ತಂದೆ ಮೃತದೇಹದೊಂದಿಗೆ ಮಗನೊಬ್ಬ ಮೂರು ತಿಂಗಳು ಕಳೆದ ಘಟನೆ ಕೋಲ್ಕತ್ತದಲ್ಲಿ ನಡೆದಿದೆ. ಹೋಟೆಲ್‌ ಮಾಲೀಕನೊಬ್ಬ ಪೊಲೀಸರಿಗೆ ನೀಡಿದ ಮಾಹಿತಿಯಿಂದ ವಿಷಯ ಬೆಳಕಿಗೆ ಬಂದಿದೆ.

ಕೋಲ್ಕತ್ತ (ನ.24): ತಂದೆಯ ಮೃತದೇಹದೊಂದಿಗೆ ಮಗ ಬರೋಬರಿ ಮೂರು ತಿಂಗಳು ಕಳೆದಿರೋ ವಿಚಿತ್ರ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ನಡೆದಿದೆ. 40 ವರ್ಷದ ಕೌಶಿಕ್‌ ಡೇ (Kaushik Dey)ಎಂಬಾತನ ತಂದೆ 70 ವರ್ಷದ ಸಂಗ್ರಾಮ್‌ ಡೇ (Sangram Dey)ಅಂದಾಜು ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ಆದ್ರೆ ಕೌಶಿಕ್‌ ಈ ವಿಷಯವನ್ನು ಯಾರಿಗೂ ತಿಳಿಸದೆ ಶವಸಂಸ್ಕಾರವನ್ನೂ ಮಾಡದೆ ಅದರೊಂದಿಗೇ ಮೂರು ತಿಂಗಳು ಕಳೆದಿದ್ದಾನೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವವನ್ನು ಪೋಸ್ಟ್‌ಮಾರ್ಟಮ್‌ಗೆ (Post mortem) ಕಳುಹಿಸಿದ್ದಾರೆ. ಮೇಲ್ನೋಟಕ್ಕೆ ಸಂಗ್ರಾಮ್‌ ಡೇ ವಯೋಸಹಜ ಕಾಯಿಲೆಗಳಿಂದ ನಿಧನ ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ. ಪೋಸ್ಟ್‌ಮಾರ್ಟಮ್‌ ವರದಿ ಬಂದ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸಂಗ್ರಾಮ್‌ ಡೇ ಮುಂಬೈ ಬಾಬಾ ಅಟೋಮಿಕ್‌ ರಿಸರ್ಚ್‌ ಸೆಂಟರ್‌ನ (Bhabha Automic Research Center) ನಿವೃತ್ತ ಉದ್ಯೋಗಿ.

ಮಾನಸಿಕ ಅಸ್ವಸ್ಥ
ತಂದೆ ಸಾವನ್ನಪ್ಪಿ ಮೂರು ತಿಂಗಳಾಗಿವೆ ಎಂಬ ಮಾಹಿತಿಯನ್ನು ಕೌಶಿಕ್ ತನಿಖೆ ವೇಳೆ ನೀಡಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಆದ್ರೆ ನವೆಂಬರ್‌ 2ರಂದು ತಂದೆಯ ಸಾವಿನ ಬಗ್ಗೆ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಈತ ಮಾಹಿತಿ ನೀಡಿದ್ದಾನೆ ಎಂದು ಕೂಡ ಹೇಳಲಾಗುತ್ತಿದೆ. ಕೌಶಿಕ್‌ ಮಾನಸಿಕ ಅಸ್ವಸ್ಥನಾಗಿದ್ದು, ಮನೋವೈದ್ಯರ ಸಲಹೆ ಪಡೆದ ಬಳಿಕ ವಿಚಾರಣೆ ನಡೆಸೋದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ನೀಡಿದ ಸ್ವಂತ ತಂದೆ : ಸ್ನೇಹಿತರಿಂದ ಅಪ್ಪನ ಕೊಲ್ಲಿಸಿದ ಮಗಳು

ಮನೆಯಲ್ಲೇ ಇದ್ದ ತಾಯಿ
ಈ ಘಟನೆಯಲ್ಲಿ ಪೊಲೀಸರನ್ನು ಆಶ್ಚರ್ಯಕ್ಕೀಡು ಮಾಡಿದ ಇನ್ನೊಂದು ಸಂಗತಿಯೆಂದ್ರೆ ಕೌಶಿಕ್‌ ತಾಯಿ 65 ವರ್ಷದ ಅರುಣಾ ಡೇ ಕೂಡ ಅದೇ ಮನೆಯಲ್ಲಿದ್ದರು. ಆಕೆ ಅನಾರೋಗ್ಯದಿಂದ ಬಳಲುತ್ತಿದ್ದು, ಪೊಲೀಸರು ಆಕೆಯ ಹೇಳಿಕೆಗಳನ್ನು ಕೂಡ ದಾಖಲಿಸಿಕೊಂಡಿದ್ದಾರೆ. ಆಕೆ ಹೇಳಿಕೆ ಪ್ರಕಾರ ಕೌಶಿಕ್‌ ನಿರುದ್ಯೋಗಿಯಾಗಿದ್ದು, ತಂದೆ ಶವ ಸಂಸ್ಕಾರಕ್ಕೆ ಹಣ ನೀಡುವಂತೆ ಕೇಳಿದಾಗ ಕೊಟ್ಟಿರಲಿಲ್ಲವಂತೆ. ಅಲ್ಲದೆ, ತಂದೆ ಸಾಮಾಜಿಕ ಮರಣವನ್ನಷ್ಟೇ ಹೊಂದಿದ್ದಾರೆ. ಅವರು ಜೀವಂತವಿದ್ದು, ಆದಷ್ಟು ಬೇಗ ಎದ್ದು ಬರುತ್ತಾರೆ ಎಂದು ಕೌಶಿಕ್‌ ಹೇಳಿರೋದಾಗಿ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸುಳಿವು ನೀಡಿದ ಹೋಟೆಲ್‌ ಮಾಲೀಕ
ವಿಶ್ವಕರ್ಮ ಪೂಜೆ ಬಳಿಕ ಸಂಗ್ರಾಮ್‌ ಸಿಂಗ್‌ ಮನೆಯಿಂದ ಹೊರಬಂದಿಲ್ಲ ಎಂಬ ಮಾಹಿತಿಯನ್ನು ಅಕ್ಕಪಕ್ಕದವರು ಪೊಲೀಸರಿಗೆ ನೀಡಿದ್ದಾರೆ. ಸಂಗ್ರಾಮ್‌ ಹಾಗೂ ಅವರ ಪತ್ನಿ ಸುನೀಲ್‌ ಕಾರ್‌ ಎಂಬುವರ ಹೋಟೆಲ್‌ನಿಂದ ಆಗಾಗ ರೋಟಿ ಹಾಗೂ ಬೇಯಿಸಿದ ತರಕಾರಿಗಳನ್ನು ಆರ್ಡರ್‌ ಮಾಡುತ್ತಿದ್ದರು. ಆದ್ರೆ ಕೆಲವು ದಿನಗಳಿಂದ ಸಂಗ್ರಾಮ್‌ ಡೇ ಹೋಟೆಲ್‌ನತ್ತ ಬಂದಿರಲಿಲ್ಲ. ಬದಲಿಗೆ ಕೌಶಿಕ್‌ ಬಂದು ಎಂದಿಗಿಂತ ಕಡಿಮೆ ರೋಟಿಗಳನ್ನು ಪಡೆದು ಹಿಂತಿರುಗುತ್ತಿದ್ದ. ಇದರಿಂದ ಅನುಮಾನಗೊಂಡ ಸುನೀಲ್, ತಂದೆ ಕುರಿತು ಕೌಶಿಕ್‌ ಬಳಿ ವಿಚಾರಿಸಿದ್ದಾರೆ. ಆಗ ಕೌಶಿಕ್‌ ತಂದೆಗೆ ಅನಾರೋಗ್ಯ, ಹೀಗಾಗಿ ಮನೆಯಲ್ಲೇ ಇರುತ್ತಾರೆ ಎಂಬ ಉತ್ತರ ನೀಡಿದ್ದ. ಕೌಶಿಕ್‌ ಮಾತಿನಿಂದ ಅನುಮಾನಗೊಂಡ ಸುನೀಲ್‌ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಶ್ರೀಮಂತನೆಂದು ಭಾವಿಸಿ ಆಟೊ ಚಾಲಕನ ಪುತ್ರ ಕಿಡ್ನಾಪ್‌

ಮೂರು ತಿಂಗಳಿಂದ ಪಿಂಚಣಿ (Pension) ಡ್ರಾ ಮಾಡಿಲ್ಲ
ಸಂಗ್ರಾಮ್‌ಗೆ ಪ್ರತಿ ತಿಂಗಳು ಪಿಂಚಣಿ (Pension) ಬರುತ್ತಿತ್ತು. ಆದ್ರೆ ಕಳೆದ ಮೂರು ತಿಂಗಳಿಂದ ಪಿಂಚಣಿ ಹಣವನ್ನು ಡ್ರಾ ಮಾಡಿಲ್ಲ. ಪೊಲೀಸರು ಸಂಗ್ರಾಮ್‌ ಹಾಗೂ ಕೌಶಿಕ್‌ ಇಬ್ಬರ ಬ್ಯಾಂಕ್‌ ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದು, ಸಾವಿನ ಹಿಂದೆ ಬೇರೆ ಕಾರಣವೇನಾದ್ರೂ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಈ ತನಕ ಅಂಥ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

30 ಸಾವಿರದಲ್ಲಿ ಜೀವನ
ತಂದೆ ಸಾವನ್ನಪ್ಪುವ ಮುನ್ನ 30 ಸಾವಿರ ರೂ. ವಿತ್‌ಡ್ರಾ ಮಾಡಿದ್ದರು. ಆ ಹಣದಲ್ಲೇ ನಾನು ಹಾಗೂ ತಾಯಿ ಕೆಲವು ವಾರಗಳನ್ನು ಕಳೆದಿದ್ದೇವೆ ಎಂದು ಕೌಶಿಕ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸಂಗ್ರಾಮ್‌ 2001ರಲ್ಲಿ ಒಂದು ಮಹಡಿಯ ಮನೆಯನ್ನು ನಿರ್ಮಿಸಿದ್ದರು. ಈ ಮನೆಯಲ್ಲೇ ಕಳೆದ 20 ವರ್ಷಗಳಿಂದ ಜೀವನ ನಡೆಸುತ್ತಿದ್ದರು.