8 ಸಾವಿರ ಅಸಲಿ ನೋಟಿಗೆ 10 ಸಾವಿರ ಖೋಟಾ ನೋಟು|ಕೇಶ್ವಾಪುರ ಠಾಣೆಯ ಪೊಲೀಸರ ಕಾರ್ಯಾಚರಣೆ| 100, 500 ಮುಖಬೆಲೆಯ ಖೋಟಾ ನೋಟುಗಳನ್ನು ಪ್ರಿಂಟ್‌ ಮಾಡಿ ಚಲಾವಣೆ| ವಿವಿಧ ಕಂಪನಿಯ ಮೊಬೈಲ್‌ ಹಾಗೂ 5200 ರು.ಅಸಲಿ ನೋಟು ವಶ| 

ಹುಬ್ಬಳ್ಳಿ(ಫೆ.06): ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಖೋಟಾ ನೋಟು ಜಾಲವನ್ನು ಪತ್ತೆ ಹಚ್ಚಿರುವ ಪೊಲೀಸರು, ನಾಲ್ವರನ್ನು ಬಂಧಿಸಿ 66,500 ರು. ಖೋಟಾ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. 100, 200, 500 ರು. ಮುಖಬೆಲೆ ನೋಟುಗಳನ್ನು ಪ್ರಿಂಟ್‌ ಮಾಡಿ ಈ ಜಾಲ ಚಲಾವಣೆ ಮಾಡುತ್ತಿತ್ತು.

ಇಲ್ಲಿನ ಮೂರುಸಾವಿರ ಮಠದ ಹಿಂಭಾಗದ ಗುರುಸಿದ್ಧೇಶ್ವರ ನಗರದ ಗೋಪಿನಾಥ ಜಗನ್ನಾಥ ಹಬೀಬ (45), ನೇಕಾರನಗರ ಟಿಪ್ಪುನಗರದ ನಿವಾಸಿ ಶ್ರೀನಿವಾಸ ವಾಸಪ್ಪ ತಟ್ಟಿ(43), ದೇವರಗುಡಿಹಾಳದ ಮಡ್ಡಿಓಣಿಯ ಮೌಲಾಸಾಬ ಮಕ್ತುಮಸಾಬ ಗುಡಿಹಾಳ (29), ಸದರಸೋಪಾ ಕೋಳೆಕರ್‌ ಪ್ಲಾಟ್‌ ಸ್ಮಶಾನಗಟ್ಟಿಯ ನಿವಾಸಿ ಸಲೀಂ ಇಮಾಮಸಾಬ ಮುಲ್ಲಾ (28) ಬಂಧಿತರು. ಇವರು 100, 500 ಮುಖಬೆಲೆಯ ಖೋಟಾ ನೋಟುಗಳನ್ನು ಪ್ರಿಂಟ್‌ ಮಾಡಿ ಚಲಾವಣೆ ಮಾಡುತ್ತಿದ್ದರು. ನೋಟುಗಳನ್ನು ಗೋಪಿನಾಥ ಹಬೀಬ ಪ್ರಿಂಟ್‌ ಮಾಡುತ್ತಿದ್ದ. ಈತ 8 ಸಾವಿರ ಅಸಲಿ ನೋಟು ನೀಡಿದರೆ, 10 ಸಾವಿರ ರು. ಖೋಟಾ ನೋಟು ನೀಡುತ್ತಿದ್ದ. ಉಳಿದ ಮೂವರು ಅವುಗಳನ್ನು ಚಲಾವಣೆ ಮಾಡಿಕೊಂಡು ಬರುತ್ತಿದ್ದರು.

ಮಾಸ್ಕ್‌ ಧರಿಸದೇ ಸಿಕ್ಕಿಬಿದ್ದ ನಕಲಿ ನೋಟು ದಂಧೆಕೋರರು..!

ಕೇಶ್ವಾಪುರ ಚರ್ಚ್‌ ಬಳಿ ಖೋಟಾ ನೋಟು ಚಲಾವಣೆ ಮಾಡಲು ತೊಡಗಿದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 100 ಮುಖಬೆಲೆಯ 200 ಖೋಟಾ ನೋಟು, . 500 ಮುಖಬೆಲೆಯ 93 ಖೋಟಾ ನೋಟು, 4 ವಿವಿಧ ಕಂಪನಿಯ ಮೊಬೈಲ್‌ಗಳನ್ನು ಹಾಗೂ 5200 ರು.ಅಸಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣವೂ ಕೇಶ್ವಾಪುರ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪೊಲೀಸ್‌ ಆಯುಕ್ತ ಲಾಬುರಾಮ್‌, ಡಿಸಿಪಿಗಳಾದ ಕೆ. ರಾಮಾನುಜನ್‌, ಆರ್‌.ಬಿ. ಬಸರಗಿ, ಎಸಿಪಿ ವಿನೋದ ಮುಕ್ತೆದಾರ ಇವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಯಿತು. ದಾಳಿಯಲ್ಲಿ ಕೇಶ್ವಾಪುರ ಠಾಣೆಯ ಪಿಐ ಸುರೇಶ ಕುಂಬಾರ, ಪಿಎಸ್‌ಐ ಬಾಬಾ ಎಂ., ಸಿಬ್ಬಂದಿಗಳಾದ ಎಂ.ಡಿ. ಕಾಲವಾಡ, ಆರ್‌.ಎಲ್‌. ರಾಠೋಡ, ವಿ.ಎ. ಅಳಗವಾಡಿ, ಎಚ್‌.ಆರ್‌. ರಾಮಾಪುರ, ಎಸ್‌.ಡಿ. ಗೌಡರ ಪಾಲ್ಗೊಂಡಿದ್ದರು.