ಕಲಬುರಗಿ: ಕಣ್ವ ಸೊಸೈಟಿಯಿಂದ 15 ಸಾವಿರ ಕೋಟಿ ವಂಚನೆ..!
23000 ಜನರಿಗೆ 15000 ಕೋಟಿ ರು.ಗಳನ್ನು ವಂಚನೆ, ಲೂಟಿ, ಬೇರೆ, ಬೇರೆ ಕಡೆಗೆ ಹೂಡಿಕೆ ಮಾಡಿದ್ದಾರೆ. ಕೇವಲ ರಾಜ್ಯ ಅಷ್ಟೇ ಅಲ್ಲ, ಹೊರ ರಾಜ್ಯಗಳಲ್ಲಿಯೂ ಬಂಡವಾಳ ಹೂಡಿ ಒಟ್ಟಾರೆ ದಿವಾಳಿ ಮಾಡಿದ್ದಾರೆ. ಹಗರಣದಿಂದಾಗಿ ಕಲ್ಯಾಣ ಕರ್ನಾಟಕದಲ್ಲಿ ಒಂದು ಸಾವಿರ ಜನರು ಮೋಸ ಹೋಗಿದ್ದಾರೆ ಎಂದ ಎಂಎಲ್‌ಸಿ ಶಶೀಲ್ ಜಿ. ನಮೋಶಿ
ಕಲಬುರಗಿ(ಆ.18): ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಹಗರಣದಿಂದ ಸಾವಿರಾರು ಜನರು ನೊಂದಿದ್ದು, ಅವರಿಗೆ ನ್ಯಾಯ ದೊರಕಿಸಿಕೊಡಲು ರಾಜ್ಯ ಸರ್ಕಾರವು ಹಗರಣದ ಕುರಿತು ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಎಂಎಲ್‌ಸಿ ಶಶೀಲ್ ಜಿ. ನಮೋಶಿ ಆಗ್ರಹಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 23000 ಜನರಿಗೆ 15000 ಕೋಟಿ ರು.ಗಳನ್ನು ವಂಚನೆ, ಲೂಟಿ, ಬೇರೆ, ಬೇರೆ ಕಡೆಗೆ ಹೂಡಿಕೆ ಮಾಡಿದ್ದಾರೆ. ಕೇವಲ ರಾಜ್ಯ ಅಷ್ಟೇ ಅಲ್ಲ, ಹೊರ ರಾಜ್ಯಗಳಲ್ಲಿಯೂ ಬಂಡವಾಳ ಹೂಡಿ ಒಟ್ಟಾರೆ ದಿವಾಳಿ ಮಾಡಿದ್ದಾರೆ. ಹಗರಣದಿಂದಾಗಿ ಕಲ್ಯಾಣ ಕರ್ನಾಟಕದಲ್ಲಿ ಒಂದು ಸಾವಿರ ಜನರು ಮೋಸ ಹೋಗಿದ್ದಾರೆ ಎಂದರು.
ಆನ್‌ಲೈನ್ ಮೋಸದ ಜಾಲ: ಕಾರಿನ ಆಸೆಗೆ 11 ಲಕ್ಷ ಹಣ ಕಳೆದುಕೊಂಡ ಕಾಫಿನಾಡಿನ ಯುವಕ
ರಾಜ್ಯಾದ್ಯಂತ 23000 ಜನರು ಬಾಧಿತರು:
ಕಣ್ವ ಹಗರಣದ ಸಂತ್ರಸ್ತರ ನಿಯೋಗವು ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಕಲಬುರಗಿ, ಭದ್ರಾವತಿ, ದಾವಣಗೆರೆ, ಹೊಸಪೇಟೆ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ- ಧಾರವಾಡ, ಗದಗದಿಂದ ಆ.14ರಂದು ಸೋಮವಾರ ನನ್ನ ನಿವಾಸದಲ್ಲಿ ಭೇಟಿ ಮಾಡಿ, ಹಗರಣದಿಂದ ತಮ್ಮ ವೈಯಕ್ತಿಕ ನೋವುಗಳನ್ನು ಮತ್ತು ಪರಿಶ್ರಮಗಳನ್ನು ಮತ್ತು ತಮ್ಮ ನಿರಂತರ ಹೋರಾಟದ ಕುರಿತು ವಿವರಿಸಿದರು. ಈ ಪ್ರದೇಶಗಳಲ್ಲಿಯೇ ಸುಮಾರು 1000ಕ್ಕೂ ಹೆಚ್ಚು ಸಂತ್ರಸ್ತರು ಬಾಧಿತರಾಗಿದ್ದಾರೆ. ಆದಾಗ್ಯೂ, ರಾಜ್ಯಾದ್ಯಂತ 23000 ಜನರು ಬಾಧಿತರಾಗಿದ್ದಾರೆಂದು ಆತಂಕ ಹೊರಹಾಕಿದರು.
