*ಮೆಕ್ಯಾನಿಕ್‌ ಬಳಿ ಮಾತಾಡುವ ವೇಳೆ ಕಾರಿಂದ ಹಣ ಎಗರಿಸಿದರು*ಇಂದಿರಾನಗರ ನಿವಾಸಿ ಬುಡೇನ್‌ ಸಾಬ್‌ ಹಣ ಕಳೆದುಕೊಂಡವರು*ಕಾರಿನ ಟೈಯರ್‌ ಪಂಚರ್‌ ಆಗಿದೆ ಎಂದು ಹೇಳಿದ್ದ ಕಳ್ಳರು 

ಬೆಂಗಳೂರು (ಫೆ. 07):  ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಸೆಳೆದು ರೂ.15 ಲಕ್ಷ ದೋಚಿ ಪರಾರಿಯಾಗಿರುವ ಘಟನೆ ತಿಲಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದಿರಾನಗರ ನಿವಾಸಿ ಬುಡೇನ್‌ ಸಾಬ್‌(52) ಹಣ ಕಳೆದುಕೊಂಡವರು. ಇವರು ಖಾಸಗಿ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದಾರೆ. ಕಂಪನಿಯ ಮಾಲಿಕ ನಾಗರಾಜ್‌ ರೆಡ್ಡಿ ಸೂಚನೆ ಮೇರೆಗೆ ಬುಡೇನ್‌ ಸಾಬ್‌ ಅವರು ಫೆ.3ರಂದು ಮಧ್ಯಾಹ್ನ 3.15ರ ಸುಮಾರಿಗೆ ಇಂದಿರಾನಗರದ ಸಿಎಂಎಚ್‌ ರಸ್ತೆಯ ಕರ್ನಾಟಕ ಬ್ಯಾಂಕ್‌ನಿಂದ ರೂ.15 ಲಕ್ಷ ಡ್ರಾ ಮಾಡಿದ್ದರು. ಬಳಿಕ ಆ ಹಣವನ್ನು ಬ್ಯಾಗಲ್ಲಿ ಇಟ್ಟುಕೊಂಡು ಪಕ್ಕದ ಸೀಟಿನಲ್ಲಿ ಇರಿಸಿಕೊಂಡು ಕಾರಿನಲ್ಲಿ ಕಂಪನಿಗೆ ವಾಪಸಾಗುತ್ತಿದ್ದರು.

ಸಿಎಂಎಚ್‌ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿರುವ ಇಬ್ಬರು ಅಪರಿಚಿತರು ನಿಮ್ಮ ಕಾರಿನ ಟೈಯರ್‌ ಪಂಚರ್‌ ಆಗಿದೆ ಎಂದು ಹೇಳಿದ್ದಾರೆ. ಆದರೂ ಬುಡೇನ್‌ ಸಾಬ್‌ ಲಕ್ಷ್ಯ ವಹಿಸದೆ ಮುಂದೆ ಸಾಗಿದ್ದಾರೆ. ಇಂದಿರಾ ನಗರದ 1ನೇ ಮುಖ್ಯರಸ್ತೆಯಲ್ಲಿ ಹೋಗುವಾಗ ಕಾರಿನ ಚಕ್ರ ಪಂಚರ್‌ ಆಗಿರುವುದು ಗಮನಕ್ಕೆ ಬಂದಿದೆ.

ಬಳಿಕ ಸಮೀಪದಲ್ಲೇ ಇದ್ದ ಪಂಚರ್‌ ಅಂಗಡಿಗೆ ಬಳಿ ಕಾರು ನಿಲ್ಲಿಸಿ ಕೆಳಗೆ ಇಳಿದು ಟೈಯರ್‌ ಪಂಚರ್‌ ಹಾಕುವ ಬಗ್ಗೆ ಮೆಕ್ಯಾನಿಕ್‌ ಬಗ್ಗೆ ಮಾತನಾಡಲು ಮುಂದಾಗಿದ್ದಾರೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಬುಡೇನ್‌ಸಾಬ್‌ ಗಮನಕ್ಕೆ ಬಾರದಂತೆ ಕಾರಿನ ಬಾಗಿಲು ತೆರೆದು ಹಣವಿದ್ದ ಬ್ಯಾಗ್‌ ಎಗರಿಸಿ ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: Dharwad: ಕುಡಿದ ಮತ್ತಿನಲ್ಲಿ ಪೊಲೀಸರ ಜೀಪನ್ನೇ ಕಳವು ಮಾಡಿದ ಭೂಪ...!

ಕಾರಿನ ಗಾಜು ಒಡೆದು ರೂ.2 ಲಕ್ಷ ಕಳವು: ಮತ್ತೊದು ಪ್ರಕರಣದಲ್ಲಿ ಬಿಟಿಎಂ ಲೇಔಟ್‌ ನಿವಾಸಿ ಉದ್ಯಮಿ ಶ್ರೀನಿವಾಸಮೂರ್ತಿ(50) ಅವರು ಫೆ.4ರಂದು ಮಧ್ಯಾಹ್ನ 2.30ರ ಸುಮಾರಿಗೆ ಬಿಟಿಎಂ ಲೇಔಟ್‌ನ 2ನೇ ಹಂತದ ಕೆನರಾ ಬ್ಯಾಂಕ್‌ನಿಂದ ರೂ.2 ಲಕ್ಷ ಡ್ರಾ ಮಾಡಿದ್ದರು. ಬಳಿಕ ತಮ್ಮ ಕಾರಿನ ಡ್ಯಾಶ್‌ ಬೋರ್ಡಲ್ಲಿ ಹಣ ಇರಿಸಿಕೊಂಡು ಮನೆಯತ್ತ ಹೊರಟ್ಟಿದ್ದರು. ಮಾರ್ಗ ಮಧ್ಯೆ ಜಯನಗರ 9ನೇ ಬ್ಲಾಕ್‌ನ ಹೋಟೆಲ್‌ವೊಂದರ ಎದುರು ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದರು. ವಾಪಾಸ್‌ ಕಾರಿನ ಬಳಿ ಬಂದಾಗ ಕಾರಿನ ಕಿಟಕಿ ಗಾಜು ಒಡೆದು ಹಣ ಕದ್ದಿರುವುದು ಬೆಳಕಿಗೆ ಬಂದಿದೆ.

ಖ್ಯಾತ ರಾಮ್‌ಜೀನಗರ ಗ್ಯಾಂಗ್‌ನ 11 ಮಂದಿ ಬಂಧನ:  ಜನದಟ್ಟಣೆ ಪ್ರದೇಶಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಕಳವು(Theft) ಮಾಡುತ್ತಿದ್ದ ತಮಿಳುನಾಡು(Tamil Nadu) ಮೂಲದ ಕುಖ್ಯಾತ ‘ರಾಮ್‌ಜೀನಗರ ಗ್ಯಾಂಗ್‌’ನ 11 ಮಂದಿ ವೃತ್ತಿಪರ ಕಳ್ಳರನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಇದನ್ನೂ ಓದಿ:Bengaluru: 2 ಕೋಟಿ ಬೆಲೆಯ 171 ದುಬಾರಿ ವಾಚ್‌ ಕದ್ದಿದ್ದವ ಅರೆಸ್ಟ್‌

ತಮಿಳುನಾಡಿನ ತಿರುಚಿ ಮೂಲದ ರಜಿನಿ ಕಾಂತ್‌(48), ಸುಂದರ್‌ ರಾಜನ್‌(25), ಸೆಂಥಿಲ್‌ ಕುಮಾರ್‌(46), ಗೋಪಾಲ(39), ವೆಂಕಟೇಶ್‌(48), ಸುಬ್ರಮಣಿ(55), ಶಿವಕುಮಾರ್‌(40), ಮುರುಳಿ(33), ಮೂರ್ತಿ(27), ಮರುಗನಂದಂ(28) ಹಾಗೂ ಕುಮಾರ್‌(48) ಬಂಧಿತರು(Arrest). ಆರೋಪಿಗಳಿಂದ(Accused) ಏಳು ಲ್ಯಾಪ್‌ಟಾಪ್‌, 1 ಕ್ಯಾಮೆರಾ, 1 ಆ್ಯಪ್‌ಲ್‌ ಐಪ್ಯಾಡ್‌, 50 ಸಾವಿರ ರು. ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಾರತ್‌ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕಾರಿನ ಗ್ಲಾಸ್‌ ಒಡೆದು ಲ್ಯಾಪ್‌ಟಾಪ್‌ ಕಳವು ಮಾಡಿದ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರ ಬಂಧನದಿಂದ ಮಾರತ್‌ಹಳ್ಳಿ, ವೈಟ್‌ಫೀಲ್ಡ್‌, ಮಹದೇವಪುರ, ಅಶೋಕ ನಗರ, ದೇವನಹಳ್ಳಿ, ಸರ್ಜಾಪುರ, ತುಮಕೂರು, ಚಿಕ್ಕಮಗಳೂರು, ಉಡುಪಿ, ತಮಿಳುನಾಡು ಸೇರಿದಂತೆ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 42 ಕಳವು ಪ್ರಕರಣ ಬೆಳಕಿಗೆ ಬಂದಿವೆ.