ಮೈಸೂರು: ನಂಜನಗೂಡಲ್ಲಿ ಕತ್ತು ಕೊಯ್ದು ವ್ಯಕ್ತೆ ಕೊಲೆ, ವಾಮಾಚಾರದ ಶಂಕೆ?
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸದಾಶಿವನ ದೇಹದ ಸಮೀಪದಲ್ಲಿಯೇ ನಿಂಬೆಹಣ್ಣು, ಎಲೆ ಅಡಿಕೆ ಹಾಗೂ 101 ರು. ಹಣ ಸೇರಿದಂತೆ ಹೊಸ ಬ್ಲೇಡ್ ಗಳು ಸ್ಥಳದಲ್ಲಿ ಪತ್ತೆಯಾಗಿದ್ದು, ಇದರಿಂದ ವಾಮಾಚಾರ ನಡೆಸಲಾಗಿದೆ ಎಂದು ಕೆಲ ಸ್ಥಳೀಯರು ದೂರಿದ್ದಾರೆ.
ನಂಜನಗೂಡು(ಅ.19): ಕತ್ತು ಕೊಯ್ದು ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಮಲ್ಕುಂಡಿ ಗ್ರಾಮದ ನಿವಾಸಿ ಅಂಜನಯ್ಯ ಎಂಬವರ ಪುತ್ರ ಸದಾಶಿವ (43) ಮೃತಪಟ್ಟ ವ್ಯಕ್ತಿ.
ತಾಲೂಕಿನ ಮಡುವಿನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಸಮೀಪ ನೀರು ಹರಿಯುವ ಹಳ್ಳದ ಬಳಿ ಶುಕ್ರವಾರ ಬೆಳಗ್ಗೆ ರಕ್ತದ ಮಡುವಿನಲ್ಲಿ ಚೀರಾಡುತ್ತಾ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲು ಮುಂದಾದರಾದರೂ ಮಾರ್ಗದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕಾಫಿನಾಡಲ್ಲಿ ಭಯಂಕರ ವಾಮಾಚಾರ: ಮಡಿಕೆಗೆ ಕಾಳಿ ರೂಪ ನೀಡಿ ಪ್ರಾಣಿ ಬಲಿ
ಬಳಿಕ ಮೃತದೇಹವನ್ನು ನಂಜನಗೂಡು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಮೃತನ ಸಹೋದರ ರಂಗರಾಮು ಎಂಬುವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಾಮಾಚಾರದ ಶಂಕೆ
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸದಾಶಿವನ ದೇಹದ ಸಮೀಪದಲ್ಲಿಯೇ ನಿಂಬೆಹಣ್ಣು, ಎಲೆ ಅಡಿಕೆ ಹಾಗೂ 101 ರು. ಹಣ ಸೇರಿದಂತೆ ಹೊಸ ಬ್ಲೇಡ್ ಗಳು ಸ್ಥಳದಲ್ಲಿ ಪತ್ತೆಯಾಗಿದ್ದು, ಇದರಿಂದ ವಾಮಾಚಾರ ನಡೆಸಲಾಗಿದೆ ಎಂದು ಕೆಲ ಸ್ಥಳೀಯರು ದೂರಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ಮೈಸೂರು ಜಿಲ್ಲಾ ಎಸ್ಪಿ ವಿಷ್ಣುವರ್ಧನ ಮತ್ತು ನಂಜನಗೂಡಿನ ಡಿವೈಎಸ್ಪಿ ರಘು, ಹುಲ್ಲಹಳ್ಳಿ ಠಾಣೆ ಎಸ್ಐ ಚೇತನ್ ಕುಮಾರ್ ಅಪರಾಧ ಕೃತ್ಯದ ಬಗ್ಗೆ ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸುವುದಾಗಿ ಮೃತನ ಕುಟುಂಬದವರಿಗೆ ಭರವಸೆ ನೀಡಿದರು.