*  ನೋಟು ಬದಲಾವಣೆ ದಂಧೆ*  ಲಾಭದಾಸೆ ತೋರಿಸಿ ಅಮಾನ್ಯಗೊಂಡ ನೋಟು ನೀಡುತ್ತೇವೆಂದು ವಂಚನೆ*  ಮೂಟೆಗಳಲ್ಲಿ ತುಂಬಿಟ್ಟಿದ್ದ ನಕಲಿ ನೋಟು ಜಪ್ತಿ 

ಬೆಂಗಳೂರು(ಅ.27): ನಿಷೇಧಿತ ಹಾಗೂ ಖೋಟಾ ನೋಟು(Fake Note) ಚಲಾವಣೆ ಜಾಲವೊಂದನ್ನು ಭೇದಿಸಿರುವ ಗೋವಿಂದಪುರ ಠಾಣೆ ಪೊಲೀಸರು, ಈ ಸಂಬಂಧ ಐವರನ್ನು ಬಂಧಿಸಿ ಸುಮಾರು 5.8 ಕೋಟಿ ಮೌಲ್ಯದ ನಕಲಿ(ಜೆರಾಕ್ಸ್‌) ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ಬಟ್ಟೆ ವ್ಯಾಪಾರಿಗಳಾದ ಕೆ.ಆರ್‌.ಪುರದ ಸುರೇಶ್‌ ಕುಮಾರ್‌, ರಾಜಾಜಿನಗರದ ರಾಮಕೃಷ್ಣ, ಆನೇಕಲ್‌ ತಾಲೂಕಿನ ಕೃಷಿಕ ಮಂಜುನಾಥ್‌, ಹೊಂಗಸಂದ್ರದ ಬಿಬಿಎಂಪಿ(BBMP) ಗುತ್ತಿಗೆದಾರ ವೆಂಕಟೇಶ್‌ ಹಾಗೂ ದಯಾನಂದ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 1000 ಹಾಗೂ 500 ಮುಖಬೆಲೆಯ .80 ಲಕ್ಷ ಹಾಗೂ ನೆರೆಯ ಕೇರಳದಲ್ಲಿ(Kerala)5 ಕೋಟಿ ಮೌಲ್ಯದ 500 ಮತ್ತು 1000 ಮುಖಬೆಲೆಯ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಕೇರಳ ಮೂಲದ ಇಬ್ಬರು ಪ್ರಮುಖ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಎಚ್‌ಬಿಆರ್‌ ಲೇಔಟ್‌ನ ಎಚ್‌ಪಿ ಪೆಟ್ರೋಲ್‌ ಬಂಕ್‌ ಸಮೀಪ ಅಮಾನ್ಯೀಕರಣಗೊಂಡ ಹಳೆಯ ನೋಟುಗಳನ್ನು ಬದಲಾವಣೆ ಮಾಡಲು ಕೆಲವರು ಯತ್ನಿಸಿದ ಬಗ್ಗೆ ಮಾಹಿತಿ ಪಡೆದು ಇನ್ಸ್‌ಪೆಕ್ಟರ್‌ ಆರ್‌.ಪ್ರಕಾಶ್‌ ತಂಡ ದಾಳಿ(Raid) ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಣದಾಸೆ ತೋರಿಸಿ ಜನರಿಗೆ ವಂಚನೆ:

ಐದು ವರ್ಷಗಳ ಹಿಂದೆ ದೇಶದಲ್ಲಿ .1000 ಹಾಗೂ .500 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ(Central Government) ನಿಷೇಧಿಸಿತು. ಈ ನೋಟುಗಳಿಗೆ ಪ್ರಸುತ್ತ ಯಾವುದೇ ಬೆಲೆ ಇಲ್ಲ. ಆದರೆ ಜನರಿಗೆ ಹೆಚ್ಚಿನ ಹಣದಾಸೆ ತೋರಿಸಿ ಟೋಪಿ ಹಾಕಿ ಕೇರಳ ಮೂಲದ ಖೋಟಾ ನೋಟು ದಂಧೆಕೋರರು ಹಣ ಮಾಡುತ್ತಿದ್ದರು. ಪ್ರಸುತ್ತ ಚಲಾವಣೆಯಲ್ಲಿರುವ ಹೊಸ ನೋಟುಗಳಿಗೆ ಹತ್ತು ಪಟ್ಟು ಹಳೇ ನೋಟು ಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದರು. ಅಲ್ಲದೆ ಹಳೆ ನೋಟುಗಳನ್ನು ರಿಸರ್ವ್‌ ಬ್ಯಾಂಕ್‌(Reserve Bank of India) ಮೂಲಕ ಸಕ್ರಮಗೊಳಿಸಿಕೊಳ್ಳಬಹುದು ಎಂದು ನಾಜೂಕಿನಿಂದ ಮಂಕುಬೂದಿ ಎರಚಿ ನಾಗರಿಕರಿಗೆ ಆರೋಪಿಗಳು ಮೋಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ: ಖೋಟಾ ನೋಟು ಚಲಾವಣೆ, ನಾಲ್ವರ ಬಂಧನ

ತೋಟದ ಮನೆಯಲ್ಲಿ ರಾಶಿ ರಾಶಿ ಹಳೆ ನೋಟು

ಎಚ್‌ಬಿಆರ್‌ ಲೇಔಟ್‌ ಸಮೀಪ ಬಂಧಿತರಾದ ಐವರು ಆರೋಪಿಗಳಿಂದ ಅಮಾನ್ಯನೀಕರಣಗೊಂಡ 500 ಮುಖಬೆಲೆಯ 35 ಲಕ್ಷ ಹಣವನ್ನು ಜಪ್ತಿ ಮಾಡಲಾಯಿತು. ಬಳಿಕ ಅವರನ್ನು ಠಾಣೆಗೆ ಕರೆದು ತಂದು ಕೂಲಂಕುಷವಾಗಿ ವಿಚಾರಿಸಿದಾಗ ಇದೇ ರೀತಿ ಕೋಟ್ಯಾಂತರ ರು. ಮೌಲ್ಯದ ಅಮಾನ್ಯೀಕರಣಗೊಂಡ ಹಣವು ಕೇರಳ ರಾಜ್ಯದ ಕಾಸರಗೋಡಿನಲ್ಲಿದೆ ಎಂಬ ಬಾಯ್ಬಿಟ್ಟರು. ಈ ಮಾಹಿತಿ ಆಧರಿಸಿ ಕೇರಳ ರಾಜ್ಯದ ಬೇನೂರು-ಕುಂದಡುಕ್ಕಂ ರಸ್ತೆಯಲ್ಲಿ ಫಾಮ್‌ರ್‍ ಹೌಸ್‌ ಮೇಲೆ ದಾಳಿ ನಡೆಸಿದಾಗ 1000 ಮತ್ತು 500 ಮುಖಬೆಲೆಯ ಕಲರ್‌ ಜೆರಾಕ್ಸ್‌ ಮಾಡಿಸಿದ ರಾಶಿ ರಾಶಿ ನೋಟುಗಳು ಸಿಕ್ಕಿದ್ದವು. ಕೆಲವು ನೋಟುಗಳನ್ನು ಥರ್ಮಕೋಲ್‌ ಮೇಲೆ ಅಂಟಿಸಿ ಬಂಡಲ್‌ ರೀತಿಯಲ್ಲಿ ಮಾಡಿದ್ದರು. ಆ ಫಾರ್ಮ್‌ ಹೌಸ್‌ನಲ್ಲಿ ಥರ್ಮಕೋಲ್‌ ಹಾಗೂ 24 ಮೂಟೆಗಳಲ್ಲಿ ತುಂಬಿದ್ದ ಕಲರ್‌ ಜೆರಾಕ್ಸ್‌ ಮಾಡಿದ ಸುಮಾರು .5 ಕೋಟಿಯಷ್ಟು ನಕಲಿ ನೋಟುಗಳು ಜಪ್ತಿಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪಾಕ್‌ನಿಂದ ನಕಲಿ ನೋಟು

ಕೇರಳ ರಾಜ್ಯದಲ್ಲಿ ಪತ್ತೆಯಾದ ಖೋಟಾ ನೋಟುಗಳು ಪಾಕಿಸ್ತಾನದಿಂದ(Pakistan) ಮೂಲಕ ಬಂದಿರಬಹುದು. ನೋಟು ಅಮಾನ್ಯೀಕರಣಗೊಂಡ ಸಂದರ್ಭದಲ್ಲಿ ಕೇರಳ ಮೂಲದ ವ್ಯಕ್ತಿಗಳ ಮೂಲಕ ಚಲಾವಣೆಗೆ ಪಾಕಿಸ್ತಾನದ ಖೋಟಾ ನೋಟು ದಂಧೆಕೋರರು ನಡೆಸಿದ್ದ ಸಂಚು ವಿಫಲವಾಗಿದೆ. ಹಾಗಾಗಿ ಅಂದು ಸಂಗ್ರಹಿಸಿದ್ದ ನೋಟುಗಳನ್ನು ಈಗಲೂ ಮಾರುಕಟ್ಟೆಯಲ್ಲಿ ಬದಲಾಯಿಸಲು ಯತ್ನಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ಆಮಿಷ ಹೇಗೆ?:

20 ರು. ಅಸಲಿ ನೋಟು ನೀಡಿದರೆ ನಿಮಗೆ ಅಮಾನ್ಯಗೊಂಡಿರುವ 100 ರು. ನೀಡುತ್ತೇವೆ. ಇದನ್ನು ರಿಸರ್ವ್‌ ಬ್ಯಾಂಕ್‌ಗೆ ನೀಡಿದರೆ, ನಿಮಗೆ .100 ಹೊಸ ನೋಟು ನೀಡುತ್ತಾರೆ. ಹೀಗೆ ನಿಮಗೆ 100 ರು.ಗೆ 80 ರು. ಲಾಭ ಸಿಗುತ್ತದೆ ಎಂದು ನಾಜೂಕಿನ ಮಾತುಗಳಿಂದ ಜನರನ್ನು ನಂಬಿಸಿ ಜೆರಾಕ್ಸ್‌ ನೋಟುಗಳನ್ನು ನೀಡಿ ವಂಚಿಸುತ್ತಿದ್ದರು.

ಆರ್‌ಬಿಐಗೇ ಬಂತು 14500 ಮೌಲ್ಯದ ಖೋಟಾ ನೋಟು..!

ಮೋಸ ಹೇಗೆ?:

ದಂಧೆಕೋರರ ಮಾತಿನ ಗಾಳಕ್ಕೆ ಸಿಲುಕುತ್ತಿದ್ದ ಜನ ಸುಲಭವಾಗಿ ವಂಚನೆ ಜಾಲಕ್ಕೆ ಬೀಳುತ್ತಿದ್ದರು. ಹೇಗೆಂದರೆ ಈಗಾಗಲೇ ಸರ್ಕಾರ ಅಮಾನ್ಯಗೊಂಡ ನೋಟುಗಳ ಬದಲಾಗಿ ಹೊಸ ನೋಟು ನೀಡುವುದನ್ನು ನಿಲ್ಲಿಸಿದೆ. ಒಂದೊಮ್ಮೆ ಹೊಸ ನೋಟು ನೀಡುತ್ತಿದ್ದರೂ, ಆರೋಪಿಗಳು ನೀಡುತ್ತಿದ್ದದ್ದು ಜೆರಾಕ್ಸ್‌ ನೋಟುಗಳು(Xerox Note). ಇವುಗಳನ್ನು ಬ್ಯಾಂಕಲ್ಲಿ ಬದಲಾಯಿಸಲು ಸಾಧ್ಯವಾಗುತ್ತಿರಲಿಲ್ಲ.

ಗ್ರಾಹಕರ ಸೋಗಲ್ಲಿ ದಂಧೆಕೋರರ ಸೆರೆ

ನಾಲ್ಕೈದು ವರ್ಷಗಳಿಂದ ಆರೋಪಿಗಳು ದಂಧೆ ನಡೆಸಿದ್ದಾರೆ. ಇತ್ತೀಚಿಗೆ ಈ ದಂಧೆ ಬಗ್ಗೆ ಬಾತ್ಮೀದಾರರ ಮೂಲಕ ಗೋವಿಂದಪುರ ಠಾಣೆ ಇನ್ಸ್‌ಪೆಕ್ಟರ್‌ ಪ್ರಕಾಶ್‌ ಅವರಿಗೆ ಮಾಹಿತಿ ಸಿಕ್ಕಿತು. ಕೂಡಲೇ ಚುರುಕಾದ ಇನ್ಸ್‌ಪೆಕ್ಟರ್‌, ತಾವು ಹಳೆ ನೋಟು ಖರೀದಿಸುವ ನೆಪದಲ್ಲಿ ಸುರೇಶ್‌ ತಂಡವನ್ನು ಸಂಪರ್ಕಿಸಿ ಬಲೆ ಹಾಕಿದ್ದಾರೆ. ತಪ್ಪಿಸಿಕೊಂಡಿರುವ ಕೇರಳ ಮೂಲದ ಆರೋಪಿಗಳು ಪತ್ತೆಯಾದರೆ ದಂಧೆ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.