ವಿಧಾನಸಭಾ ಚುನಾವಣೆ ವೇಳೆ ಪ್ರಭಾವಿ ರಾಜಕೀಯ ನಾಯಕರಿಗೆ ಉಡುಗೊರೆ ನೀಡಲು ಅಗತ್ಯವಿದೆ ಎಂದು ಹೇಳಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ವ್ಯಾಪಾರಿಯೊಬ್ಬರಿಂದ 1.65 ಕೋಟಿ ರು. ಮೌಲ್ಯದ 3 ಕೇಜಿ ಚಿನ್ನ ಹಾಗೂ 85 ಲಕ್ಷ ರು ಪಡೆದು ವಂಚಿಸಿದ್ದ ಮೂವರು ಕಿಡಿಗೇಡಿಗಳನ್ನು ಸಿಸಿಬಿ ಬಂಧಿಸಿದೆ. 

ಬೆಂಗಳೂರು (ಮೇ.06): ವಿಧಾನಸಭಾ ಚುನಾವಣೆ ವೇಳೆ ಪ್ರಭಾವಿ ರಾಜಕೀಯ ನಾಯಕರಿಗೆ ಉಡುಗೊರೆ ನೀಡಲು ಅಗತ್ಯವಿದೆ ಎಂದು ಹೇಳಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ವ್ಯಾಪಾರಿಯೊಬ್ಬರಿಂದ 1.65 ಕೋಟಿ ರು. ಮೌಲ್ಯದ 3 ಕೇಜಿ ಚಿನ್ನ ಹಾಗೂ 85 ಲಕ್ಷ ರು ಪಡೆದು ವಂಚಿಸಿದ್ದ ಮೂವರು ಕಿಡಿಗೇಡಿಗಳನ್ನು ಸಿಸಿಬಿ ಬಂಧಿಸಿದೆ. ಪೀಣ್ಯದ ಅಭಯ್‌ ಜೈನ್‌, ಚಾಮರಾಜಪೇಟೆ ಬಿನ್ನಿಮಿಲ್‌ ಸಮೀಪದ ಸಂಕೇತ್‌ ಹಾಗೂ ನವೀನ್‌ ಬಂಧಿತರಾಗಿದ್ದು, ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ. ಇತ್ತೀಚಿಗೆ ತಮ್ಮ ಪರಿಚಿತ ಚಿನ್ನದ ವ್ಯಾಪಾರಿ ವಿಶಾಲ್‌ ಜೈನ್‌ ಅವರಿಗೆ ಅಭಯ್‌ ತಂಡ ವಂಚಿಸಿತ್ತು. 

ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಇನ್ಸ್‌ಪೆಕ್ಟರ್‌ ಸಂತೋಷ್‌ ರಾಮ್‌ ನೇತೃತ್ವ ತಂಡವು, ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಲವು ವರ್ಷಗಳಿಂದ ಕೆ.ಆರ್‌.ಮಾರುಕಟ್ಟೆ ಬಳಿ ಚಿನ್ನಾಭರಣ ಮಾರಾಟ ಮಳಿಗೆಯನ್ನು ವಿಶಾಲ್‌ ಜೈನ್‌ ನಡೆಸುತ್ತಿದ್ದು, ಪೀಣ್ಯದ ಅಭಯ್‌ ಜೈನ್‌ ಜತೆ ಸ್ನೇಹವಿತ್ತು. ನನಗೆ ಬಹಳ ರಾಜಕಾರಣಿಗಳು ಪರಿಚಯಸ್ಥರು. ಈಗ ಚುನಾವಣೆ ನಡೆಯುತ್ತಿರುವ ಕಾರಣ ಜನರಿಗೆ ಉಡುಗೊರೆ ಹಂಚಲು ರಾಜಕಾರಣಿಗಳಿಗೆ ಚಿನ್ನದ ಅಗತ್ಯವಿದೆ. ಈ ಚಿನ್ನವನ್ನು ತಮ್ಮಲ್ಲಿಯೇ ಖರೀದಿಸುವುದಾಗಿ ವಿಶಾಲ್‌ಗೆ ಅಭಯ್‌ ಹೇಳಿದ್ದ.

