ಬ್ಯಾಡಗಿ: ಮೆಣಸಿನಕಾಯಿ ಖರೀದಿಸಿ 4.70 ಕೋಟಿ ವಂಚನೆ
* ದಲಾಲರಿಗೆ ಹಣ ನೀಡದ ಮೈನುದ್ದೀನ್ ವಿರುದ್ಧ ಕ್ರಮಕ್ಕೆ ಆಗ್ರಹ
* ಹಣ ನೀಡದೇ ಸತಾಯಿಸುತ್ತಿರುವ ಎಸ್‌ವೈಟಿ ಸನ್ಸ್ ಅಂಗಡಿ ಮಾಲೀಕ
* ಮೆಣಸಿನಕಾಯಿ ಪಡೆದ ಹಣ ದಲಾಲರಿಗೆ ಮರುಪಾವತಿ ಮಾಡಲು ಒತ್ತಾಯಿಸಿ ಮನವಿ
ಬ್ಯಾಡಗಿ(ಜೂ.03): ಮೆಣಸಿನಕಾಯಿ ಪಡೆದ ಪೇಟೆ ಕಾರ್ಯಕರ್ತರಿಗೆ (ದಲಾಲರಿಗೆ) ಹಣ ಮರುಪಾವತಿ ಮಾಡದೇ ಕಳೆದ 19 ತಿಂಗಳಿಂದ ಸತಾಯಿಸುತ್ತಿರುವ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದ ಮೈನುದ್ದೀನ್ ತರೀನ್ (ಎಸ್‌ವೈಟಿ ಸನ್ಸ್ ಅಂಗಡಿ ಮಾಲೀಕ)ನ ವಿರುದ್ಧ ಕಾನೂನು ಕ್ರಮ ಜರುಗಿಸಿ ಹಣ ಮರಳಿಸುವಂತೆ ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ನೇತೃತ್ವದಲ್ಲಿ ಸ್ಥಳೀಯ ವರ್ತಕರು ಪಿಎಸ್‌ಐ ಮಂಜುನಾಥ ಕುಪ್ಪೇಲೂರಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಸುರೇಶಗೌಡ ಪಾಟೀಲ, ಬಹಳಷ್ಟುದಿನಗಳಿಂದ ಸ್ಥಳೀಯ ದಲಾಲರು ಮೈನುದ್ದೀನ ಅವರಿಗೆ ಮೆಣಸಿನಕಾಯಿ ನೀಡುತ್ತಾ ಬಂದಿದ್ದಾರೆ. ಆದರೆ, ಸಂಘದ ನಿಯಮಾನುಸಾರ (21 ದಿನಗಳಲ್ಲಿ) ಮರು ಪಾವತಿ ಮಾಡದೇ ಸತಾಯಿಸುತ್ತಾ ಬಂದಿದ್ದು, ಇದರಿಂದ ಸಂಘದ ಸದಸ್ಯರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ತಪ್ಪಿತಸ್ಥ ಮೈನುದ್ದೀನ್ ತರೀನ್ ಬಂಧಿಸಿ ಮರುಪಾವತಿಗೆ ಅಗತ್ಯ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
KBC Lottery Fraud: ಲಾಟರಿ ಹೆಸರಲ್ಲಿ 100ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಇಬ್ಬರ ಬಂಧನ
ಮೆಣಸಿನಕಾಯಿ ನೀಡಿದ ದಲಾಲರು ಬಾಕಿ ಹಣ ಕೇಳಲು ಹೋದವರಿಗೆ ಮೈನುದ್ದೀನ್ ಕುಟುಂಬದವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಲ್ಲದೇ ಜೀವ ಬೆದರಿಕೆ ಹಾಕುತ್ತಿದ್ದಾರೆ. ಕೂಡಲೇ ಮೈನುದ್ದೀನ್ ತರೀನ್ ಕುಟುಂಬದ ಎಲ್ಲ ಸದಸ್ಯರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಮೋಸಕ್ಕೆ ಅವಕಾಶವಿಲ್ಲ:
ಇದಕ್ಕೂ ಮುನ್ನ ನಡೆದ ವರ್ತಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಸುರೇಶಗೌಡ, ಸಂಘದ ಸದಸ್ಯರ ಹಿತಕ್ಕಾಗಿ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ, ವರ್ತಕ ಮೈನುದ್ದೀನ್ ಸರೀನ್ ಮಾಡಿದ ತಪ್ಪನ್ನು ಒಪ್ಪಿಕೊಂಡು ದಲಾಲರಿಗೆ ಹಣ ಮರುಪಾವತಿ ಮಾಡಬೇಕು. ಒಂದು ವೇಳೆ ಮರುಪಾವತಿ ಮಾಡದಿದ್ದಲ್ಲಿ ವರ್ತಕರ ಸಂಘವು ಮಾರುಕಟ್ಟೆವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಲ್ಲದೇ, ಅವಶ್ಯ ಬಿದ್ದರೆ ಬಂಕಾಪುರದ ಎಲ್ಲ ವರ್ತಕರಿಗೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡದೆ ದಿಗ್ಬಂಧನ ವಿಧಿಸುವಂತಹ ನಿರ್ಣಯಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ಈ ಪ್ರಕರಣವನ್ನು ವರ್ತಕರ ಸಂಘವು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಅನ್ಯಾಯಕ್ಕೊಳಗಾದ ದಲಾಲರ ಹಿತಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ, ಬ್ಯಾಡಗಿ ವರ್ತಕರ ಸಂಘವು ಕೈಗೊಂಡಂತಹ ನಿರ್ಣಯವನ್ನು ದೇಶದಾದ್ಯಂತ ಎಲ್ಲ ಮಾರುಕಟ್ಟೆಗಳಿಗೆ ಮನವಿ ಮಾಡಿಕೊಳ್ಳುವ ಮೂಲಕ ಮೈನುದ್ದೀನ್ ತರೀನ್ ಎಲ್ಲಿಯೂ ವಹಿವಾಟು ನಡೆಸದಂತೆ ನೋಡಿಕೊಳ್ಳಲಾಗುವುದು ಎಂದರು.
ಈ ವೇಳೆ ಎನ್.ಎಂ. ಕೆಂಬಿ, ಎಂ.ಎನ್. ಆಲದಗೇರಿ, ಎಂ.ಬಿ. ಹುಚಗೊಂಡರ, ಮಹೇಶ ಉಜನಿ, ಕೊಟ್ರೇಶ್ ತೊಪ್ಪಲದ, ರಾಜು ಮಾಳಗಿ, ಶಿವಕುಮಾರ ಕಲ್ಲಾಪೂರ, ಮುತ್ತಯ್ಯ ಹಿರೇಮಠ ಸೇರಿದಂತೆ ವರ್ತಕರ ಸಂಘದ ನೂರಾರು ಸದಸ್ಯರು ಉಪಸ್ಥಿತರಿದ್ದರು.
Online ವಂಚನೆ, Virtual ಜಗತ್ತಿನ ಬಣ್ಣದ ಮಾತಿಗೆ ಮರಳಾಗೋ ಮುನ್ನ ಇರಲಿ ಎಚ್ಚರ!
ಪ್ರತ್ಯೇಕ ದೂರು ದಾಖಲಿಸಲು ಚಿಂತನೆ:
ಸುರೇಶ ಮೇಲಗಿರಿ ಮಾತನಾಡಿ, ಮೈನುದ್ದೀನ್ ತರೀನ್ ಕಳೆದ 19 ತಿಂಗಳಿಂದ ಒಟ್ಟು 37 ಜನ ಪೇಟೆ ಕಾರ್ಯಕರ್ತರಿಗೆ .4.70 ಕೋಟಿ ಹಣ ನೀಡಬೇಕಾಗಿದೆ. ಆದಷ್ಟುಶೀಘ್ರದಲ್ಲೇ ಕಾನೂನು ತಜ್ಞರ ಸಲಹೆ ಪಡೆದು ಪ್ರತಿಯೊಬ್ಬ ದಲಾಲಲರಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದರು.
ನಿಮ್ಮದೇ ಕ್ಷೇತ್ರದ ಮತದಾರನೊಬ್ಬ ಬ್ಯಾಡಗಿ ಮಾರುಕಟ್ಟೆಯಲ್ಲಿ ಹಣ ನೀಡದೆ ಸತಾಯಿಸುತ್ತಿದ್ದು ಮುಖ್ಯಮಂತ್ರಿಗಳೇ ಕಣ್ತ್ತೆರೆದು ನೋಡಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಮೈನುದ್ದೀನ್ ತರೀನ್ ವಿರುದ್ಧ ಕ್ರಮ ಜರುಗಿಸುವಂತೆ ಸಂಬಂಧಿಸಿದ ಪೊಲೀಸ್ ಇಲಾಖೆಗೆ ಸೂಚಿಸಬೇಕು ಅಂತ ಬ್ಯಾಡಗಿ ಮಾರುಕಟ್ಟೆಯ ವರ್ತಕ ರಮೇಶ ಮೋಟೆಬೆನ್ನೂರ ತಿಳಿಸಿದ್ದಾರೆ.