ಬೆಂಗಳೂರು: ಅಪ್ಪ-ಮಗನಿಂದ 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ..!
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಗಳಾದ ಸುಂಕದಕಟ್ಟೆಯ ಚಂದನ ಲೇಔಟ್ ನಿವಾಸಿ ಆರ್.ನಾಗರಾಜು ಮತ್ತು ಆತನ 17 ವರ್ಷದ ಪುತ್ರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರು(ಆ.16): ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವ್ಯಕ್ತಿ ಹಾಗೂ ಆತನ ಅಪ್ರಾಪ್ತ ಮಗನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಗಳಾದ ಸುಂಕದಕಟ್ಟೆಯ ಚಂದನ ಲೇಔಟ್ ನಿವಾಸಿ ಆರ್.ನಾಗರಾಜು ಮತ್ತು ಆತನ 17 ವರ್ಷದ ಪುತ್ರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಬಾಲಕಿ ತಾಯಿಗೆ ಸಂಬಂಧಿಕರು. ನಾಗರಾಜ್ ಕ್ರಷರ್‌ವೊಂದರಲ್ಲಿ ಸೂಪರ್‌ವೈಸರ್ ಆಗಿದ್ದು, ಆತನ ಅಪ್ರಾಪ್ತ ಮಗ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.
ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ: 74ರ ನಿವೃತ್ತ ಪಿಎಸ್‌ಐ ಸೆರೆ
ಬಾಲಕಿಯ ತಾಯಿ ಕೆಲಸಕ್ಕೆ ತೆರಳುವಾಗ ಆರೋಪಿ ನಾಗರಾಜ್ ಮನೆಯಲ್ಲಿ ಮಗಳನ್ನು ಬಿಟ್ಟು ಹೋಗುತ್ತಿದ್ದರು. ಇತ್ತೀಚೆಗೆ ಬಾಲಕಿಯ ವರ್ತನೆಯಲ್ಲಿ ಬದಲಾವಣೆಗಳಾಗಿದ್ದವು. ಇದನ್ನು ಗಮನಿಸಿದ ತಾಯಿ ಪ್ರಶ್ನಿಸಿದಾಗ, ಆರೋಪಿಗಳು ನೀಡುತ್ತಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಕಿ ಹೇಳಿದ್ದಾಳೆ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿತವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.