ವಂಚನೆ, ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸುವುದು ಮತ್ತು ಸಂಭಾವ್ಯ ಅಕ್ರಮಗಳ ತನಿಖೆಗಾಗಿ ಸಹಕಾರ ಇಲಾಖೆಯು ಕೆಎಸ್‌ಎಸ್ ಕಾಯ್ದೆಯ ಸೆಕ್ಷನ್ 35ರ ಅಡಿಯಲ್ಲಿ ಕಣ್ವ ಸೌಹಾರ್ದ ಸಹಕಾರಿಯ ಚಟುವಟಿಕೆಗಳ ಅಡಿಯಲ್ಲಿ ವಿಚಾರಣೆಯನ್ನು ಮಾಡಿದೆ. ತನಿಖಾಧಿಕಾರಿಯು ಕಣ್ವ ಸೌಹಾರ್ದ ಸಹಕಾರಿಯು ಮಾಡಿದ 40 ನಿರ್ದಿಷ್ಟಅಪರಾಧಗಳನ್ನು ಗುರುತಿಸಿ, ಕಳೆದ 2021ರ ಜು.19ರಂದು ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ವಿಚಾರಣೆಯ ಫಲಿತಾಂಶಗಳನ್ನು ಆಧರಿಸಿ ಕರ್ನಾಟಕ ಮುಖ್ಯ ನ್ಯಾಯಮೂರ್ತಿಗಳು ಕಾಯ್ದೆಯ ಸೆಕ್ಷನ್ 37 ಮತ್ತು 37-ಎ ಪ್ರಕಾರ ಕ್ರಮ ಕೈಗೊಳ್ಳುವಂತೆ ಹಾಗೂ ನ್ಯಾಯಾಲಯಕ್ಕೆ ಪ್ರಗತಿ ವರದಿಯನ್ನು ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ವಂಚಿಸಿ ಕೋಟಿ ಕೋಟಿ ಲೂಟಿ ಹೊಡೆದ ‘ಹಾರ್ಟ್ ಸ್ಪೆಷಲಿಸ್ಟ್’!
ಹಗರಣದ ಕುರಿತು 21 ಎಫ್‌ಐಆರ್‌ಗಳನ್ನು ಹಾಕಲಾಗಿದೆ. ಪ್ರಮುಖ ಆರೋಪಿ ನಂಜುಂಡಯ್ಯ ಎಂಬಾತ ಬ್ಯಾಂಕ್, ಕಂಪೆನಿಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಆತನೇ ಸ್ವತಃ ನಮ್ಮ ಮೇಲೆ 400 ಎಫ್‌ಐಆರ್‌ಗಳು ಇವೆ ಎಂದು ಹೇಳಿದ್ದಾನೆ. ಸರ್ಕಾರ ಕೇವಲ 21 ಎಫ್‌ಐಆರ್ ಹೇಳುತ್ತಿದೆ. ಇದೆಲ್ಲ ದೂರು ಕೊಟ್ಟಮೇಲೆ ಇಲಾಖೆಯವರು ಒಂದೂವರೆ ವರ್ಷ ತನಿಖೆ ಮಾಡಿ, 40 ತಪ್ಪುಗಳನ್ನು ಮಾಡಿದ್ದನ್ನು ವರದಿ ಮಾಡಿದ್ದಾರೆ. ಸರ್ಕಾರದ ವ್ಯವಸ್ಥೆಯಲ್ಲಿ ವ್ಯತ್ಯಾಸ, ಏನು ಮಾಡಬೇಕಾಗಿತ್ತು ಎಂಬುದರ ಕುರಿತು ವರದಿ ಸಲ್ಲಿಸಿದ್ದಾರೆ. ಉಚ್ಚ ನ್ಯಾಯಾಲಯಕ್ಕೂ ಹೋಗಿದ್ದಾರೆ. ಮುಖ್ಯ ನ್ಯಾಯಾಧೀಶರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದರೆ ಇನ್ನೂವರೆಗೆ ಸರ್ಕಾರ ಏನೂ ಮಾಡಿಲ್ಲ. ಯಾವ ಪ್ರಮಾಣದಲ್ಲಿ ಅವರ ಹಣ ಮರಳಿಸಬೇಕು ಎಂಬ ಕಳಕಳಿ ಸರ್ಕಾರಕ್ಕೆ ಇಲ್ಲವೆಂದು ದೂರಿದರು.
ತಮ್ಮ ಆಸ್ತಿ ಇತ್ಯಾದಿ ಹರಾಜು ಮಾಡಿದರೆ ಶೇ.70ರಷ್ಟುಹಣ ಬರುತ್ತದೆ. ನಂಜುಂಡಪ್ಪ ಕಚೇರಿಯ ಕಾರು ಜಪ್ತು ಮಾಡುತ್ತಾರೆ. ಆದಾಗ್ಯೂ, ಅತನ ಹೆಸರಿನ ಕಾರು ಜಪ್ತಿ ಮಾಡುತ್ತಿಲ್ಲ. 155 ಶಾಖೆಗಳಿವೆ. ಕೂಡಲೇ ಈ ಕುರಿತು ಸಿಬಿಐ ತನಿಖೆ ಕೈಗೊಳ್ಳುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗಪ್ಪ ಪಾಂಚಾಳ್, ಡಾ. ಮುರಲೀಧರರಾವ್, ವಿಜಯಕುರ್ಮಾ ಟಿ.ಎಸ್., ಸಫರ್ದಾ ಶೇಖ್, ಸಂಗಮೇಶ್ ಗುಬ್ಬೇವಾಡ್, ರಮೇಶ್ ಇದ್ದರು.