ಬೆಂಗಳೂರು [ಜ.23]:  ಕಬಡ್ಡಿ ಆಟಗಾರ್ತಿ ಉಷಾರಾಣಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ರಾಜ್ಯ ಅಮೆಚೂರ್‌ ಕಬ್ಬಡಿ ಅಸೋಸಿಯೇಷನ್‌ನ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ.ರಮೇಶ್‌ ಸೇರಿದಂತೆ ನಾಲ್ವರನ್ನು ಸಂಪಂಗಿರಾಮ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿ.ಸಿ.ರಮೇಶ್‌, ಕಬಡ್ಡಿ ಅಸಿಸೋಯೇಷನ್‌ ಕಾರ್ಯದರ್ಶಿ ಮುನಿರಾಜು, ತರಬೇತುದಾರರಾದ ನರಸಿಂಹ ಹಾಗೂ ಷಣ್ಮುಗ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ನಗರದ ಕಂಠೀರವಣ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಕೆಲ ದಿನಗಳಿಂದ ತರಬೇತಿ ಶಿಬಿರ ಆಯೋಜಿಸಲಾಗಿದೆ. ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ ಆಗಿರುವ ಉಷಾರಾಣಿ, ಮಹಿಳಾ ಕಬಡ್ಡಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆ ಶಿಬಿರಕ್ಕೆ ಉಷಾರಾಣಿ ಅವರಿಗೆ ಶುಭಕೋರಲು ಮಂಗಳವಾರ ಸಂಜೆ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಆಗಮಿಸಿದ್ದರು. ಆಗ ತನ್ನ ತಂಡದ ಸದಸ್ಯರನ್ನು ಮೇಲಾಧಿಕಾರಿಗೆ ಉಷಾರಾಣಿ ಪರಿಚಯ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ರಾಜ್ಯ ಕಬಡ್ಡಿಯಲ್ಲಿ ರಂಪಾಟ; BC ರಮೇಶ್ ವಿರುದ್ಧ ಮಹಿಳಾ ಕಬಡ್ಡಿ ಪಟು ಕೂಗಾಟ!...

ಇದೇ ವಿಚಾರವಾಗಿ ರಮೇಶ್‌ ಮತ್ತು ಉಷಾರಾಣಿ ಜಗಳವಾಗಿ ಕೊನೆಗೆ ಠಾಣೆ ಮೆಟ್ಟಿಲೇರಿತು. ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ರಮೇಶ್‌ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಅದರಂತೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.