ಸಾಲ ವಾಪಸ್ ಕೊಡ್ಲಿಲ್ಲ ಅಂತ ವ್ಯಕ್ತಿಯ ಇಬ್ಬರು ಸೋದರಿಯರನ್ನು ಗುಂಡಿಕ್ಕಿ ಕೊಂದ ಪಾಪಿಗಳು!
ಸಹೋದರಿಯರಾದ 30 ವರ್ಷದ ಪಿಂಕಿ ಮತ್ತು 29 ವರ್ಷದ ಜ್ಯೋತಿ ಅವರ ಎದೆ ಮತ್ತು ಹೊಟ್ಟೆಗೆ ಗುಂಡು ಹಾರಿಸಲಾಗಿದೆ. ಬಳಿಕ, ಅವರನ್ನು ಎಸ್‌ಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಗಾಯಗಳಿಂದ ಮೃತಪಟ್ಟಿದ್ದಾರೆ.
ನವದೆಹಲಿ (ಜೂನ್ 18, 2023) : 10,000 ರೂ. ಸಾಲದ ವಿಚಾರವಾಗಿ ಇಬ್ಬರು ಸಹೋದರಿಯರನ್ನು ಗುಂಡಿಕ್ಕಿ ಕೊಂದಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು, ಈ ಸಂಬಂಧ ಗುಂಡಿಕ್ಕಿ ಕೊಂದ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ನೈಋತ್ಯ ದೆಹಲಿಯ ಆರ್.ಕೆ ಪುರಂನ ಅಂಬೇಡ್ಕರ್ ಬಸ್ತಿಯನ್ನು ಮುಂಜಾನೆ 4 ಗಂಟೆ ಸುಮಾರಿಗೆ ತಲುಪಿದ 15 ರಿಂದ 20 ಶಸ್ತ್ರಸಜ್ಜಿತ ವ್ಯಕ್ತಿಗಳು ಬಾಗಿಲು ಬಡಿದು ಅದರ ಮೇಲೆ ಇಟ್ಟಿಗೆಗಳನ್ನು ಎಸೆದರು ಎಂದು ಪೊಲೀಸರು ತಿಳಿಸಿದ್ದಾರೆ. ನಿರಂತರ ಕಲ್ಲು ತೂರಾಟದ ನಂತರವೂ ಯಾರೂ ಬಾಗಿಲು ತೆರೆಯದಿದ್ದಾಗ ಅವರು ಹೊರಟುಹೋದರು. ಆದರೆ, ದಾಳಿಕೋರರು ಹುಡುಕುತ್ತಿದ್ದ ಮನೆ ಮಾಲೀಕ ಲಲಿತ್ ತನ್ನ ಇಬ್ಬರು ಸಹೋದರಿಯರೊಂದಿಗೆ ಮನೆಯಿಂದ ಹೊರಬಂದು ಅವರ ಬಗ್ಗೆ ವಿಚಾರಿಸುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಹಿಂತಿರುಗಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಮುಸ್ಲಿಂ ಹುಡುಗಿ ಪ್ರೀತಿಸಿದ ಹಿಂದೂ ವ್ಯಕ್ತಿ 7 ತುಂಡುಗಳಾಗಿ ಕಟ್: ಚೀಲಕ್ಕೆ ತುಂಬಿ ಚರಂಡಿಗೆ ಎಸೆದು ಹೋದ ಪಾಪಿಗಳು
ಸಹೋದರಿಯರಾದ 30 ವರ್ಷದ ಪಿಂಕಿ ಮತ್ತು 29 ವರ್ಷದ ಜ್ಯೋತಿ ಅವರ ಎದೆ ಮತ್ತು ಹೊಟ್ಟೆಗೆ ಗುಂಡು ಹಾರಿಸಲಾಗಿದೆ. ಬಳಿಕ, ಅವರನ್ನು ಎಸ್‌ಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಒಂದು ಗುಂಡು ಲಲಿತ್‌ಗೆ ಬಡಿಯಿತಾದರೂ, ಆತ ಯಶಸ್ವಿಯಾಗಿ ಪಾರಾಗಿದ್ದಾನೆ. ಹಣದ ವಿಚಾರದಲ್ಲಿ ಸ್ಥಳೀಯ ದೇವ್ ಎಂಬಾತನ ಜೊತೆ ತನಗೆ ಜಗಳವಿತ್ತು ಎಂದೂ ಪೊಲೀಸರಿಗೆ ತಿಳಿಸಿದ್ದಾನೆ.
