ಜಂತು ಮಂಡಲ್, ಸಾಯಿಕುಮಾರ್ ಧಮ್ಶಟ್ಟಿ, ಅರ್ಜುನ್ ನಂಬಲರ್, ರೋಹನ್ ಬಾಬು, ಪವನ್, ಅಕ್ಷಯ್ ಹಾಗೂ ಜಿಷ್ಣು ಸೇರಿ 19 ಜನ ಬಂಧಿತರಾಗಿದ್ದು, ಆರೋಪಿಗಳಿಂದ 6 ಕೇಜಿ ಹ್ಯಾಶಿಸ್ ಆಯಿಲ್, 51.89 ಕೇಜಿ ಗಾಂಜಾ, 140 ಗ್ರಾಂ ಎಂಡಿಎಂಎ ಕ್ರಿಸ್ಟಲ್, 236 ಎಕ್ಸಟೈಸಿ ಮಾತ್ರೆಗಳು, 34 ಎಲ್‌ಎಸ್‌ಡಿ, 23 ಗ್ರಾಂ ಕೊಕೈನ್, 17 ಮೊಬೈಲ್, 1 ಕಾರು, 1 ಬೈಕ್ ಜಪ್ತಿ
ಬೆಂಗಳೂರು(ಮೇ.09): ಡ್ರಗ್ಸ್ ಮಾಫಿಯಾದ ವಿರುದ್ಧ ಸಿಸಿಬಿ ಕಾರ್ಯಾಚರಣೆ ನಡೆಸಿ ತಿಂಗಳ ಅವಧಿಯಲ್ಲಿ ಪ್ರತ್ಯೇಕವಾಗಿ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ 19 ಪೆಡ್ಲರ್‌ಗಳನ್ನು ಸೆರೆ ಹಿಡಿದು 7.6 ಕೋಟಿ ರು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ. ಜಂತು ಮಂಡಲ್, ಸಾಯಿಕುಮಾರ್ ಧಮ್ಶಟ್ಟಿ, ಅರ್ಜುನ್ ನಂಬಲರ್, ರೋಹನ್ ಬಾಬು, ಪವನ್, ಅಕ್ಷಯ್ ಹಾಗೂ ಜಿಷ್ಣು ಸೇರಿ 19 ಜನ ಬಂಧಿತರಾಗಿದ್ದು, ಆರೋಪಿಗಳಿಂದ 6 ಕೇಜಿ ಹ್ಯಾಶಿಸ್ ಆಯಿಲ್, 51.89 ಕೇಜಿ ಗಾಂಜಾ, 140 ಗ್ರಾಂ ಎಂಡಿಎಂಎ ಕ್ರಿಸ್ಟಲ್, 236 ಎಕ್ಸಟೈಸಿ ಮಾತ್ರೆಗಳು, 34 ಎಲ್‌ಎಸ್‌ಡಿ, 23 ಗ್ರಾಂ ಕೊಕೈನ್, 17 ಮೊಬೈಲ್, 1 ಕಾರು, 1 ಬೈಕ್ ಜಪ್ತಿ ಮಾಡಲಾಗಿದೆ.
ಹೊರ ರಾಜ್ಯ ಹಾಗೂ ವಿದೇಶಗಳ ಡ್ರಗ್‌್ಸ ಮಾರಾಟ ಜಾಲದ ಮೂಲಕ ಡ್ರಗ್ಸ್ ಖರೀದಿಸಿ ನಗರದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ವಿಲ್ಸನ್ ಗಾರ್ಡನ್, ಬೇಗೂರು, ಅಶೋಕ ನಗರ, ಆರ್.ಟಿ.ನಗರ ಹಾಗೂ ಹೆಣ್ಣೂರು ಸೇರಿದಂತೆ ನಗರದ ವಿವಿಧೆಡೆ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಮಾಲೀನ ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಎಸ್.ಡಿ.ಶರಣಪ್ಪ ಹೇಳಿದ್ದಾರೆ.
Bengaluru: ಚಿನ್ನದ ವ್ಯಾಪಾರಿಗೆ 1.65 ಕೋಟಿ ದೋಖಾ ಮಾಡಿದ್ದ ಮೂವರ ಬಂಧನ
ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಪಶ್ಚಿಮ ಬಂಗಾಳದ ಜಂತು ಮಂಡಲ್ ಹಾಗೂ ಆಂಧ್ರಪ್ರದೇಶದ ಸಾಯಿಕುಮಾರ್ ಬಂಧಿತರಾಗಿದ್ದಾರೆ. ನಗರಕ್ಕೆ ಉದ್ಯೋಗ ಅರಸಿ ಬಂದಿದ್ದ ಮಂಡಲ್, ಉಬರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಬಳಿಕ ಹಣದಾಸೆಗೆ ಡ್ರಗ್ಸ್ ದಂಧೆಗಿಳಿದ ಆತ, ಸಾಯಿಕುಮಾರ್ ಜತೆ ಸೇರಿ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಆಂಧ್ರಪ್ರದೇಶದ ಪೆಡ್ಲರ್‌ನ ಸೂಚನೆ ಮೇರೆಗೆ ಹಾಶಿಶ್ ಆಯಿಲ್ ಹಾಗೂ ಗಾಂಜಾವನ್ನು ನಗರದ ಗ್ರಾಹಕರಿಗೆ ಕಮೀಷನ್ ಆಧಾರದಡಿ ಮಂಡಲ್ ಹಾಗೂ ಸಾಯಿ ಪೂರೈಸುತ್ತಿದ್ದರು.
ಅದೇ ರೀತಿ ಬೇಗೂರು ಬಳಿ ಕೇರಳ ಮೂಲದ ಅರ್ಜುನ್ ಹಾಗೂ ರೋಹನ್ ಸಿಕ್ಕಿಬಿದ್ದಿದ್ದಾರೆ. 6 ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು, ಮೊದಲು ಖಾಸಗಿ ವಿಮಾ ಕಂಪನಿಯಲ್ಲಿ ನೌಕರಿಯಲ್ಲಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡಲು ಆಂಧ್ರದಲ್ಲಿ ಪೆಡ್ಲರ್‌ಗಳನ್ನು ಸಂಪರ್ಕಿಸಿ ಗಾಂಜಾ ಖರೀದಿಸಿ ಕಾರಿನಲ್ಲಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಝೋಮ್ಯಾಟೋದಲ್ಲಿ ಡಿಲವರಿ ಬಾಯ್ ಆಗಿದ್ದ ಕೊಡಗು ಜಿಲ್ಲೆಯ ಅಕ್ಷಯ್, ಗ್ರಾಹಕರಿಗೆ ಮನೆ ಬಾಗಿಲಿಗೆ ಫುಡ್ ಡೆಲವರಿ ನೆಪದಲ್ಲಿ ಡ್ರಗ್ಸ್ ಪೂರೈಸುತ್ತಿದ್ದ. ಇನ್ನು ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಮೂವರು ಆಫ್ರಿಕಾ ಮೂಲದ ಪ್ರಜೆಗಳು ಕೂಡಾ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ವೀಸಾ ಅವಧಿ ಮುಗಿದ ಬಳಿಕ ಅಕ್ರಮವಾಗಿ ನಗರದಲ್ಲಿ ಆರೋಪಿಗಳು ನೆಲೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದಿಂದ ಡ್ರಗ್ಸ್ ಖರೀದಿಸಿ ಬಳಿಕ ನಗರದಲ್ಲಿ ಈ ವಿದೇಶಿ ಪೆಡ್ಲರ್‌ಗಳು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
