Asianet Suvarna News Asianet Suvarna News

ಬೆಂಗಳೂರಿನಲ್ಲಿ ಬಿಜೆಪಿ ನಾಯಕಿ ಭೀಕರ ಕೊಲೆ, ಪರಿಚಯಸ್ಥರಿಂದಲೇ ಕೃತ್ಯ ಆರೋಪ!

* ಹಾಡಹಗಲೇ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಹತ್ಯೆ

* ಮಾತನಾಡುವ ನೆಪದಲ್ಲಿ ಕಚೇರಿಯಿಂದ ಹೊರಕ್ಕೆ ಕರೆಸಿ 17 ಬಾರಿ ಇರಿತ

* 3 ವರ್ಷದ ಹಿಂದೆ ರೇಖಾ ಪತಿ ಕದಿರೇಶ್‌ ಕೂಡ ಕೊಲೆಯಾಗಿದ್ದರು

* ಬೆಂಗಳೂರಿನಲ್ಲಿ ಬಿಜೆಪಿ ಮುಖಂಡೆ ಭೀಕರ ಕೊಲೆ ಪರಿಚಯಸ್ಥರಿಂದಲೇ ಕೃತ್ಯ ಆರೋಪ

3 years after husband killing former BJP corporator stabbed to death in Bengalur pod
Author
Bangalore, First Published Jun 25, 2021, 7:42 AM IST

ಬೆಂಗಳೂರು(ಜೂ.25): ಆಡಳಿತಾರೂಢ ಬಿಜೆಪಿಯ ಸ್ಥಳೀಯ ಮುಖಂಡರೂ ಆಗಿರುವ, ರಾಜಧಾನಿಯ ಕಾಟನ್‌ಪೇಟೆ ಸಮೀಪವಿರುವ ಛಲವಾದಿಪಾಳ್ಯ ವಾರ್ಡ್‌ನ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್‌ (45) ಅವರನ್ನು ಹಾಡಹಗಲೇ ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

"

ವೈಯಕ್ತಿಕ ಹಗೆತನಕ್ಕೆ ಮೂರು ವರ್ಷಗಳ ಹಿಂದೆ ರೇಖಾ ಅವರ ಪತಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರಾಗಿದ್ದ ಕದಿರೇಶ್‌ ಅವರು ಕೂಡ ಹಾಡಹಗಲೇ ಕೊಲೆಯಾಗಿದ್ದರು. ಕದಿರೇಶ್‌ ಹತ್ಯೆ ಮರೆಯುವ ಮುನ್ನವೇ ಗುರುವಾರ ಬೆಳಗ್ಗೆ ಅವರ ಪತ್ನಿ ರೇಖಾ ನೆತ್ತರು ಹರಿದಿರುವುದು ಛಲವಾದಿಪಾಳ್ಯದ ಜನರಲ್ಲಿ ಆತಂಕ ಸೃಷ್ಟಿಸಿದೆ.

ಛಲವಾದಿಪಾಳ್ಯದ ಫ್ಲವರ್‌ ಗಾರ್ಡನ್‌ನಲ್ಲಿ ನೆಲೆಸಿದ್ದ ರೇಖಾ ಅವರು, ತಮ್ಮ ಮನೆ ಹತ್ತಿರದ ಗೃಹ ಕಚೇರಿಯಲ್ಲಿ ಬಡವರಿಗೆ ಆಹಾರ ಕಿಟ್‌ ವಿತರಣೆಗೆ ಸಿದ್ಧತೆ ನಡೆಸಿದ್ದರು. ಆಗ ಮಾತನಾಡುವ ನೆಪದಲ್ಲಿ ಕಚೇರಿಯಿಂದ ಹೊರಗೆ ಕರೆದು ರೇಖಾ ಅವರಿಗೆ ಚಾಕುವಿನಿಂದ ಇರಿದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಖಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ರೇಖಾ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಹತ್ಯೆಗೆ ಸ್ಥಳೀಯ ರಾಜಕೀಯ ಮೇಲಾಟ, ಕೌಟುಂಬಿಕ ಕಲಹ ಹಾಗೂ ಗುತ್ತಿಗೆ ಗಲಾಟೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೃತ್ಯದಲ್ಲಿ ಮೃತ ರೇಖಾರ ಸೋದರ ಸಂಬಂಧಿ ಸೂರ್ಯ, ಪೀಟರ್‌ ಹಾಗೂ ಸ್ಟೀಫನ್‌ ಕೈವಾಡವಿದೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.

ಕ್ಷಣಾರ್ಧದಲ್ಲಿ ಕೃತ್ಯ:

ಮೃತ ರೇಖಾ ಅವರು ಮೂಲತಃ ತಮಿಳುನಾಡು ರಾಜ್ಯದವರಾಗಿದ್ದು, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಅವರ ಪರಿವಾರ ವಲಸೆ ಬಂದಿದೆ. ಬಿಜೆಪಿ ಮುಖಂಡ ಕದಿರೇಶ್‌ ಜತೆ ವಿವಾಹವಾದ ಬಳಿಕ ರೇಖಾ, ಛಲವಾದಿಪಾಳ್ಯದ ಫ್ಲವರ್‌ ಗಾರ್ಡನ್‌ನ ಮನೆಯಲ್ಲಿ ನೆಲೆಸಿದ್ದರು. ರೇಖಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿದ್ದ ದಂಪತಿ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಯ ಪ್ರಮುಖ ಮುಂದಾಳುಗಳಾಗಿದ್ದರು. ಎರಡು ಬಾರಿ ಛಲವಾದಿಪಾಳ್ಯ ವಾರ್ಡ್‌ನಿಂದ ಬಿಜೆಪಿಯಿಂದ ರೇಖಾ ಕಾರ್ಪೋರೇಟರ್‌ ಸಹ ಆಗಿದ್ದರು.

ಪತಿ ಕದಿರೇಶ್‌ ಕೊಲೆಯಾದ ಬಳಿಕ ಜೀವಭೀತಿಗೊಳಗಾಗಿದ್ದ ಅವರು, ತಮ್ಮ ಮಕ್ಕಳನ್ನು ಬಿಟಿಎಂ ಲೇಔಟ್‌ನಲ್ಲಿರುವ ಸಂಬಂಧಿಕರ ಆಶ್ರಯಕ್ಕೆ ಬಿಟ್ಟಿದ್ದರು. ಹೀಗಾಗಿ ಫ್ಲವರ್‌ ಗಾರ್ಡನ್‌ನಲ್ಲಿ ರೇಖಾ ಏಕಾಂಗಿಯಾಗಿ ನೆಲೆಸಿದ್ದರು ಎಂದು ಪೊಲೀಸ್‌ ಮೂಲಗಳು ಹೇಳಿವೆ.

17ಕ್ಕೂ ಹೆಚ್ಚು ಬಾರಿ ಚಾಕು ಇರಿತ:

ಬಿಬಿಎಂಪಿ ಅವಧಿ ಮುಗಿದ ಬಳಿಕ ಮತ್ತೊಂದು ಬಾರಿ ಚುನಾವಣೆಗೆ ಸ್ಪರ್ಧಿಸಲು ರೇಖಾ ತಯಾರಿ ನಡೆಸಿದ್ದರು. ಪತಿ ಅಗಲಿದ ಬಳಿಕವೂ ಕ್ಷೇತ್ರದ ಜನರೊಂದಿಗೆ ಅವರ ಒಡನಾಟ ಮುಂದುವರೆದಿತ್ತು. ಲಾಕ್‌ಡೌನ್‌ ವೇಳೆ ಬಡಬಗ್ಗರ ನೋವಿಗೆ ಸ್ಪಂದಿಸಿದ್ದ ರೇಖಾ, ಲಸಿಕೆ ಅಭಿಯಾನ, ಆಹಾರ ಕಿಟ್‌ ವಿತರಣೆ ಹಾಗೂ ಕೊರೋನಾ ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿದ್ದರು. ಅಂತೆಯೇ ತಮ್ಮ ನಿವಾಸದ ಸಮೀಪದಲ್ಲೇ ಇರುವ ತಮ್ಮ ಗೃಹ ಕಚೇರಿ ಮುಂದೆ ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಜನರಿಗೆ ಆಹಾರ ಕಿಟ್‌ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಆ ವೇಳೆ ಅಲ್ಲಿಗೆ ಬಂದ ಆರೋಪಿಗಳು, ಮಾತನಾಡಬೇಕು ಎಂದು ಹೇಳಿ ರೇಖಾ ಅವರನ್ನು ಹೊರಗೆ ಕರೆದಿದ್ದಾರೆ. ಹಂತಕರು ತಮಗೆ ಪರಿಚಯಸ್ಥರೇ ಆಗಿದ್ದ ಕಾರಣ ರೇಖಾ ಅವರು, ತಕ್ಷಣವೇ ಕಚೇರಿಯಿಂದ ಹೊರಗೆ ಕಾಲಿಟ್ಟಿದ್ದಾರೆ. ಆಗ ಏಕಾಏಕಿ ಅವರ ಕುತ್ತಿಗೆ ಚಾಕು ಹಾಕಿದ ಕಿಡಿಗೇಡಿಗಳು, ಬಳಿಕ 17ಕ್ಕೂ ಹೆಚ್ಚು ಬಾರಿ ಮನಬಂದಂತೆ ಇರಿದು ಪರಾರಿಯಾಗಿದ್ದಾರೆ. ಚೀರಾಟ ಕೇಳಿ ಸ್ಥಳೀಯರು ಜಮಾಯಿಸುವ ವೇಳೆಗೆ ಆರೋಪಿಗಳು ಕಾಲ್ಕಿತ್ತಿದ್ದಾರೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ರೇಖಾ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಎಸ್‌.ಮುರುಗನ್‌, ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಪಾಟೀಲ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios