Asianet Suvarna News Asianet Suvarna News

ಕೇರಳ ಮೂಲದ 4 ವರ್ಷದ ಬಾಲಕಿ ಕತಾರ್‌ನಲ್ಲಿ ಸಾವು: ಸ್ಕೂಲ್ ಬಸ್ ಒಳಗೆ ಶವ ಪತ್ತೆ

ಕೇರಳ ಮೂಲದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದ ದಿನವೇ ಶಾಲಾ ಬಸ್ ಒಳಗೆ ನಿಗೂಢವಾಗಿ ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಅರಬ್ ರಾಷ್ಟ್ರ ಕತಾರ್‌ನಲ್ಲಿ ನಡೆದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕತಾರ್ ಆಡಳಿತ ಬಾಲಕಿ ಹೋಗುತ್ತಿದ್ದ ಕಿಂಡರ್ಗಾಟನ್ ಅನ್ನು ಬಂದ್ ಮಾಡಿದೆ.

4 year old kerala based school girl died in school bus at Qatar, three arrested, Qatar government shuts kindergarten akb
Author
First Published Sep 14, 2022, 11:15 AM IST | Last Updated Sep 14, 2022, 11:45 AM IST

ಕತಾರ್: ಕೇರಳ ಮೂಲದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದ ದಿನವೇ ಶಾಲಾ ಬಸ್ ಒಳಗೆ ನಿಗೂಢವಾಗಿ ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಅರಬ್ ರಾಷ್ಟ್ರ ಕತಾರ್‌ನಲ್ಲಿ ನಡೆದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕತಾರ್ ಆಡಳಿತ ಬಾಲಕಿ ಹೋಗುತ್ತಿದ್ದ ಕಿಂಡರ್ಗಾಟನ್ ಅನ್ನು ಬಂದ್ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. 

ಈ ಬಗ್ಗೆ ತನಿಖೆ ಕೈಗೊಂಡಿರುವ ಕತಾರ್‌ನ ಶಿಕ್ಷಣ ಸಚಿವಾಲಯ (Qatar's Education Ministry), ಶಾಲಾ ಸಿಬ್ಬಂದಿ ಪ್ರೋಟೋಕಾಲ್ ಅನುಸರಿಸಲು ವಿಫಲವಾಗಿದ್ದಾರೆ ಎಂಬುದನ್ನು ಕಂಡುಕೊಂಡಿದ್ದು, ಕಿಂಡರ್ಗಾಟನ್‌ ಅನ್ನು ಮುಚ್ಚುವುದಕ್ಕೆ ಆದೇಶಿಸಿರುವುದರ ಜೊತೆ, ಶಾಲಾ ಬಸ್ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿ ಮೂವರನ್ನು ಬಂಧಿಸಿದೆ. ಜೊತೆಗೆ ಅಲ್ ವಕ್ರಾದಲ್ಲಿರುವ ಸ್ಪ್ರೀಂಗ್ ಫೀಲ್ಡ್‌  ಶಿಶುವಿಹಾರವನ್ನು ಮುಚ್ಚಲು ಕತಾರ್‌ನ ಶಿಕ್ಷಣ ಸಚಿವಾಲಯ ಆದೇಶಿಸಿದೆ. ಶಾಲೆಯ ಸಿಬ್ಬಂದಿಯ ನಿರ್ಲಕ್ಷ್ಯವೇ 4 ವರ್ಷದ ಮಗು ಮಿನ್ಸ ಮರಿಯಮ್ ಜಾಕೊಬ್ (Minsa Mariam Jacob) ಸಾವಿಗೆ ಪ್ರಮುಖ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. 

ಅಮೆರಿಕದಲ್ಲಿ ಭಾರತ ಮೂಲದ ವ್ಯಕ್ತಿಯ ಕೊಲೆ: ಕಾರಿನಲ್ಲಿ ಕುಳಿತಿದ್ದವನ ಮೇಲೆ ಗುಂಡಿನ ದಾಳಿ

4 ವರ್ಷದ ಬಾಲಕಿ ಮಿನ್ಸ ಮರಿಯಮ್ ಜಾಕೊಬ್ ಅವರ ಪೋಷಕರು ಕೇರಳ ಮೂಲದವರಾಗಿದ್ದು, ಆಕೆ ಸೆಪ್ಟೆಂಬರ್ 11 ರಂದು ಆಕೆಯ ಹುಟ್ಟುಹಬ್ಬದ (birthday) ದಿನವೇ ಶಾಲಾ ಬಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ನಾಲ್ಕು ವರ್ಷದ ಈ ಬಾಲಕಿ ಶಾಲಾ ಬಸ್‌ನೊಳಗೆ 4 ಗಂಟೆಗಳ ಕಾಲ ಲಾಕ್ ಆದ ಪರಿಣಾಮ ಅದರೊಳಗಿನ ತೀವ್ರವಾದ ಶಾಖದಿಂದಾಗಿ ಸಾವನ್ನಪ್ಪಿದ್ದಳು. 
 
ಘಟನೆಗೆ ಸಂಬಂಧಿಸಿದಂತೆ ಏಷ್ಯಾನೆಟ್ ನೆಟ್‌ವರ್ಕ್‌ಗೆ ಮಿನ್ಸಾ ಅವರ ಕುಟುಂಬದವರು ಮಾಹಿತಿ ನೀಡಿದ್ದು, ಮಿನ್ಸಾಳನ್ನು ಭಾನುವಾರ ಬೆಳಗ್ಗೆ ಶಾಲಾ ಬಸ್ ಮನೆ ಸಮೀಪದಿಂದ ಕರೆದುಕೊಂಡು ಹೋಗಿದೆ. ಈ ಮಧ್ಯೆ ಬಾಲಕಿ ಶಾಲಾ ಬಸ್‌ನಲ್ಲಿ ನಿದ್ದೆಗೆ ಜಾರಿದ್ದಾಳೆ. ಆದರೆ ಬಸ್‌ನ ಸಿಬ್ಬಂದಿ ಆಕೆಯನ್ನು ಗಮನಿಸುವಲ್ಲಿ ವಿಫಲವಾಗಿದ್ದು, ಬಸ್ ಲಾಕ್ ಮಾಡಿ  ತೆರೆದ ಸ್ಥಳದಲ್ಲಿ ಬಸ್ ಅನ್ನು ಪಾರ್ಕಿಂಗ್ ಮಾಡಿ ಹೊರಟು ಹೋಗಿದ್ದಾರೆ. ಇತ್ತ ಬಸ್‌ನಲ್ಲಿ ಯಾವುದೇ ಕಿಟಕಿ ಕೂಡ ತೆರೆದಿರಲಿಲ್ಲ. ಜೊತೆಗೆ ಅಂದು ಅಲ್ ವಕ್ರಾದಲ್ಲಿ(Al Wakrah)  ತಾಪಮಾನ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಬಿಸಿಲಿನ ತಾಪಕ್ಕೆ ಇಡೀ ಬಸ್ ಕಾದ ಕಬ್ಬಿಣದಂತಾಗಿದೆ. ಜೊತೆಗೆ ಗಾಳಿಯಾಡಲು ಕೂಡ ಯಾವುದೇ ಅವಕಾಶವಿರದ ಪರಿಣಾಮ ಬಾಲಕಿ ಉಸಿರುಕಟ್ಟಿ ಸಾವನ್ನಪ್ಪಿದ್ದಾಳೆ. 

Madhya Pradesh: ಶಾಲಾ ಬಸ್‌ ಚಾಲಕನಿಂದ 3.5 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಇತ್ತ ಬಸ್‌ನ ಸಿಬ್ಬಂದಿ ಮಧ್ಯಾಹ್ನದ ನಂತರ ಶಾಲಾ ತರಗತಿಗಳು ಮುಗಿದ ಮೇಲೆ ವಿದ್ಯಾರ್ಥಿಗಳನ್ನು ವಾಪಸ್ ಕರೆದುಕೊಂಡು ಹೋಗಿ ಮನೆಗೆ ತಲುಪಿಸುವ ಸಲುವಾಗಿ ಬಸ್‌ನತ್ತ ಬಂದಾಗ ಬಸ್ ಒಳಗೆ ಬಾಲಕಿ ಪ್ರಜ್ಞಾಶೂನ್ಯಳಾಗಿ ಬಿದ್ದಿರುವುದು ಗೊತ್ತಾಗಿ ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ. 

ಕತಾರ್‌ನ ಶಿಕ್ಷಣ ಸಚಿವಾಲಯವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಹಾಗೂ ಗರಿಷ್ಠ ಶಿಕ್ಷೆ ನೀಡಲಾಗುವುದು ಎಂದು ಭರವಸೆ ನೀಡಿದೆ. ಸಚಿವಾಲಯವು ನಡೆಸಿದ ತನಿಖೆಯಲ್ಲಿ ಶಾಲಾ ಸಿಬ್ಬಂದಿ ಸರಿಯಾದ ಪ್ರೋಟೋಕಾಲ್ ಅನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. ಶಿಶುವಿಹಾರವನ್ನು ಮುಚ್ಚಲು ಆದೇಶ ನೀಡುವುದರ ಜೊತೆಗೆ, ಕರ್ತವ್ಯಲೋಪ ಎಸಗಿದ ಶಾಲಾ ಬಸ್ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಸಚಿವಾಲಯ ಮುಂದಾಗಿದೆ.

ಏತನ್ಮಧ್ಯೆ, ಮಿನ್ಸಾ ಅವರ ಪಾರ್ಥಿವ ಶರೀರವು ಕೇರಳ ತಲುಪಿದೆ. ಕೊಚ್ಚಿನ್‌ನ (Cochin) ನೆಡುಂಬಸ್ಸೆರಿ ವಿಮಾನ ನಿಲ್ದಾಣಕ್ಕೆ (Nedumbassery airport) ಆಗಮಿಸಿದ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಸ್ವೀಕರಿಸಿದ್ದಾರೆ. ನಾಲ್ಕು ವರ್ಷದ  ಮಿನ್ಸಾ, ಅಭಿಲಾಷ್ ಚಾಕೋ (Abhilash Chacko) ಮತ್ತು ಸೌಮ್ಯ ದಂಪತಿಯ ಕಿರಿಯ ಮಗಳಾಗಿದ್ದು, ಮಿನ್ಸಾ ತಾಯಿ ಸೌಮ್ಯಾ ಕತಾರ್ ವಿಶ್ವಕಪ್ ಸಮಿತಿಯಲ್ಲಿ ಹಿರಿಯ ಗ್ರಾಫಿಕ್ ಡಿಸೈನರ್ (graphic designer) ಆಗಿದ್ದಾರೆ. ಮಿನ್ಸಾಳ ಸಹೋದರಿ, ಮೀಖಾ ಮರ್ಯಮ್ ಜಾಕೋಬ್ ಎಂಇಎಸ್ ಇಂಡಿಯನ್ ಸ್ಕೂಲ್‌ನಲ್ಲಿ  ಎರಡನೇ ತರಗತಿಯಲ್ಲಿ ಓದುತ್ತಿದ್ದಾರೆ.

Latest Videos
Follow Us:
Download App:
  • android
  • ios