ಪ್ರಧಾನಿ ಮೋದಿ ಬೆಂಗ್ಳೂರು ಮೆಗಾ ರೋಡ್‌ ಶೋಗೆ ಹೈಕೋರ್ಟ್‌ ಅಸ್ತು

ಈ ಮಾತನ್ನು ವಿಶಾಲ್‌ ನಂಬಿದ್ದ. ಫೆ.19ರಂದು ಆತನ ಅಂಗಡಿಗೆ ತೆರಳಿ ಎರಡೂವರೆ ಕೇಜಿ ಚಿನ್ನವನ್ನು ಆರೋಪಿಗಳು ಪಡೆದಿದ್ದರು. ಆ ವೇಳೆ ರಾಜಕಾರಣಿಗಳು ನನ್ನಿಂದ ಚಿನ್ನ ಖರೀದಿಸಿದರೆ ನಿಮಗೆ ಹಣ ಕೊಡುತ್ತೇನೆ. ಇಲ್ಲದೆ ಹೋದರೆ ನಿಮಗೆ ಚಿನ್ನ ಮರಳಿಸುವುದಾಗಿ ವಿಶಾಲ್‌ಗೆ ಅಭಯ್‌ ಹೇಳಿದ್ದ. ಮತ್ತೆ ಫೆ.24ರಂದು ವಿಶಾಲ್‌ಗೆ ಕರೆ ಮಾಡಿದ ಅಭಯ್‌, ಆಭರಣಗಳಿಗೆ ಭಾರಿ ಬೇಡಿಕೆ ಬಂದಿದೆ. ಈಗಲೇ ತಾನು ಹೇಳುವ ಪಂಚತಾರಾ ಹೋಟೆಲ್‌ಗೆ 1.25 ಕೇಜಿ ಚಿನ್ನದ ಸಮೇತ ಬರುವಂತೆ ಸೂಚಿಸಿದ್ದ. ಅಂತೆಯೇ ಆರೋಪಿ ಹೇಳಿದ್ದ ಹೋಟೆಲ್‌ಗೆ ವಿಶಾಲ್‌ ತೆರಳಿದ್ದ. ಆ ವೇಳೆ ರಾಜಕಾರಣಿಯೊಬ್ಬರ ಆಪ್ತ ಸಹಾಯಕ ಜತೆಗೆ ಮಾತನಾಡಿದಂತೆ ನಟಿಸಿ ವಿಶಾಲ್‌ ಅವರಿಂದ ಅಭಯ್‌ ಚಿನ್ನ ಪಡೆದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಅಂಬರೀಶ್‌ಗೊಂದು ಸ್ಮಾರಕ ನಿರ್ಮಿಸಲಿಲ್ಲ: ಎಚ್‌ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ

ನಕಲಿ ಚಿನ್ನ ಕೊಟ್ಟು ಟೋಪಿ: ಮಾ.6ರಂದು ವಿಶಾಲ್‌ಗೆ ಕರೆ ಮಾಡಿದ ಅಭಯ್‌, ನಿಮ್ಮಿಂದ ಖರೀದಿಸಿದ್ದ ಚಿನ್ನಕ್ಕೆ ಬದಲಾಗಿ 8 ಕೇಜಿ ಚಿನ್ನ ಗಟ್ಟಿಕೊಡುತ್ತೇನೆ. ಈ ಗಟ್ಟಿತರುವ ವ್ಯಕ್ತಿಗೆ 50 ಲಕ್ಷ ರು ನಗದು ಕೊಡುವಂತೆ ಹೇಳಿದ್ದ. ಈ ಮಾತು ನಂಬಿದ ಆತ, ಅಭಯ್‌ ಸೂಚಿಸಿದ ವ್ಯಕ್ತಿಗೆ 50 ಲಕ್ಷ ರು ಕೊಟ್ಟು ಚಿನ್ನದ ಗಟ್ಟಿಯನ್ನು ಸದಾಶಿವನಗರದ ಬಳಿ ಪಡೆದಿದ್ದರು. ಬಳಿಕ ಮನೆಗೆ ತೆರಳಿ ಚಿನ್ನ ಗಟ್ಟಿ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ರಾಜಕಾರಣಿ ಪಿಎ ಹೆಸರು ಹೇಳಿ ಅಭಯ್‌ ತಪ್ಪಿಸಿಕೊಂಡಿದ್ದ. ಮರು ದಿನ ವಿಶಾಲ್‌ನನ್ನು ಖಾಸಗಿ ಹೋಟೆಲ್‌ಗೆ ಮಾತುಕತೆ ನೆಪದಲ್ಲಿ ಕರೆಸಿಕೊಂಡ ಆರೋಪಿಗಳು, ನಾವು ಅಸಲಿ ಚಿನ್ನದ ಗಟ್ಟಿ ಕೊಟ್ಟಿದ್ದೇವು. ಈಗ ನೀನು ಸುಳ್ಳು ಹೇಳುತ್ತಿದ್ದೀಯಾ ಎಂದು ರಾಜಕಾರಣಿ ಹೆಸರು ಹೇಳಿ ಬೆದರಿಸಿ, 35 ಲಕ್ಷ ರು. ವಸೂಲಿ ಮಾಡಿದ್ದರು. ಈ ಬ್ಲಾಕ್‌ಮೇಲ್‌ ಕಾಟ ತಾಳಲಾರದೆ ಸಿ.ಟಿ.ಮಾರ್ಕೆಟ್‌ ಠಾಣೆಗೆ ವಿಶಾಲ್‌ ದೂರು ನೀಡಿದ್ದರು.