ಕುಡಿದು ಬಂದ ಮಲಗಿದ ಮಗನ ಎಬ್ಬಿಸಲು ತಡವಾಗಿದೆ. ಇಷ್ಟೇ ನೋಡಿ, ಮೊದಲೇ ನಶೆ, ಇತ್ತ ಮೂಗಿನ ತುದಿಯಲ್ಲಿ ಕೋಪ, ಎಬ್ಬಿಸಿದ ತಂದೆಯನ್ನೇ ಹತ್ಯೆ ಮಾಡಲಾಗಿದೆ.  

ತ್ರಿಶೂರ್(ಏ.08): ಬೆಳಗ್ಗಯಿಂದಲೇ ಎಣ್ಣೆ, ಕಂಠಪೂರ್ತಿ ಕುಡಿದು ತೂರಾಡುತ್ತಾ ಮನೆಗೆ ಬಂದಿದ್ದಾನೆ. ಸಂಜೆ 5 ಗಂಟೆ ಹೊತ್ತಿಗೆ ಮನಗೆ ಬಂದ ಪಾಪಿ ಮಗ, ಪೋಷಕರ ಬಳಿಕ ರಾತ್ರಿ 8.30ಕ್ಕೆ ಸರಿಯಾಗಿ ಎಬ್ಬಿಸುವಂತೆ ಆಜ್ಞಾಪಿಸಿ ಮಲಗಿದ್ದಾನೆ. ಆದರೆ ತಂದೆ ಈ ವಿಚಾರ ಮರೆತಿದ್ದಾರೆ. ಹೀಗಾಗಿ ಪಾನಮತ್ತ ಮಗನ ಎಬ್ಬಿಸಲು ತಡವಾಗಿದೆ. ಎದ್ದು ಟೈಂ ನೋಡಿ ಪಾಪಿ ಮಗನ ಪಿತ್ತ ನೆತ್ತಿಗೇರಿದೆ. ರೇಗಾಡಲು ಆರಂಭಿಸಿದ ಮಗನ ಪ್ರಶ್ನಿಸಿದ ತಂದೆಯನ್ನು ತಳ್ಳಿ ಹಲ್ಲೆ ಮಾಡಿದ್ದಾನೆ. ಈ ದಾಳಿಯಲ್ಲಿ ತಂದೆ ಮೃತಪಟ್ಟ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ಕೊಡನ್ನೂರು ಬಳಿ ನಡೆದಿದೆ.

Add Asianetnews Kannada as a Preferred SourcegooglePreferred

25 ವರ್ಷದ ರಿಜೋ ಪ್ರತಿ ದಿನ ಕುಡಿದು ಮನೆಗೆ ಬರುತ್ತಿದ್ದ. ಪೋಷಕರು ಹಲವು ಬಾರಿ ಬುದ್ದಿವಾದ ಹೇಳಿದರೂ ಮಗನ ಚಾಳಿ ಬದಲಾಗಿಲ್ಲ. ಬೆಳಕ್ಕೆ ಕೆಲಸ, ಸಂಜೆಯಾದರೆ ಕುಡಿತ. ಮಧ್ಯ ರಾತ್ರಿ ಮನೆಗೆ ಬರುವುದು ವಾಡಿಕೆಯಾಗಿತ್ತು. ಆದರೆ ನಿನ್ನೆ(ಎಪ್ರಿಲ್ 7) ರಿಜೋ ಬೆಳಗ್ಗೆಯಿಂದಲೇ ಕುಡಿತ ಆರಂಭಿಸಿದ್ದ. ಸಂಜೆ 5 ಗಂಟೆ ಹೊತ್ತಿಗೆ ಮನಗೆ ಆಗಮಿಸಿದ ರಿಜೋಗೆ ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ.

ಕೋಳಿ ಸಾರು ಖಾಲಿಯಾಗಿದ್ದಕ್ಕೆ ಜಗಳ, ಮಗನನ್ನೇ ಕೊಲೆಗೈದ ತಂದೆ!

