ಅಮೆರಿಕದಲ್ಲಿ ಭಾರತ ಮೂಲದ ವ್ಯಕ್ತಿಯ ಕೊಲೆ: ಕಾರಿನಲ್ಲಿ ಕುಳಿತಿದ್ದವನ ಮೇಲೆ ಗುಂಡಿನ ದಾಳಿ
NRI Killed in America: ಕಳೆದೆರಡು ವಾರಗಳ ಅಂತರದಲ್ಲಿ ಭಾರತ ಮೂಲದ ಇಬ್ಬರು ವ್ಯಕ್ತಿಗಳ ಮೇಲೆ ಅಮೆರಿಕಾದಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರೂ ಮೃತಪಟ್ಟಿದ್ದಾರೆ. ಮೃತ ಪಟ್ಟವನನ್ನು ಸತ್ನಾಮ್ ಸಿಂಗ್ ಎಂದು ಗುರುತಿಸಗಿದ್ದು, ಇದುವರೆಗೂ ಯಾವುದೇ ಬಂಧನವಾಗಿಲ್ಲ.
ನ್ಯೂ ಯಾರ್ಕ್: 31 ವರ್ಷದ ಭಾರತ ಮೂಲದ ವ್ಯಕ್ತಿಯೊಬ್ಬನನ್ನು ಅಮೆರಿಕದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪಾರ್ಕಿಂಗ್‌ನಲ್ಲಿ ಕಾರೊಳಗೆ ಕುಳಿತಿದ್ದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ಮಾಡಿ ಕೊಲೆ ಮಾಡಲಾಗಿದೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗಷ್ಟೆ ಅನಿವಾಸಿ ಭಾರತೀಯನೊಬ್ಬನ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಅನಿವಾಸಿ ಭಾರತೀಯನ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಮೃತಪಟ್ಟಿದ್ದ. ಇದೇ ರೀತಿಯ ಮತ್ತೊಂದು ಘಟನೆ ಇಂದು ಕೂಡ ಕೇಳಿ ಬಂದಿದೆ.
ವರದಿಗಳ ಪ್ರಕಾರ ಭಾರತದ ಪ್ರಜೆ, ಸ್ನೇಹಿತನ ಎಸ್‌ಯುವಿಯೊಳಗೆ ಮನೆಯ ಬಳಿಯೇ ಕುಳಿತಿದ್ದ. ಈ ವೇಳೆ ಆಗಮಿಸಿದ ಆಗಂತುಕರು ಶೂಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ನ್ಯೂ ಯಾರ್ಕಿನ ಸೌಥ್ ಓಜೋನ್ ಪಾರ್ಕ್ ಬಳಿ ಮೃತ ಸತ್ನಾಮ್ ಸಿಂಗ್ ಸ್ನೇಹಿತನ ಜೀಪ್ ರ್ಯಾಂಗ್ಲರ್ ಎಸ್‌ಯುವಿಯೊಳಗೆ ಕುಳಿತಿದ್ದ. ಆಗ ಒಬ್ಬ ವ್ಯಕ್ತಿ ಪಿಸ್ಟೋಲ್ ಜತೆಗೆ ಬಂದು, ಸತ್ನಾಮ್ ಸಿಂಗ್‌ಗೆ ಗುಂಡಿಕ್ಕಿದ್ದಾನೆ. ಶನಿವಾರ ಮಧ್ಯಾಹ್ನ ಸುಮಾರು 3.45ಕ್ಕೆ ಈ ಘಟನೆ ನಡೆದಿದೆ ಎಂದು ನ್ಯೂ ಯಾರ್ಕ್ ಡೈಲಿ ನ್ಯೂಸ್ ವರದಿ ಮಾಡಿದೆ. ಪೊಲೀಸರ ಮಾಹಿತಿ ಪ್ರಕಾರ ಸತ್ನಾಮ್ ಸಿಂಗ್ ಸಾವನ್ನಪ್ಪಿದ ಸ್ಥಳದಿಂದ ಕೊಂಚ ದೂರ ಅವರು ವಾಸಿಸುತ್ತಿದ್ದರು.
ಇದನ್ನೂ ಓದಿ: ಶಾಲಾ ಶೂಟೌಟ್ ಪ್ರಕರಣಗಳಿಂದ ಎಚ್ಚೆತ್ತ ದೊಡ್ಡಣ್ಣ, ಅಮೆರಿಕದಲ್ಲಿ ಗನ್‌ಗಳಿಗೆ ಲಗಾಮು!
ಸತ್ನಾಮ್ ಸಿಂಗ್ ಎದೆ ಮತ್ತು ಕತ್ತಿಗೆ ಗುಂಡು ತಗುಲಿತ್ತು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಿಂಗ್ ಸಾವನ್ನಪ್ಪಿದರು ಎಂದು ನ್ಯೂ ಯಾರ್ಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಂಗ್ ಕೆಲ ಸಮಯಕ್ಕಾಗಿ ಸ್ನೇಹಿತನಿಂದ ಕಾರನ್ನು ಪಡೆದಿದ್ದು, ಯಾರನ್ನೋ ಕರೆದುಕೊಂಡು ಹೋಗಬೇಕಾಗಿತ್ತು. ಆದರೆ ಬದಲಿಗೆ, ಯಮನೇ ಸತ್ನಾಮ್ ಸಿಂಗ್‌ರನ್ನು ಕರೆದೊಯ್ದಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಸತ್ನಾಮ್ ಸಿಂಗ್ ಕೊಲ್ಲುವ ಉದ್ದೇಶದಿಂದ ಬಂದಿದ್ದನಾ ಅಥವಾ ಕಾರಿನ ಮಾಲೀಕರನ್ನು ಕೊಲೆ ಮಾಡುವ ಉದ್ದೇಶವಿತ್ತಾ ಎಂಬುದು ಇನ್ನೂ ತಿಳಿದಿಲ್ಲ. ಕೇವಲ ಕಾರನ್ನು ಫಾಲೋ ಮಾಡಿ ಬಂದು, ಒಳಗಿರುವುದು ಕಾರಿನ ಮಾಲೀಕನಲ್ಲ ಎಂಬುದನ್ನು ಗಮನಿಸದೇ ಕೊಲೆ ಮಾಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ರೀತಿಯಾಗಿಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರಿನ ಮಾಲೀಕ ಯಾರು, ಆತನಿಗೆ ಯಾರಾದರೂ ವೈರಿಗಳಿದ್ದಾರ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯ ಪ್ರಕರಣ ಸಂಬಂಧ ಯಾವುದೇ ಬಂಧನವಾಗಿಲ್ಲ.
ಇದನ್ನೂ ಓದಿ: ಸತ್ತ ಎಂದು ಘೋಷಿಸಿದ್ದ ಮುಂಬೈ ದಾಳಿ ಉಗ್ರನಿಗೆ 15 ವರ್ಷ ಜೈಲು ಶಿಕ್ಷೆ ನೀಡಿದ ಪಾಕ್!
ಪೊಲೀಸರ ವರದಿಯ ಪ್ರಕಾರ ಎರಡು ರೀತಿಯ ಮಾಹಿತಿಗಳು ಪ್ರತ್ಯಕ್ಷದರ್ಶಿಗಳಿಂದ ಬಂದಿದೆ. ಮೊದಲು ಗನ್ ಹಿಡಿದ ವ್ಯಕ್ತಿ ಸತ್ನಾಮ್ ಸಿಂಗ್ ಇದ್ದ ವಾಹನದ ಕಡೆಗೆ ಬಂದಿದ್ದಾನೆ. ಆದರೆ ಗುಂಡು ಹಾರಿದ್ದು ಆತನ ಕೈಲಿದ್ದ ಗನ್‌ನಿಂದ ಅಲ್ಲ. ಕಾರಿನ ಪಕ್ಕದಲ್ಲಿಯೇ ಇನ್ನೊಂದು ಕಾರು ಪಾಸಾಗಿದ್ದು, ಅದರಿಂದ ಗುಂಡು ಹಾರಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಇನ್ನೂ ಪೊಲೀಸರು ಪ್ರಕರಂಣದ ಆರೋಪಿಯ ಗುರುತನ್ನು ಪತ್ತೆ ಹಚ್ಚುವ ಕಾರ್ಯದಲ್ಲಿದ್ದಾರೆ. ಭಾರತ ಮೂಲದ ಸತ್ನಾಮ್ ಸಿಂಗ್ ಕುಟುಂಬದವರ ವಿಚಾರಣೆಯನ್ನೂ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ, 950 ಜನರ ಸಾವು, ಸರ್ಕಾರದ ಹೇಳಿಕೆ!
ಕಾರು, ಒಂದು ಕಡೆಯಿಂದ ಬಂದು, ಒಂದು ಸುತ್ತು ಸುತ್ತಿದ ನಂತರ ಸತ್ನಾಮ್ ಸಿಂಗ್ ಇದ್ದ ಕಾರಿನ ಬಳಿಗೆ ಬಂದು ಗುಂಡುಗಳನ್ನು ಹಾರಿಸಿ ತಕ್ಷಣ ಅಲ್ಲಿಂದ 129 ಸ್ಟ್ರೀಟ್ ಕಡೆ ಹೊರಟುಹೋಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಸಿಲ್ವರ್ ಬಣ್ಣದ ಸಿಡಾನ್ ಆಗಿದ್ದು, ಕಾರಿಗಾಗಿ ಹುಡುಕಾಟ ಮುಂದುವರೆದಿದೆ.
"ಸತ್ನಾಮ್ ಸಿಂಗ್ ತುಂಬಾ ಸಹೃದಯಿ ಮತ್ತು ಶಾಂತ ಸ್ವಭಾವದವನು," ಎನ್ನುತ್ತಾರೆ ಸಿಂಗ್ ಪಕ್ಕದ ಮನೆಯಲ್ಲಿ ವಾಸವಿರುವ ಕ್ರಿಸ್ಟಿನಾ ಪೆರ್ಸುವಾಡ್ ನ್ಯೂ ಯಾರ್ಕ್ ಡೈಲಿ ನ್ಯೂಸ್‌ಗೆ ಹೇಳಿದ್ದಾರೆ. "ಪ್ರತಿನಿತ್ಯ ಕಾಣಿಸಿದಾಗ ನಾನು ಆತನನ್ನು ಮಾತನಾಡಿಸುತ್ತಿದ್ದೆ. ಆತನನ್ನು ಯಾರಾದರೂ ತಾರ್ಗೆಟ್ ಮಾಡಿರಬಹುದು," ಎಂದವರು ಅಭಿಪ್ರಾಯ ಪಡುತ್ತಾರೆ.
ಕಳೆದ ವಾರವಷ್ಟೇ 25 ವರ್ಷದ ತೆಲಂಗಾಣ ಮೂಲದ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅದಾದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅನಿವಾಸಿ ಭಾರತೀಯ ಮೃತಪಟ್ಟಿದ್ದ.