ಆರ್.ಕೆ. ಪುರಂ ಪೊಲೀಸ್ ಠಾಣೆಗೆ ಬೆಳಿಗ್ಗೆ 4:40 ಕ್ಕೆ ಪೊಲೀಸರಿಗೆ ಕರೆ ಬಂದಿದ್ದು, ಅಂಬೇಡ್ಕರ್ ಬಸ್ತಿಯಲ್ಲಿ ಕೆಲವರು ಕರೆ ಮಾಡಿದವರ ಸಹೋದರಿಯರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಈ ಘಟನೆ ಬಗ್ಗೆ ನೈರುತ್ಯ ದೆಹಲಿಯ ಉಪ ಪೊಲೀಸ್ ಆಯುಕ್ತ ಮನೋಜ್ ಸಿ ತಿಳಿಸಿದ್ದಾರೆ. ಮೂವರು ಆರೋಪಿಗಳಾದ ಅರ್ಜುನ್, ಮೈಕೆಲ್ ಮತ್ತು ದೇವ್ ಅವರನ್ನು ಈವರೆಗೆ ಬಂಧಿಸಲಾಗಿದೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: ಮದುವೆಯಾಗಿದ್ದ ಹಂತಕ ಸಾನೆ, ಸರಸ್ವತಿ: ಮನೋಜ್ ಕೆಂಪು ಕಣ್ಣಿಂದಲೇ ಬಯಲಾಯ್ತು ಕೊಲೆ!
ಘಟನೆಯ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ. ಈ ಸಂಬಂದ ಟ್ವೀಟ್ ಮಾಡಿರುವ ದೆಹಲಿ ಸಿಎಂ, "ನಮ್ಮ ಆಲೋಚನೆಗಳು ಇಬ್ಬರೂ ಮಹಿಳೆಯರ ಕುಟುಂಬಗಳೊಂದಿಗೆ ಇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೆಹಲಿಯ ಜನರು ತುಂಬಾ ಅಭದ್ರತೆಯ ಭಾವನೆ ಹೊಂದುವುದನ್ನು ಪ್ರಾರಂಭಿಸಿದ್ದಾರೆ. ಇನ್ನು, ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಹೊಂದಿರುವ ಜನರು ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿಪಡಿಸುವ ಬದಲು, ದೆಹಲಿ ಸರ್ಕಾರವನ್ನು ಸಂಪೂರ್ಣ ವಶಪಡಿಸಿಕೊಳ್ಳಲು ಪಿತೂರಿ ಮಾಡುತ್ತಿದ್ದಾರೆ. ಇಂದು ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಲೆಫ್ಟಿನೆಂಟ್ ಗವರ್ನರ್ ಬದಲಿಗೆ ಎಎಪಿ ಸರ್ಕಾರದ ಅಡಿಯಲ್ಲಿದ್ದರೆ ದೆಹಲಿ ಸುರಕ್ಷಿತವಾಗಿರುತ್ತಿತ್ತು’’ ಎಂದು ಪರೋಕ್ಷವಾಗಿ ಎಲ್‌ಜಿ ಹಾಗೂ ಕೇದ್ರ ಸರ್ಕಾರದ ವಿರುದ್ಧವೂ ಟೀಕೆ ಮಾಡಿದ್ದಾರೆ.
ಈ ಮಧ್ಯೆ, ಬಿಜೆಪಿ ನಾಯಕ ಮತ್ತು ಸಂಸದ ಮನೋಜ್ ತಿವಾರಿ ಅವರು ನಾನು ಈ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ, ಇಂತಹ ಘಟನೆಗಳ ಮೇಲೆ ರಾಜಕೀಯ ಮಾಡುವ ಜನರು ತಮ್ಮ ಪ್ರಮುಖ ಜವಾಬ್ದಾರಿಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ. ನಿರಂತರ ಬೆಂಕಿ ಘಟನೆಗಳು ವರದಿಯಾಗುತ್ತಿದ್ದು, ದೆಹಲಿ ಸರ್ಕಾರ ಇದನ್ನು ನಿಲ್ಲಿಸಬೇಕಾಗಿದೆ. ಇನ್ನು, ದೆಹಲಿಯಲ್ಲಿ ಹೆಚ್ಚುತ್ತಿರುವ ಕ್ರೋಧ ಅಪರಾಧಗಳ ಬಗ್ಗೆ ದೆಹಲಿ ಮುಖ್ಯಮಂತ್ರಿಗೆ ಸಲಹೆ ನೀಡಿದ ತಿವಾರಿ, "ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಹೆಚ್ಚುತ್ತಿರುವ ಕೋಪ-ಸಂಬಂಧಿತ ಸಮಸ್ಯೆಗಳ ಬಗ್ಗೆ ಕಾರ್ಯನಿರ್ವಹಿಸಬೇಕು" ಎಂದೂ ಹೇಳಿದರು.
ಇದನ್ನೂ ಓದಿ: ಲಿವ್ ಇನ್ ಸಂಗಾತಿ ತುಂಡು ತುಂಡಾಗಿ ಕತ್ತರಿಸಿದ ಪಾಪಿಗೆ ಏಡ್ಸ್: ಆಕೆ ಮಗಳಿದ್ದಂತೆ, ಸೂಸೈಡ್ ಮಾಡ್ಕೊಂಡ್ಳು ಎಂದ!