*   ವಿಜಯನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ*   ಬಾಕ್ಸ್‌ಗಳಲ್ಲಿ ನಿಷೇಧಿತ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ*   ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿಗಳು

ಹೊಸಪೇಟೆ(ಡಿ.23): ವಿಜಯನಗರ(Vijayanagara) ಜಿಲ್ಲೆಯ ಪೊಲೀಸರು(Police) ಭರ್ಜರಿ ಕಾರ್ಯಾಚರಣೆ ನಡೆಸಿ ತಿಮಿಂಗಿಲ ವಾಂತಿಯನ್ನು(Ambergris) ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ್ದು, ಆರು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದೂವರೆ ಕೋಟಿ ರು. ಮೌಲ್ಯದ ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದಾರೆ. ಕೊಪ್ಪಳ(Koppal) ಜಿಲ್ಲೆಯ ಬಂಡಿಹರ್ಲಾಪುರ ಗ್ರಾಮದ ಲಂಬಾಣಿ ವೆಂಕಟೇಶ (35), ಅಬ್ದುಲ್‌ ವಹಾಬ್‌ (23), ಮುರ್ಡೇಶ್ವರದ ಹಿರಮನೆ ಗಣಪತಿ (42), ಹುಬ್ಬಳ್ಳಿಯ ಪುಂಡಲಿಕ (34), ಮಹೇಶ್‌ (33) ಹಾಗೂ ವಿಜಯಪುರದ ಶ್ರೀಧರ್‌ (35) ಬಂಧಿತ(Arrest) ಆರೋಪಿಗಳು.

ಪ್ರಕರಣ ಪತ್ತೆ ಹೇಗೆ?

ಆರೋಪಿಗಳಾದ ಲಂಬಾಣಿ ವೆಂಕಟೇಶ ಮತ್ತು ಅಬ್ದುಲ್‌ ವಹಾಬ್‌ ಇವರಿಬ್ಬರು ಡಿ. 21ರಂದು ನಗರದ ಎಸ್‌ವಿಕೆ ಬಸ್‌ ನಿಲ್ದಾಣದ ಬಳಿ ಪ್ಯಾಕ್‌ ಮಾಡಿದ ಬಾಕ್ಸ್‌ಗಳಲ್ಲಿ ನಿಷೇಧಿತ ತಿಮಿಂಗಿಲ ವಾಂತಿಯನ್ನು ಹಾಕಿಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ವಶಕ್ಕೆ ಪಡೆದು, ವಿಚಾರಿಸಲಾಗಿ ಇನ್ನೂ ನಾಲ್ವರು ಆರೋಪಿಗಳಿದ್ದಾರೆ ಎಂದು ಬಾಯ್ಬಿಟ್ಟಿದ್ದಾರೆ ಎಂದು ಎಸ್ಪಿ ಡಾ. ಅರುಣ್‌ ಕೆ. ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಕರ್ನಾಟಕದಿಂದ ತಂದಿದ್ದ 26 ಕೋಟಿ ರೂ. ತಿಮಿಂಗಿಲ ವಾಂತಿ ವಶಕ್ಕೆ

ಬಳಿಕ ಡಿವೈಎಸ್ಪಿ ವಿಶ್ವನಾಥರಾವ್‌ ಕುಲಕರ್ಣಿ ಮಾರ್ಗದರ್ಶನದಲ್ಲಿ ಪಿಐಗಳಾದ ಶ್ರೀನಿವಾಸ, ಜಯಪ್ರಕಾಶ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ನಾಗರಾಜ, ತಿಮ್ಮಪ್ಪ, ಲಿಂಗರಾಜ್‌, ಗಾಳೆಪ್ಪ, ಶ್ರೀನಿವಾಸ್‌ ಅವ​ರ​ನ್ನೊ​ಳ​ಗೊಂಡ ತಂಡ ಕಾರ್ಯಾಚರಣೆ ನಡೆಸಿ ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತಿಮಿಂಗಿಲ ವಾಂತಿಯ ಮಾರಾಟ ಜಾಲದ ಕುರಿತು ತನಿಖೆ ಮುಂದುವರೆದಿದೆ ಎಂದು ಎಸ್ಪಿ ತಿಳಿಸಿದರು. ಈ ಕುರಿತು ಹೊಸ​ಪೇ​ಟೆಯ ನಗರ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿ​ದೆ.

17 ಕೋಟಿ ಮೌಲ್ಯದ 17 ಕೇಜಿ ಅಂಬರ್‌ ಗ್ರೀಸ್‌ ಜಪ್ತಿ: ಐವರ ಸೆರೆ

ಅಕ್ರಮವಾಗಿ ಅಂಬರ್‌ ಗ್ರೀಸ್‌(ತಿಮಿಂಗಿಲ ವಾಂತಿ) ಮಾರಾಟಕ್ಕೆ ಯತ್ನಿಸುತ್ತಿದ್ದ ಐವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿ, ಸುಮಾರು 17 ಕೋಟಿ ಮೌಲ್ಯದ 17 ಕೆ.ಜಿ. ತಿಮಿಂಗಲ ವಾಂತಿ ಹಾಗೂ ಒಂದು ಕಾರನ್ನು ಜಪ್ತಿ ಮಾಡಿದ್ದ ಘಟನೆ ಡಿ.20 ರಂದು ಬೆಂಗಳೂರು(Bengaluru) ನಗರದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಮದ್ದೂರಿನ ಸಿದ್ಧಾರ್ಥ ನಗರದ ಪುನೀತಕುಮಾರ್‌ (27), ಮಂಡ್ಯ ಚಾಮುಂಡೇಶ್ವರಿ ನಗರದ ಎಸ್‌.ಮಧುಕುಮಾರ್‌(27), ಮಂಡ್ಯ ಜಿಲ್ಲೆಯ ಕ್ಯಾಂತಕೆರೆ ಗ್ರಾಮದ ನಂದೀಶ್‌(34), ಬೆಂಗಳೂರು ನಗರದ ಚೌಡೇಶ್ವರಿ ನಗರದ ಎಸ್‌.ಯೋಗೇಶ(32), ಹೊಸಪಾಳ್ಯ ಸ್ಲಂನ ಗೋಪಾಲ(39) ಬಂಧಿತರು.

ಸತ್ತ ತಿಮಿಂಗಿಲ ದೇಹದೊಳಗಿತ್ತು 10 ಕೋಟಿ ನಿಧಿ : ಕೋಟ್ಯಧೀಶರಾದ ಬಡ ಮೀನುಗಾರರು

ಅ.20ರಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ನಗರದ ಮಲ್ಲೇಶ್ವರಂ ವೆಳ್ಳಿಪುರಂ ಸೇತುವೆ ಬಳಿ ಆರೋಪಿಗಳು ಕಾರೊಂದರಲ್ಲಿ ವನ್ಯಜೀವಿಗೆ ಸಂಬಂಧಿಸಿದ ಬೆಲೆಬಾಳುವ ವಸ್ತು ಇರಿಸಿಕೊಂಡು ಮಾರಾಟಕ್ಕೆ ಬಂದಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಇನ್‌ಸ್ಪೆಕ್ಟರ್‌ ಬಿ.ಕೆ.ಮಂಜಯ್ಯ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳಿಂದ 4 ಕೆ.ಜಿ. ತಿಮಿಂಗಿಲ ವಾಂತಿ ಹಾಗೂ ಇಟಿಯಸ್‌ ಕಾರನ್ನು ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರೋಪಿ ಗೋಪಾಲನ ಮನೆಯಲ್ಲಿ ಇರಿಸಿದ್ದ 13 ಕೆ.ಜಿ. ತಿಮಿಂಗಿಲ ವಾಂತಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಮುಖ ಆರೋಪಿ ಬಂಧನಕ್ಕೆ ಬಲೆ

ಪ್ರಕರಣದ ಪ್ರಮುಖ ಆರೋಪಿ ಪ್ರಸನ್ನ ಅಲಿಯಾಸ್‌ ರಾಬಿಟ್‌ ಎಂಬಾತ ತಲೆಮರೆಸಿಕೊಂಡಿದ್ದು, ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಬಂಧಿತ ಆರೋಪಿಗಳು ಆರೋಪಿ ಪ್ರಸನ್ನನ ಸೂಚನೆ ಮೇರೆಗೆ ಕಮಿಷನ್‌ ಆಸೆಗೆ ತಿಮಿಂಗಿಲ ವಾಂತಿ ಮಾರಾಟಕ್ಕೆ ಬಂದಿದ್ದರು. ಇವರ ಬಂಧನದ ವಿಚಾರ ತಿಳಿದು ಪ್ರಮುಖ ಆರೋಪಿ ಪ್ರಸನ್ನ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಮೂರು ತಂಡ ರಚಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದರು.