ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕೆ ಜಹೀರ್ ಖಾನ್ ಮೆಂಟರ್ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಲಖನೌ: ಐಪಿಎಲ್‌ನ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಮಾರ್ಗದರ್ಶಕರಾಗಿ ಭಾರತದ ಮಾಜಿ ವೇಗಿ ಜಹೀರ್ ಖಾನ್‌ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಫ್ರಾಂಚೈಸಿಯು 45 ವರ್ಷದ ಜಹೀರ್‌ ಜೊತೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಯಾಗಿದೆ.

ಕಳೆದ ಬಾರಿ ಲಖನೌ ಸೂಪರ್ ಜೈಂಟ್ಸ್‌ ತಂಡವು ಯಾವುದೇ ಮೆಂಟರ್ ಇಲ್ಲದೇ ಕಣಕ್ಕಿಳಿದಿತ್ತು. ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಮೊದಲೆರಡು ಸೀಸನ್‌ಗಳಲ್ಲಿ ಗೌತಮ್‌ ಗಂಭೀರ್‌ ಲಖನೌ ತಂಡದ ಮೆಂಟರ್‌ ಆಗಿದ್ದರು. ಅವರು ಈಗ ಭಾರತದ ಕೋಚ್‌ ಆಗಿದ್ದಾರೆ. ಇನ್ನು, ದ.ಆಫ್ರಿಕಾದ ಮೊರ್ನೆ ಮೋರ್ಕೆಲ್‌ ಭಾರತ ತಂಡಕ್ಕೆ ಬೌಲಿಂಗ್‌ ಆಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಲಖನೌ ತಂಡದ ಬೌಲಿಂಗ್‌ ಕೋಚ್‌ ಹುದ್ದೆಯೂ ಖಾಲಿಯಿದೆ. ಹೀಗಾಗಿ ಜಹೀರ್‌ ಖಾನ್‌ ಲಖನೌ ತಂಡದ ಮೆಂಟರ್‌ ಜೊತೆ ಬೌಲಿಂಗ್‌ ಕೋಚ್‌ ಹುದ್ದೆಯನ್ನೂ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

ನಮ್ಮಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಸ್ಟೇಡಿಯಂ ಇಲ್ಲವೆಂದ ಪಿಸಿಬಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಿಂದ ಶಿಫ್ಟ್‌?

ಲಖನೌ ಸೂಪರ್ ಜೈಂಟ್ಸ್ ತಂಡವು 2022ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದು, ಕಳೆದ ಮೂರು ಆವೃತ್ತಿಗಳ ಪೈಕಿ ಎರಡು ಬಾರಿ ಪ್ಲೇ ಆಫ್ ಪ್ರವೇಶಿಸಿ ಗಮನ ಸೆಳೆದಿತ್ತು. ಇನ್ನು ಜಹೀರ್ ಖಾನ್ ಈ ಮೊದಲು ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಆದರೆ ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್, ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್ ಮೇಲೆ ಒಲವು ತೋರಿದ್ದರಿಂದಾಗಿ ಜಹೀರ್ ಖಾನ್‌ಗೆ ಹಿನ್ನಡೆಯಾಗಿತ್ತು ಎಂದು ವರದಿಯಾಗಿದೆ.

ಮಹಾರಾಜ ಟ್ರೋಫಿ ಟಿ20: ಹುಬ್ಬಳ್ಳಿ ಟೈಗರ್ಸ್‌ಗೆ ಹ್ಯಾಟ್ರಿಕ್‌ ಗೆಲುವು

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಹುಬ್ಬಳ್ಳಿ 5 ವಿಕೆಟ್ ಜಯಗಳಿಸಿತು. ಬೆಂಗಳೂರು ಟೂರ್ನಿಯ ಮೊದಲ ಸೋಲುಂಡಿತು.

ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 19.5 ಓವರ್‌ಗಳಲ್ಲಿ 142 ರನ್‌ಗೆ ಆಲೌಟಾಯಿತು. ಎಲ್‌.ಆರ್‌.ಚೇತನ್‌ 35 ಎಸೆತಗಳಲ್ಲಿ 48, ಶುಭಾಂಗ್‌ ಹೆಗ್ಡೆ 36 ಎಸೆತಗಳಲ್ಲಿ ಔಟಾಗದೆ 52 ರನ್‌ ಸಿಡಿಸಿ ತಂಡವನ್ನು ಕಾಪಾಡಿದರು. ಬೇರೆ ಯಾರೂ ತಂಡಕ್ಕೆ ನೆರವಾಗಲಿಲ್ಲ. ವಿದ್ವತ್‌ ಕಾವೇರಪ್ಪ ಹಾಗೂ ಮನ್ವಂತ್‌ ತಲಾ 3 ವಿಕೆಟ್‌ ಕಿತ್ತರು.

ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಟಾಪ್ 8 ದೇಶಗಳಿವು..! ಆಸೀಸ್‌ಗೆ ಎರಡನೇ ಸ್ಥಾನ..!

ಸುಲಭ ಗುರಿಯನ್ನು ಮನೀಶ್‌ ಪಾಂಡೆ ನಾಯಕತ್ವದ ಹುಬ್ಬಳ್ಳಿ 18.5 ಓವರ್‌ಗಳಲ್ಲಿ ಬೆನ್ನತ್ತಿ ಜಯಗಳಿಸಿತು. ತಿಪ್ಪಾ ರೆಡ್ಡಿ 37 ಎಸೆತಗಳಲ್ಲಿ 47, ಕೃಷ್ಣನ್‌ ಶ್ರೀಜಿತ್‌ 41 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಕ್ರಾಂತಿ ಕುಮಾರ್‌ 3 ವಿಕೆಟ್‌ ಕಿತ್ತರು.

ಇಂದಿನ ಪಂದ್ಯಗಳು

ಶಿವಮೊಗ್ಗ -ಹುಬ್ಬಳ್ಳಿ, ಮಧ್ಯಾಹ್ನ 3ಕ್ಕೆ 
ಗುಲ್ಬರ್ಗಾ-ಮಂಗಳೂರು, ಸಂಜೆ 7ಕ್ಕೆ