ಮನಗೆ ಬಂದ ರಿಜೋ ನೇರವಾಗಿ ಮಲಗಲು ಮುಂದಾಗಿದ್ದಾನೆ. ಆದರೆ ಮಲಗುವ ಮುನ್ನ ರಾತ್ರಿ 8.30ಕ್ಕೆ ಸರಿಯಾಗಿ ಎಬ್ಬಿಸಲು ಪೋಷಕರಿಗೆ ಆಜ್ಞೆ ನೀಡಿದ್ದಾನೆ. ಇತ್ತ ಪೋಷಕರು ದಿನಗೂಲಿ ಕೆಲಸ ಮಾಡಿ ಬಂದು ದಣಿವಾಗಿದ್ದರು. ಇದರ ಜೊತೆಯಲ್ಲಿ ಮನೆಯ ಕೆಲಸ ಸೇರಿದಂತೆ ಹಲವು ಕೆಲಸದಲ್ಲಿ ತೊಡಗಿದ್ದರು. ಹೀಗಾಗಿ ರಾತ್ರಿ 8.30 ಆದರೂ ಪುತ್ರನ ಎಬ್ಬಿಸಲು ಮರೆತಿದ್ದಾರೆ. 9 ಗಂಟೆ ಸುಮಾರಿಗೆ ಥಟ್ಟನೆ ನೆನಪಾಗಿದೆ. ಹೀಗಾಗಿ ತಂದೆ ಜಾಯ್, ನೇರವಾಗಿ ಮಗನ ಬಳಿ ಬಂದು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಹಲವು ಪ್ರಯತ್ನದ ಬಳಿಕ 9.20ರ ಸುಮಾರಿಗೆ ರಿಜೋ ಎದ್ದಿದ್ದಾನೆ. 

ಗಡಿಯಾರ ನೋಡಿದಾಗ ಗಂಟೆ 9.20. ಇದು ರಿಜು ಪಿತ್ತ ನೆತ್ತಿಗೇರಿಸಿದೆ. 8.30ಕ್ಕೆ ಸರಿಯಾಗಿ ಎಬ್ಬಿಸಲು ಸೂಚಿಸಿದ್ದೆ. ಆದರೆ ಎಬ್ಬಿಸಿದ್ದು 1 ಗಂಟೆ ತಡವಾಗಿ ಎಂದು ವಾಗ್ವಾದ ಶುರುಮಾಡಿದ್ದಾನೆ. ಸಮಯ ಕೊಂಚ ಮೀರಿದೆ ಇದರಿಂದ ಏನಾಗಿದೆ ಈಗ? ಎಂದು ಇತ್ತ ತಂದೆ ಕೂಡ ಮಗನನ್ನು ಪ್ರಶ್ನಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಎಳಬೇಕು ಎಂದಿದ್ದರೆ, ಕುಡಿಯದೇ ನಿದ್ರಿಸಬೇಕು ಎಂದು ತಂದೆ ಹೇಳಿದ್ದಾರೆ. ಈ ಮಾತು ರಿಜು ಆಕ್ರೋಶಕ್ಕೆ ಕಾರಣವಾಗಿದೆ. ತಂದೆಯನ್ನು ತಳ್ಳಿದ್ದಾನೆ.

82 ವರ್ಷದ ತಂದೆ​ಯನ್ನೇ ಮನೆ​ಯಿಂದ ಹೊರ ಹಾಕಿದ ಮಗ - ಸೊಸೆ!

ಪುತ್ರ ತಳ್ಳಿದ ರಭಸಕ್ಕೆ ತಂದೆ ತಲೆಗೆ ಗಾಯವಾಗಿ ಬಿದ್ದಿದ್ದಾರೆ. ಇಷ್ಟಕ್ಕೆ ರಿಜು ಕೋಪ ತಣ್ಣಗಾಗಿಲ್ಲ. ನೆಲಕ್ಕೆ ಬಿದ್ದ ತಂದೆ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಮಗನ ದಾಳಿಗೆ ತಂದೆ ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿದೆ. ಇದೇ ವೇಳೆ ನೆರಮನೆಯವರು ಧಾವಿಸಿದ್ದಾರೆ. ಬಳಿಕ ಜಾಯ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಜಾಯ್ ಮೃಪಟ್ಟಿದ್ದಾರೆ. 

ತಂದೆ ಮೇಲೆ ಹಲ್ಲೆ ಮಾಡಿದ ರಿಜು, ಪೊಲೀಸರಿಗೆ ಖುದ್ದು ಮಾಹಿತಿ ನೀಡಿದ್ದಾನೆ. ತಂದೆಯ ಮೇಲೆ ಹಲ್ಲೆ ಮಾಡಿದ್ದೇನೆ ಎಂದಿದ್ದಾನೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಿಜು ವಶಕ್ಕೆ ಪಡೆದಿದ್ದಾರೆ. ರಿಜು ಪಾನಮತ್ತನಾಗಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಇತ್ತ ತಂದೆ ಅನ್ಯಾಯವಾಗಿ ಮಗನಿಂದಲೇ ಮೃತಪಟ್ಟರೆ, ಪುತ್ರ ಜೈಲು ಸೇರಿದ್ದಾನೆ.