ಪ್ರಿಯಕರನೊಂದಿಗೆ ಓಡಿ ಹೋದ ಮಗಳು: ಮನನೊಂದು ತಂದೆ ಆತ್ಮಹತ್ಯೆ, ಈ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವಾ?
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ನಡೆದ ಘಟನೆ
ವಿಜಯಪುರ(ಅ.04): ಪ್ರಿಯಕರನೊಂದಿಗೆ ಓಡಿ ಹೋದ ಅಪ್ರಾಪ್ತ ವಯಸ್ಸಿನ ಮಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮನನೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ.
ಗಂಗಾಧರ ಬಡಿಗೇರ (44) ಎಂಬುವರೇ ಆತ್ಮಹತ್ಯೆಗೆ ಶರಣಾದ ಸಾರಿಗೆ ಇಲಾಖೆ ನೌಕರರಾಗಿದ್ದಾರೆ. ಗ್ರಾಮದ ಹೊರ ಭಾಗದ ಕೆನಾಲ್‌ಗೆ ಹಾರಿ ಗಂಗಾಧರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಗಂಗಾಧರನ ಅಪ್ರಾಪ್ತ ವಯಸ್ಸಿನ ಮಗಳು ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಳು. ಅದೇ ಗ್ರಾಮದ ಸಂತೋಷ ಪಟ್ಟೇದ (24) ಎಂಬ ಯುವಕನೊಂದಿಗೆ ಯುವತಿ ಮನೆ ಬಿಟ್ಟು ಹೋಗಿದ್ದಳು. ಎಷ್ಟೇ ಹುಡುಕಾಡಿದರೂ ಮಗಳು ಪತ್ತೆಯಾಗಿರಲಿಲ್ಲ.
ಈ ಸಂಬಂಧ ಗಂಗಾಧರ ಬಡಿಗೇರ ಬಸವನಬಾಗೇವಾಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ನೀಡಿದ್ದರೂ ಇಲ್ಲಿಯವರೆಗೆ ಗಂಗಾಧರ ಬಡಿಗೇರ ಅಪ್ರಾಪ್ತ ವಯಸ್ಸಿನ ಮಗಳು ಪತ್ತೆಯಾಗಿರಲಿಲ್ಲ. ಹಲವಾರು ಬಾರಿ ಠಾಣೆಗೆ ಅಲೆದಾಡಿದ್ದರೂ ಪ್ರಯೋಜವಾಗಿರಲಿಲ್ಲ ಅಂತ ತಿಳಿದು ಬಂದಿದೆ.
ಸಾಲಬಾಧೆ: ಬೀಗ ಹಾಕಿದ ಬೇರೆಯವರ ಮನೆ ಗ್ಯಾಲರಿಯಲ್ಲಿ ಮಹಿಳೆ ನೇಣಿಗೆ ಶರಣು
ಮಗಳು ಓಡಿ ಹೋದಳು, ಪೊಲೀಸರು ಆಕೆಯನ್ನು ಪತ್ತೆ ಮಾಡಲಿಲ್ಲ ಎಂದು ಗಂಗಾಧರ ಬಡಿಗೇರ ತೀವ್ರವಾಗಿ ಮನನೊಂದಿದ್ದರು. ಇದರಿಂದ ಅವಮಾನಗೊಂಡು ಮರ್ಯಾದೆಯಾಗಿ ಗಂಗಾಧರ ಸಾವಿಗೆ ಶರಣಾಗಿದ್ದಾರೆ. ಗಂಗಾಧರ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ ಪೊಲೀಸರ ಜೊತೆಗೆ ಗ್ರಾಮಸ್ಥರು ವಾಗ್ವಾದ ನಡೆಸಿ ಸ್ಥಳಕ್ಕೆ ಎಸ್ಪಿ ಆಗಮಿಸಬೇಕೆಂದು ಒತ್ತಾಯಿಸಿದ್ದರು.