆ ಶರಣಾಗುವ ರೈತರು ಇನ್ನೊಂದೆಡೆ. ರೈತ ಆತ್ಮಹತ್ಯೆ ಹೊಸ ಸಮಸ್ಯೆ ಏನಲ್ಲ. ಆದರೆ, ಸಮಸ್ಯೆಗೆ ಪರಿಹಾರ ಮಾತ್ರ ಸಿಗದಿರುವುದು ಸೋಜಿಗದ ಸಂಗತಿ.

ವಿಜಯನಗರ: ಸಾಲಬಾಧೆ ತಾಳದೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು

ಆರ್ಥಿಕ ಬೆಳೆಯ ಪರಿಣಾಮವಿದು

ಯಾವಾಗೆಲ್ಲಾ ರೈತ ವರ್ಗ ಆರ್ಥಿಕ ಬೆಳೆಯನ್ನು ನೆಚ್ಚಿಕೊಳ್ಳುತ್ತದೆಯೋ ಆಗೆಲ್ಲಾ ಆತ್ಮಹತ್ಯೆಯಂತಹ ಅನಾಹುತಗಳು ಹೆಚ್ಚಾಗುತ್ತವೆ. ಕೃಷಿ ವೈವಿಧ್ಯ ಹೋಗಿ ವಾಣಿಜ್ಯ ಬೆಳೆಯ ಪರಿಕಲ್ಪನೆಯಿಂದ ರೈತರಿಗೆ ಆಗುವ ಲಾಭಕ್ಕಿಂತ ನಷ್ಟವೇ ಜಾಸ್ತಿ. ಹಲವು ಬೆಳೆಗಳಿಂದ ಒಂದಿಲ್ಲೊಂದು ರೈತರ ಅವಶ್ಯಕತೆಗಳನ್ನು ಪೂರೈಸುತ್ತಿದ್ದವು. ಒಂದೇ ಬೆಳೆಯಿಂದ ಅಪಾಯವೇ ಹೆಚ್ಚು. ಇದರೊಂದಿಗೆ ಹಣಕ್ಕಾಗಿ ಕೃಷಿ ಮಾಡಿದ್ದರಿಂದಲೇ ರೈತ ಆತ್ಮಹತ್ಯೆಗಳು ಜಾಸ್ತಿ ಆಗುತ್ತಿರುವುದು ಕಂಡು ಬರುತ್ತಿದೆ. ರೈತರಿಗೆ ಸರಿಯಾದ ಮಾಹಿತಿ, ಜಾಗೃತಿ ಇನ್ನಷ್ಟುಮೂಡಬೇಕಿದೆ.

ಡಾ. ಪ್ರಕಾಶ ಭಟ್‌, ಗ್ರಾಮೀಣಾಭಿವೃದ್ಧಿ ತಜ್ಞರು

Latest Videos
Follow Us:
Download App:
  • android
  • ios