ಶಿವಮೊಗ್ಗದ 2 ಶಂಕಿತ ಉಗ್ರರಿಗೆ 1.5 ಲಕ್ಷ ವಿದೇಶಿ ಕ್ರಿಪ್ಟೋ ಹಣ..!
ರಾಷ್ಟ್ರಧ್ವಜಕ್ಕೆ ಬೆಂಕಿ ಸೇರಿದಂತೆ 25 ವಿಧ್ವಂಸಕ ಕೃತ್ಯ ಕೇಸ್, ಕೋರ್ಟ್‌ಗೆ ಎನ್‌ಐಎ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ.
ಬೆಂಗಳೂರು(ಮಾ.18): ಶಿವಮೊಗ್ಗದಲ್ಲಿ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣ ಸೇರಿದಂತೆ ವಿವಿಧ ವಿಧ್ವಂಸಕ ಕೃತ್ಯ ಎಸಗಿದ ಆರೋಪ ಹಿನ್ನೆಲೆಯಲ್ಲಿ ಶಂಕಿತ ಇಬ್ಬರು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ಅಧಿಕಾರಿಗಳು ಆರೋಪಪಟ್ಟಿಸಲ್ಲಿಸಿದ್ದಾರೆ. ವಿಶೇಷವೆಂದರೆ, ಇವರಿಗೆ ವಿದೇಶದಿಂದ ಕ್ರಿಪ್ಟೋಕರೆನ್ಸಿ ರೂಪದಲ್ಲಿ 1.5 ಲಕ್ಷ ರು. ಹಣ ಬಂದಿತ್ತು ಎಂಬ ಅಂಶ ಆರೋಪಪಟ್ಟಿಯಲ್ಲಿ ಇದೆ.
ಶಿವಮೊಗ್ಗದ ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22) ವಿರುದ್ಧ ಆರೋಪ ಪಟ್ಟಿಸಲ್ಲಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ಮಾಡುವುದನ್ನು ತಡೆಯುವ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಪಟ್ಟಿಸಲ್ಲಿಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.
ಕುಕ್ಕರ್ ಬಾಂಬ್ ಸ್ಫೋಟ: ಶಾರೀಕ್‌ಗೆ ಶೀಘ್ರ ಮಂಗಳೂರಲ್ಲೂ ಸ್ಥಳ ಮಹಜರು ತನಿಖೆ
ಬಿಟೆಕ್ ಪದವೀಧರರಾದ ಅಹ್ಮದ್ ಮತ್ತು ಯಾಸಿನ್, ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿರುವುದು, ಗೋದಾಮುಗಳು, ಮದ್ಯದ ಅಂಗಡಿಗಳು, ಹಾರ್ಡ್‌ವೇರ್ ಅಂಗಡಿಗಳು, ವಾಹನಗಳು, ನಾಗರಿಕರ ಆಸ್ತಿ ಹಾನಿ ಸೇರಿದಂತೆ 25ಕ್ಕೂ ಹೆಚ್ಚು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇಸ್ಲಾಮಿಕ್ ರಾಜ್ಯ ರೂಪಿಸಲು ಪಿತೂರಿ ಮಾಡಿ, ದುಷ್ಕೃತ್ಯಗಳನ್ನು ಎಸಗಿದ್ದಾರೆ. ಐಸಿಸ್ ಗುಂಪಿನ ಭಯೋತ್ಪಾದಕ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಪ್ರಕರಣದಲ್ಲಿ ಬಂಧಿತರಾಗಿರುವ ಇತರೆ ಆರು ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆಯು ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ವಾರಾಹಿ ನದಿ ಹಿನ್ನೀರಿನ ಅರಣ್ಯ ಪ್ರದೇಶಕ್ಕೆ ಚಾರಣ ಹಾಗೂ ಅಡಗುತಾಣಗಳಿಗೆ ತೆರಳಿದ್ದು, ಸ್ಫೋಟಕಗಳನ್ನು ಸಂಗ್ರಹಿಸಿ ಐಇಡಿ ತಯಾರಿಸಲು ಸಿದ್ಧತೆ ನಡೆಸಿದ್ದರು. ಶಿವಮೊಗ್ಗದ ವಾರಾಹಿ ನದಿ ದಂಡೆಯಲ್ಲಿ ಯಾಸಿನ್ ಐಇಡಿ ಒಂದರ ಪ್ರಾಯೋಗಿಕ ಸ್ಫೋಟ ನಡೆಸಿದ್ದ. ತಮ್ಮ ದೇಶ ವಿರೋಧಿ ನಡೆಯನ್ನು ಸಾಬೀತುಪಡಿಸಲು ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ್ದರು ಮತ್ತು ವಿಡಿಯೋವನ್ನು ರೆಕಾರ್ಡ್ ಮಾಡಿದ್ದರು. ಈ ಕೃತ್ಯಗಳಿಗೆ ವಿದೇಶದಿಂದ ವ್ಯಕ್ತಿಯೊಬ್ಬರು ಕ್ರಿಪ್ಟೋಕರೆನ್ಸಿಗಳ ಮೂಲಕ ಹಣ ಪಾವತಿಸುತ್ತಿದ್ದರು. ಆರೋಪಿ ಅಹ್ಮದ್ ತನ್ನ ಸ್ನೇಹಿತರ ಖಾತೆಗಳಿಗೆ ಸುಮಾರು 1.5 ಲಕ್ಷ ರು.ಗೆ ಸಮಾನವಾದ ಕ್ರಿಪ್ಟೋ ಕರೆನ್ಸಿಯನ್ನು ಪಡೆದಿದ್ದ ಮತ್ತು ಯಾಸಿನ್ ಸ್ನೇಹಿತನ ಖಾತೆಗೆ 65 ಸಾವಿರ ರು. ಪಡೆದಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಂಗಳೂರು: ಭಯೋತ್ಪಾದನಾ ಕೃತ್ಯಕ್ಕೆ ದ.ಕ.ದಿಂದ 25 ಕೋಟಿ ರು. ವರ್ಗಾವಣೆ?
2047ಕ್ಕೆ ಇಸ್ಲಾಮಿಕ್ ದೇಶ ಪಿಎಫ್‌ಐ ಗುರಿ!
ಹೈದರಾಬಾದ್: ಕಳೆದ ವರ್ಷ ಹೈದರಾಬಾದ್‌ನಲ್ಲಿ ಬಂಧಿಸಲ್ಪಟ್ಟಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) 5 ಕಾರ್ಯಕರ್ತರ ವಿರುದ್ಧ ಎನ್‌ಐಎ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದೆ. ಅದರಲ್ಲಿ ಇವರ ಉದ್ದೇಶ 2047ಕ್ಕೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡುವುದಾಗಿತ್ತು ಎಂಬ ಅಂಶವಿದೆ. ಈ ಹಿಂದೆ ಕೇರಳ, ಮಹಾರಾಷ್ಟ್ರದಲ್ಲಿ ಪಿಎಫ್‌ಐ ವಿರುದ್ಧ ಸಲ್ಲಿಕೆಯಾದ ಆರೋಪಪಟ್ಟಿಗಳಲ್ಲೂ ಇಂತಹುದೇ ಅಂಶವಿತ್ತು.
ಕದ್ರಿ ದೇವಸ್ಥಾನದ ಬಳಿ ಸ್ಫೋಟಕ್ಕೆ ಯೋಜನೆ
ಈ ನಡುವೆ, ಐಸಿಸ್ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಭಾಗವಾಗಿ ಮತ್ತೊಬ್ಬ ಆರೋಪಿ ಮಹಮ್ಮದ್ ಶಾರಿಕ್ ಕಳೆದ ವರ್ಷ ನ.19ರಂದು ಮಂಗಳೂರಿನ ಕದ್ರಿ ದೇವಸ್ಥಾನದ ಬಳಿ ಐಇಡಿ ಸ್ಫೋಟವನ್ನು ನಡೆಸಲು ಯೋಜಿಸಿದ್ದ ಎಂದು ಎನ್‌ಎಐ ತಿಳಿಸಿದೆ. ಆದರೆ, ಟೈಮರ್ ದೋಷದಿಂದ ಸಾಧನವು ಅಕಾಲಿಕವಾಗಿ ಸ್ಫೋಟಗೊಂಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದೆ.