Dowry case 3 ಸಹೋದರಿಯರು, ಇಬ್ಬರು ಮಕ್ಕಳ ಶವ ಬಾವಿಯಲ್ಲಿ ಪತ್ತೆ, ಕೊಲೆ ಶಂಕೆ!
- ಬಾಲ್ಯ ವಿವಾಹಕ್ಕೆ ಗುರಿಯಾಗಿದ್ದ ಮೂವರು ಸಹೋದರಿಯರು
- ಇಬ್ಬರು ಮಕ್ಕಳ ಜೊತೆ ಮೂವರ ಶವ ಬಾವಿಯಲ್ಲಿ ಪತ್ತೆ
- ಸಹೋದರಿಯರ ಮನಮಿಡಿಯುವ ಕತೆ, ಪ್ರಕರಣದ ತನಿಖೆ ಚುರುಕು
ಜೈಪುರ(ಮೇ.28): ಶಾಲೆಗೆ ಹೋಗುವ ವಯಸ್ಸಿನಲ್ಲಿ ವಿವಾಹ, ಮಕ್ಕಳು, ಸಂಸಾರ, ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ ಸೇರಿದಂತೆ ಸಮಸ್ಯೆಗಳ ಕೂಪದಲ್ಲೇ ಇದ್ದ ಮೂವರು ಸಹೋದರಿಯರು ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ತಮ್ಮ ಇಬ್ಬರು ಮಕ್ಕಳೂ ಕೂಡ ಬಲಿಯಾಗಿದ್ದಾರೆ. ಇದು ವರದಕ್ಷಿಣೆಗಾಗಿ ನಡೆದ ಕೊಲೆ ಎಂಬ ಅನುಮಾನ ಬಲವಾಗುತ್ತಿದೆ.
ಈ ಘಟನೆ ನಡೆದಿರುವುದು ರಾಜಸ್ಥಾನ ಜೈಪುರ ಜಿಲ್ಲೆಯ ದುಡು ಪಟ್ಟಣದಲ್ಲಿ. ಮೃತರನ್ನು ಕಾಲು, ಮಮತಾ ಹಾಗೂ ಕಮಲೇಶ್ ಎಂದು ಗುರುತಿಸಲಾಗಿದೆ. ಇವರ ಶವದೊಂದಿಗೆ ಇಬ್ಬರು ಮಕ್ಕಳ ಶವವೂ ಬಾವಿಯಲ್ಲಿ ಪತ್ತೆಯಾಗಿದೆ. ನಾಲ್ಕು ವರ್ಷ ಹಾಗೂ 27 ದಿನದ ಮಗು ಕೂಡ ಬಲಿಯಾಗಿದೆ. ಇಷ್ಟೇ ಅಲ್ಲ ಮೃತ ಸಹೋದರಿಯರಿಯಲ್ಲಿ ಇಬ್ಬರು ತುಂಬು ಗರ್ಭಿಣಿಯಾಗಿದ್ದರು.
ಕಲಬುರಗಿ: ಮುಸ್ಲಿಂ ಹುಡುಗಿ ಪ್ರೀತಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ದಲಿತ ಯುವಕನ ಬರ್ಬರ ಹತ್ಯೆ
ಕಳೆದ 15 ದಿನಗಳಿಂದ ಮೂವರು ಸಹೋದರಿಯರು ತಮ್ಮ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದರು. ಪೋಷಕರು ತಮ್ಮ ಮೂವರು ಮಕ್ಕಳು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಈ ವೇಳೆ ಪೊಲೀಸರ ಮುಂದೆ ಪತಿ ಹಾಗೂ ಆತನ ಮನೆಯವರು ನಾಟಕವಾಡಿದ್ದರು.ಕಾರ್ಯಚರಣೆ ನಡೆಸಿದ ಪೊಲೀಸರು ಇಂದು ಬಾವಿಯಲ್ಲಿ ಒಟ್ಟು 5 ಶವಗಳು ಪತ್ತೆಯಾಗಿದೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಶಂಕೆ ಪೊಲೀಸರನ್ನು ಬಲವಾಗಿ ಕಾಡುತ್ತಿದೆ.
ಕಾಲು(27), ಮಮತಾ(23) ಹಾಗೂ ಕಮಲೇಶ್(20) ಅನ್ನೋ ಮೂವರು ಸಹೋದರಿಯರನ್ನು ಬಾಲ್ಯ ವಿವಾಹ ಮಾಡಲಾಗಿತ್ತು.ಒಂದೇ ಮನೆಯ ಸಹೋದರರಿಗೆ ಮದುವೆ ಮಾಡಿಸಲಾಗಿತ್ತು. ಶಾಲೆಗೆ ಹೋಗುವ ವಯಸ್ಸಿನಲ್ಲಿ ಬಲವಂತವಾಗಿ ಬಾಲ್ಯ ವಿವಾಹ ಮಾಡಲಾಗಿತ್ತು. ಈ ಮೂವರು ಸಹೋದರಿಯರು ಶಿಕ್ಷಣ ಮುಂದುವರಿಸಲು ಇನ್ನಿಲ್ಲದ ಹರಸಾಹಸ ಪಟ್ಟಿದ್ದರು. ಆದರೆ ವಿವಾಹವಾಗದೇ ಬೇರೆ ವಿಧಿ ಇರಲಿಲ್ಲ.
ಬಾಲ್ಯದಲ್ಲೇ ಮದುವೆಯಾಗಿ ಗಂಡನ ಮನೆ ಸೇರಿದ ಈ ಮೂವರು ಸಹೋದರಿಯರು ಇನ್ನಿಲ್ಲದ ಚಿತ್ರಹಿಂಸೆ ಅನುಭವಿಸಿದ್ದಾರೆ. ಕುಡಿದು ಬರುವ ಗಂಡನಿಂದ ಹಲ್ಲೆಗೊಳಗಾಗಿ ಹಲವು ಬಾರಿ ಆಸ್ಪತ್ರೆ ಸೇರಿದ್ದಾರೆ. ಆದರೂ ಸಂಸಾರ ಸಾಗಿಸುತ್ತಿದ್ದ ಈ ಸಹೋದರಿಯರು ಶಿಕ್ಷಣವನ್ನೂ ಮುಂದುವರಿಸಿದ್ದರು. ಮಮತಾ ಪೊಲೀಸ್ ಪೇದೆ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಳು. ಕಾಲು ಅಂತಿಮ ವರ್ಷದ ಬಿಎ ವ್ಯಾಸಾಂಗ ಮಾಡುತ್ತಿದ್ದರೆ, ಕಮಲೇಶ್ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ಅಭ್ಯಾಸಕ್ಕೆ ನೋಂದಣಿ ಮಾಡಿಕೊಂಡಿದ್ದಳು.
5 ವರ್ಷದ ಬಳಿಕ ಕೊಲೆಗಾರನನ್ನು ಹುಡುಕಿಕೊಟ್ಟ Facebook!
ಪತ್ನಿಯರು ಶಿಕ್ಷಣ ಮುಂದುವರಿಸಿರುವುದು ಪತಿಯರಿಗೆ ಸುತಾರಂ ಇಷ್ಟವಿರಲಿಲ್ಲ. ಇಷ್ಟೇ ಅಲ್ಲ ಪ್ರತಿ ದಿನ ವರದಕ್ಷಿಣೆ ನೀಡುವಂತೆ ಕಿರುಕುಳ ನಡೆಯುತ್ತಲೇ ಇತ್ತು. ಪೊಲೀಸ್ ಆಗಬೇಕು ಎಂಬುದು ಮೂವರು ಸಹೋದರಿಯರು ಕನಸಾಗಿತ್ತು. ಬಳಿಕ ತನ್ನಂತೆ ನೊಂದ ಜೀವನಗಳಿಗೆ ಆಸರೆಯಾಗಬೇಕು ಅನ್ನೋದು ಹಂಬಲವಾಗಿತ್ತು. ಇದಕ್ಕಾಗಿ ಕುಡುಕ ಪತಿಯರ ಜೊತೆ ಕಿರುಕುಳ ಸಹಿಸಿಕೊಂಡು ಸಂಸಾರ ನಡೆಸುತ್ತಿದ್ದರು.
ಪತಿಯರ ವಿರುದ್ಧದ ಈಗಾಗಲೇ ಹಲ್ಲೆ ಸೇರಿದಂತೆ ಕೆಲ ಪ್ರಕರಣಗಳು ದಾಖಲಾಗಿದೆ. ಇದೀಗ ಮೂವರು ಸಹೋದರಿಯರ ಶವ ಪತ್ತೆಯಾದ ಬೆನ್ನಲ್ಲೇ ಸಹೋದರಿಯರ ಮೂವರು ಗಂಡಂದಿರನ್ನು ಅರೆಸ್ಟ್ ಮಾಡಲಾಗಿದೆ. ಪತಿಯರ ಮನೆಯವರು ಕೂಡ ಕಿರುಕುಳ ನೀಡುತ್ತಿದ್ದರು ಅನ್ನೋ ಸುಳಿವು ಸಿಕ್ಕದ ಪೊಲೀಸರು ಇದೀಗ ತನಿಖೆ ಚುರುಕುಗೊಳಿಸಿದ್ದಾರೆ.