ರಾಮನಗರ: ಲವ್ ಮ್ಯಾರೇಜ್ಗೆ ವಿರೋಧ, ಭಾವನನ್ನೇ ಬರ್ಬರವಾಗಿ ಕೊಂದ ಭಾಮೈದ...!
ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು.
ರಾಮನಗರ(ಏ.12): ಪ್ರೇಮ ವಿವಾಹಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದ ಭಾಮೈದ ತನ್ನ ಸ್ನೇಹಿತರೊಂದಿಗೆ ಹಾಡಹಗಲೇ ಭಾವನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕೋಟಹಳ್ಳಿ - ಕೆ.ಜಿ.ಹೊಸಹಳ್ಳಿ ನಡುವೆ ಮಂಗಳವಾರ ನಡೆದಿದೆ. ತಾಲೂಕಿನ ಕೆ.ಜಿ.ಹೊಸಳ್ಳಿ ವಾಸಿ ನಾಗರಾಜು ಪುತ್ರ ಅಶ್ವತ್ಥ (26)ಕೊಲೆಯಾದವರು. ಈತನ ಪತ್ನಿ ಸಹನಾ ಸಹೋದರ ಭರತ್ ಮತ್ತು ಆತನ ಸ್ನೇಹಿತರು ಕೃತ್ಯ ಎಸಗಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಶ್ವತ್ಥ ಚನ್ನಪಟ್ಟಣದ ಸಹನಾ ಎಂಬುವರನ್ನು 7 ವರ್ಷಗಳಿಂದ ಪ್ರೀತಿಸುತ್ತಿದ್ದನು. ಸಹನಾ ಕುಟುಂಬದವರು ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಎರಡು ತಿಂಗಳ ಹಿಂದೆಯಷ್ಟೆ ಇಬ್ಬರು ಧರ್ಮಸ್ಥಳದಲ್ಲಿ ವಿವಾಹವಾಗಿದ್ದರು.
ಈ ವೇಳೆ ಸಹನಾ ಕಾಣೆಯಾಗಿದ್ದಾಳೆಂದು ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಸಹನಾ ಪೊಲೀಸರ ಎದುರು ಹಾಜರಾಗಿ ಅಶ್ವತ್ಥ ಅವರೊಂದಿಗೆ ಮದುವೆಯಾಗಿದ್ದು, ಅವರೊಂದಿಗೆಯೇ ಜೀವನ ನಡೆಸುವುದಾಗಿ ತಿಳಿಸಿದ್ದರು. ಆಗ ರಾಜಿ ಸಂಧಾನದ ಮೂಲಕ ವಿವಾದ ಬಗೆಹರಿದಿತ್ತು. ಇತ್ತೀಚೆಗೆ ಅಶ್ವತ್ಥ ಮತ್ತು ಸಹನಾ ಸಹೋದರ ಭರತ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಹುಡುಗಿಯೊಂದಿಗೆ ಅನೈತಿಕ ಸಂಬಂಧ: ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿ
ಅಶ್ವತ್ಥ ಪತ್ನಿ ಸಹನಾ ಮತ್ತು ತಂದೆ - ತಾಯಿಯೊಂದಿಗೆ ರಾಮನಗರದಲ್ಲಿನ ಮೋಹನ್ ಫಾರಂ ಹೌಸ್ ನಲ್ಲಿ ಸಂಬಂಧಿಕರ ಬೀಗರ ಔತಣಕೂಟಕ್ಕೆ ತೆರಳಿದ್ದರು. ಊಟ ಮುಗಿಸಿ ಅಶ್ವತ್ಥ ಮತ್ತು ಸಹನಾ ಒಂದು ಬೈಕಿನಲ್ಲಿ, ಅವರ ತಂದೆ - ತಾಯಿ ಮತ್ತೊಂದು ಬೈಕಿನಲ್ಲಿ ಕೆ.ಜಿ.ಹೊಸಹಳ್ಳಿಗೆ ಹೊರಟಿದ್ದರು. ಈ ವೇಳೆ ಭರತ್ ಸೇರಿದಂತೆ ಮೂವರು ಬೈಕುಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಕೊಟ್ಟಾಳು - ಕೆ.ಜಿ.ಹೊಸಹಳ್ಳಿ ಬಳಿ ಅಶ್ವತ್ಥ ಮೇಲೆ ಭರತ್ ಮತ್ತು ಆತನ ಸ್ನೇಹಿತರು ಲಾಂಗ್, ಮಚ್ಚಿನಿಂದ ಹಲ್ಲೆ ಮಾಡಿದಾಗ ಕೈಗೆ ಗಾಯವಾಗಿದೆ.
ಬೈಕ್ ಬಿಟ್ಟು ಓಡಲು ಪ್ರಯತ್ನಿಸಿದ ಅಶ್ವತ್ಥ ಆಯತಪ್ಪಿ ಬಿದ್ದಿದ್ದಾರೆ. ರಕ್ಷಣೆಗೆ ಬಂದ ಸಹನಾ ಮೇಲೂ ಹಲ್ಲೆ ನಡೆಸಿದ ಮೂವರು ಅಶ್ವತ್ಥ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಲ್ಲದೆ, ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಚಾಕುಗಳು ಪತ್ತೆಯಾಗಿವೆ.
ಶವವಿಟ್ಟು ಕುಟುಂಬದವರ ಪ್ರತಿಭಟನೆ :
ಕೊಲೆ ನಡೆದ ಸ್ಥಳದಲ್ಲಿಯೇ ಅಶ್ವತ್ಥ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಚನ್ನಪಟ್ಟಣ ವೃತ್ತ ನಿರೀಕ್ಷಕಿ ಶೋಭಾ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ. ಶೋಭಾ ಸ್ಥಳಕ್ಕೆ ಆಗಮಿಸಬೇಕು ಹಾಗೂ ಕೊಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಕುಟುಂಬಸ್ಥರೊಂದಿಗೆ ಗ್ರಾಮಸ್ಥರು ಶವ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.
Bengaluru: ಬಾರ್ನಲ್ಲಿ ಕುಡಿದು ಗಲಾಟೆ, ರೌಡಿಶೀಟರ್ ಭೀಕರ ಹತ್ಯೆ!
ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಕುಟುಂಬಸ್ಥರು ಮತ್ತು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರ ಮನವೊಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.