*  ಹಾಸನದ ಗವೇನಹಳ್ಳಿ ಕೆರೆ ಬಳಿ ಘಟನೆ *  ಮಹಿಳೆಯ ಕೊರಳಲ್ಲಿ ಇದ್ದ ಚಿನ್ನದ ಸರ ಕಸಿಯಲು ಕಳ್ಳನಿಂದ ಯತ್ನ*  ಚಿನ್ನದ ಚೈನ್ ಕೊಡದ ಮಹಿಳೆ ನೀಲಳನ್ನು ಕೆರೆ ನೀರಿನಲ್ಲಿ ಮುಳುಗಿಸಿ  ಕೊಲೆ 

ಹಾಸನ(ಜೂ.17): ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡು ತನ್ನ ಮಗನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕೆಂಬ ಮಹದಾಸೆ ಹೊಂದಿದ್ದ ಮಹಿಳೆಯನ್ನು ಚಿನ್ನದ ಸರಕ್ಕೆ ಕಳ್ಳನೊಬ್ಬ ಕೊಂದ ಘಟನೆ ನಿನ್ನೆ(ಗುರುವಾರ) ನಡೆದಿದೆ.

ದೂರದ ಹಾಸ್ಟೆಲ್‌ನಲ್ಲಿ ಓದಿಸುತ್ತಿದ್ದ ಮಗನನ್ನು ನೋಡಿಕೊಂಡು ಬರಲು ಹೊರಟಿದ್ದು ಒಂದಷ್ಟು ಮಗನಿಗಾಗಿ ವಸ್ತುಗಳನ್ನು ಖರೀದಿಸಲು ಹಾಸನಕ್ಕೆ ಬಂದಿದ್ದಳು. ವಾಪಸ್ ಮನೆಗೆ ಹೋಗುವಾಗ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿಯಲು ಬಂದ ಕಿಡಿಗೇಡಿ ಆ ತಾಯಿಯ ಪ್ರಾಣವನ್ನೇ ತೆಗೆದಿದ್ದಾನೆ.

ಇಟ್ಟುಕೊಂಡವನಿಗಾಗಿ ಗಂಡನನ್ನೇ ಮುಗಿಸಿಬಿಟ್ಳು ಹೆಂಡ್ತಿ, ಕಥೆ ಕಟ್ಟಿದವಳ ಕಳ್ಳಾಟ ಬಯಲು

ಕೊರಳಲ್ಲಿದ್ದ ಚಿನ್ನದ ಸರ ಕೊಡದ 50 ವರ್ಷದ ನೀಲಳನ್ನು ಪಾಪಿ ಕಳ್ಳ ಭರತ್ ಕೊಂದಿದ್ದಾನೆ. ಹಾಸನ ಹೊರವಲಯದಲ್ಲಿರುವ ಗವೇನಹಳ್ಳಿ ಗ್ರಾಮದ ನೀಲ ಕೊಲೆಯಾದಾಕೆ. ಈಕೆ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಈಕೆಯ ಪುತ್ರನನ್ನು ದಕ್ಷಿಣಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಹಾಸ್ಟೆಲ್‌ನಲ್ಲಿ ಪಿಯುಸಿ ಓದಿಸುತ್ತಿದ್ದರು. ನಾಳೆ ಹಾಸ್ಟೆಲ್‌ಗೆ ಹೋಗಿ ಮಗನನ್ನು ನೋಡಿಕೊಂಡು ಬರುವ ಸಲುವಾಗಿ ಆತನಿಗಾಗಿ ಬೆಡ್‌ಶೀಟ್, ಬಿಸ್ಕೆಟ್, ಬಟ್ಟೆ ಸೇರಿದಂತೆ ಒಂದಷ್ಟು ವಸ್ತುಗಳನ್ನು ಖರೀದಿಸಲು ಪತಿಯೊಂದಿಗೆ ಬೈಕ್‌ನಲ್ಲಿ ಹಾಸನ ನಗರಕ್ಕೆ ಬಂದಿದ್ದರು. ವಸ್ತುಗಳನ್ನು ಖರೀದಿಸಿದ ಮೇಲೆ ಪತಿ ನಾನೇ ಗ್ರಾಮಕ್ಕೆ ಬೈಕ್‌ನಲ್ಲಿ ಬಿಡುತ್ತೇನೆ ಎಂದಿದ್ದು, ಬೇಡ ನಾನು ಬಸ್‌ನಲ್ಲಿಯೇ ಹೋಗುತ್ತೇನೆ ಎಂದು ಹೊರಟಿದ್ದಾರೆ. ಬಸ್‌ನಿಂದ ಇಳಿದು ಅಣಿತಿ‌ ದೂರದಲ್ಲಿರುವ ಮನೆಗೆ ಕೆರೆಯ ಸಮೀಪವಿರುವ ಕಾಲು ದಾರಿಯಲ್ಲಿ ನಡೆದುಕೊಂಡು ಬರುವಾಗ ದುರುಳ ಭರತ್ ಎಂಬಾತ ಅಡ್ಡ ಬಂದು ನೀಲಳ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ಪ್ರತಿರೋಧ ತೋರಿದ್ದು, ಇದರಿಂದ ಕೋಪಗೊಂಡ ಕಿಡಿಗೇಡಿ ಆಕೆಯ ಮೇಲೆ ಹಲ್ಲೆ ಮಾಡಿ ನೀರು ಹಾಗೂ ಕೆಸರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. 

ಸಕಲೇಶಪುರ: ಕಾಫಿ ಮಂಡಳಿಯ ನೌಕರನ ಬರ್ಬರ ಕೊಲೆ

ನೀಲಳನ್ನು ಕೊಲೆ ಮಾಡುವಾಗ ಕಿರುಚಿಕೊಂಡಿದ್ದಾರೆ ಅಲ್ಲೇ ಸ್ವಲ್ಪ ದೂರದಲ್ಲೇ ಹೊರ ರಾಜ್ಯದಿಂದ ಕೆಲಸಕ್ಕೆ ಬಂದಿರುವ ಕಾರ್ಮಿಕರು ಕೆಲಸ ಮಾಡುತ್ತಿದ್ದು‌, ಮಹಿಳೆಯ ರಕ್ಷಣೆಗೆ ಓಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ದುಷ್ಕರ್ಮಿ ಕಂದಲಿಯ ಭರತ್, ಮಹಿಳೆಯನ್ನು ಕೆರೆಯ ನೀರಿನಲ್ಲಿ‌ ಮುಳುಗಿಸಿ ಕೊಂದು ಹಾಕಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಯುವಕರು ತಪ್ಪಿಸಿಕೊಂಡು ಓಡಿ ಹೊಗುತ್ತಿದ್ದವನನ್ನು ಬೆನ್ನಟ್ಟಿ ಹಿಡಿದು ಗವೇನಹಳ್ಳಿ ಗ್ರಾಮಕ್ಕೆ ಕರೆದು ತಂದಿದ್ದಾರೆ. ಗ್ರಾಮಸ್ಥರಿಗೆ ಕೊಲೆಯ ವಿಷಯ ತಿಳಿಸಿದ ಕೂಡಲೇ ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ ಕೊಲೆಗಡುಕನನ್ನು ಪೊಲೀಸರಿಗೆ ಒಪ್ಪಿಸಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಆರ್.ಶ್ರೀನಿವಾಸ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಟ್ಟಿನಲ್ಲಿ ಮಗನ ಕಾಣುವ ಆತುರದಲ್ಲಿದ್ದ ತಾಯಿ ತನ್ನದಲ್ಲದ ತಪ್ಪಿಗೆ ಜೀವ ತೆತ್ತಿದ್ದು, ಇತ್ತ ತನ್ನ ತಾಯಿ ನನ್ನನ್ನು ನೋಡಲು ನಾಳೆ ಬರುತ್ತಾಳೆ ಎಂದು ಹಾಸ್ಟೆಲ್‌ನಲ್ಲಿ ಕಾಯುತ್ತಿದ್ದ ಮಗ ತಬ್ಬಲಿಯಾಗಿದ್ದಾನೆ. ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.