*  ಬೆಂಗಳೂರಿನ ಜೆ.ಬಿ.ನಗರದಲ್ಲಿ ನಡೆದ ಘಟನೆ*  ಏಕಾಂಗಿಯಾಗಿದ್ದ ಬಟ್ಟೆ ವ್ಯಾಪಾರಿಯ ತಾಯಿ*  ಆರೋಪಿಗಳ ಪತ್ತೆಗೆ ಜಾಲ ಬೀಸಿದ ಪೊಲೀಸರು  

ಬೆಂಗಳೂರು(ಜು.01):  ತಾವು ಕೆಲಸ ಮಾಡುತ್ತಿದ್ದ ವ್ಯಾಪಾರಿಯೊಬ್ಬರ ಮನೆಯಲ್ಲಿ ಅವರ ತಾಯಿಯ ಕೈ-ಕಾಲು ಕಟ್ಟಿಹಾಕಿ .10 ಲಕ್ಷ ನಗದು ಹಾಗೂ ಚಿನ್ನ ದೋಚಿ ನೇಪಾಳ ಮೂಲದ ದಂಪತಿ ಪರಾರಿಯಾಗಿರುವ ಘಟನೆ ಹಾಡಹಗಲೇ ಬುಧವಾರ ಜೆ.ಬಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಲ್‌ಐಸಿ ಕಾಲೋನಿ ನಿವಾಸಿ ಬಟ್ಟೆವ್ಯಾಪಾರಿ ವಿನೋದ್‌ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಬೆಳಗ್ಗೆ 10.30ರ ಸುಮಾರಿಗೆ ಅವರ ತಾಯಿ ಮಂಜುಳಾ ಏಕಾಂಗಿಯಾಗಿದ್ದಾಗ ಸಹಚರರ ಜತೆ ಸೇರಿ ವಿನೋದ್‌ ಮನೆ ಕಾವಲುಗಾರ ಪ್ರತಾಪ್‌ ಮತ್ತು ಆತನ ಪತ್ನಿ ಸಂಗೀತಾ ಈ ದರೋಡೆ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ತುಂಬಾ ಒಳ್ಳೆ ಕೆಲಸ ಮಾಡಿದ್ದಿ ಬ್ರದರ್':‌ ಫೇಸ್‌ಬುಕ್‌ನಲ್ಲಿ ಕನ್ಹಯ್ಯಾ ಹತ್ಯೆ ವಿಡಿಯೋ ಹೊಗಳಿದ ವ್ಯಕ್ತಿ ಬಂಧನ!

ಬಟ್ಟೆ ವ್ಯಾಪಾರಿ ವಿನೋದ್‌ ಅವರು, ತಮ್ಮ ಕುಟುಂಬದ ಜತೆ ಎಲ್‌ಐಸಿ ಕಾಲೋನಿಯಲ್ಲಿ ನೆಲೆಸಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಅವರ ಮನೆಗೆ ಕಾವಲಿಗೆ ನೇಪಾಳ ಮೂಲದ ಪ್ರತಾಪ್‌ ಹಾಗೂ ಮನೆಗೆಲಸಕ್ಕೆ ಆತನ ಪತ್ನಿ ಸಂಗೀತಾ ನೇಮಕಗೊಂಡಿದ್ದರು. ಆ ಮನೆಯಲ್ಲೇ ನೇಪಾಳ ದಂಪತಿ ಸಹ ವಾಸವಾಗಿದ್ದರು. ತಮ್ಮ ಮನೆ ಮಾಲಿಕನ ವಹಿವಾಟಿನ ಬಗ್ಗೆ ತಿಳಿದುಕೊಂಡ ದಂಪತಿ, ಹಣದಾಸೆಗೆ ಬಿದ್ದು ಮಾಲಿಕನ ಮನೆಯಲ್ಲಿ ಕಳ್ಳತನ ಮಾಡಲು ಸಹಚರರ ಜತೆ ಸೇರಿ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಂತೆಯೇ ಬುಧವಾರ ಬೆಳಗ್ಗೆ ಕೆಲಸದ ನಿಮಿತ್ತ ವಿನೋದ್‌ ಹಾಗೂ ಅವರ ತಂದೆ ತೆರಳಿದರೆ, ಮಕ್ಕಳನ್ನು ಶಾಲೆಗೆ ಬಿಡಲು ಅವರ ಪತ್ನಿ ತೆರಳಿದ್ದರು. ಆಗ ಮನೆಯಲ್ಲಿ ವಿನೋದ್‌ ತಾಯಿ ಒಬ್ಬರೇ ಇದ್ದರು. ಈ ಸಮಯವನ್ನು ನೋಡಿಕೊಂಡ ನೇಪಾಳಿ ಗ್ಯಾಂಗ್‌, ಸೀದಾ ಮನೆಗೆ ನುಗ್ಗಿ ಮಂಜುಳಾ ಅವರ ಕೈ-ಕಾಲು ಕಟ್ಟಿಹಾಕಿದ್ದಾರೆ. ಬಳಿಕ ಬೆಡ್‌ ರೂಮ್‌ನ ಬಿರುವಿನ ಬೀಗ ತೆಗೆದು ನಗದು ಹಾಗೂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಕೆಲ ಹೊತ್ತಿನ ಬಳಿಕ ವಿನೋದ್‌ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.