ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೆಯಂಗಡಿಯ ತೊಟ್ಟಿಲಗುಂಡಿಯಲ್ಲಿ ನಡೆದ ಘಟನೆ 

ಉತ್ತರಕನ್ನಡ(ನ.06): ಆಸ್ತಿ ಜಗಳ ವಿಚಾರಕ್ಕೆ ಜಗಳ ಮಾಡಿ ಅಣ್ಣನನ್ನು ತಮ್ಮಂದಿರೇ ದಾರುಣವಾಗಿ ಕೊಲೆ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೆಯಂಗಡಿಯ ತೊಟ್ಟಿಲಗುಂಡಿಯಲ್ಲಿ ನಿನ್ನೆ(ಶನಿವಾರ) ನಡೆದಿದೆ. ಹನುಮಂತ ಹೊನ್ನಪ್ಪ ನಾಯ್ಕ್ (54) ಕೊಲೆಯಾದ ದುರ್ದೈವಿಯಾಗಿದ್ದಾನೆ. 

ಇವರ ಸೋದರ ಮಾವ ಮಾರುತಿ ನಾಯ್ಕ್ (70) ಘಟನೆಯಲ್ಲಿ ಗಂಭೀರ ಗಾಯಕ್ಕೊಳಗಾಗಿದ್ದಾರೆ. ಈ ಹಿಂದೆ ಕೂಡಾ ಅಡಿಕೆ, ಆಸ್ತಿ ವಿಚಾರದಲ್ಲಿ ಅಣ್ಣ ತಮ್ಮಂದಿರಿಗೆ ಗಲಾಟೆಗಳಾಗುತ್ತಿತ್ತು. ಆದರೆ, ಇಂದು ಗಲಾಟೆ ತಾರಕಕ್ಕೇರಿದ್ದು, ತಮ್ಮಂದಿರಾದ ವಿನಾಯಕ ನಾಯ್ಕ, ಚಿದಾನಂದ ನಾಯ್ಕ್ ರಾಡ್‌ನಲ್ಲಿ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. 

ಕುಡಿದ ಅಮಲಿನಲ್ಲಿ ಯುವಕನ ಕೈ ಕತ್ತರಿಸಿ ದುಷ್ಕರ್ಮಿಗಳ ಪುಂಡಾಟಿಕೆ: ಓರ್ವನ ಬಂಧನ

ತಲೆಗೆ ಹೊಡೆದ ಕಾರಣ ಗಂಭೀರ ಗಾಯಗೊಂಡ ಹೊನ್ನಪ್ಪ ನಾಯ್ಕ್, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಹೊನ್ನಾವರ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.