* ಪಾಕ್‌ ಬ್ಯಾಟಿಂಗ್ ಕೋಚ್‌ನಿಂದ ದಿಢೀರ್ ಕೆಳಗಿಳಿದ ಯೂನಿಸ್ ಖಾನ್* ಬ್ಯಾಟಿಂಗ್ ಕೋಚ್ ಇಲ್ಲದೇ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ* ಇಂಗ್ಲೆಂಡ್ ಪ್ರವಾಸದಲ್ಲಿ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಆಡಲಿರುವ ಪಾಕ್

ಕರಾಚಿ(ಜೂ.22): ಪರಸ್ಪರ ಸಮ್ಮತಿಯ ಮೇರೆಗೆ ಪಾಕಿಸ್ತಾನ ಬ್ಯಾಟಿಂಗ್ ಕೋಚ್ ಹುದ್ದೆಯಿಂದ ಯೂನಿಸ್ ಖಾನ್ ಕೆಳಗಿಳಿದಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಂದು(ಜೂ.22) ತಿಳಿಸಿದೆ.

ಯೂನಿಸ್ ಖಾನ್ ಕಳೆದ ನವೆಂಬರ್‌ನಲ್ಲಿ ಎರಡು ವರ್ಷಗಳ ಅವಧಿಗೆ ಅಂದರೆ 2021ರ ಟಿ20 ವಿಶ್ವಕಪ್ ಟೂರ್ನಿವರೆಗೂ ಪಾಕಿಸ್ತಾನ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದರು. ಅನುಭವಿ ಕ್ರಿಕೆಟಿಗರಾದ ಯೂನಿಸ್ ಖಾನ್ ಅವರ ಸೇವೆಯನ್ನು ಕಳೆದುಕೊಳ್ಳುತ್ತಿರುವುದಕ್ಕೆ ಸಾಕಷ್ಟು ಬೇಸರವಾಗುತ್ತಿದೆ. ನಾವು ಪರಸ್ಪರ ಮಾತುಕತೆಯ ಮೂಲಕ ಯೂನಿಸ್‌ ಖಾನ್ ಅವರ ನಿರ್ಧಾರವನ್ನು ಗೌರವಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ವಾಸೀಂ ಖಾನ್ ತಿಳಿಸಿದ್ದಾರೆ. 

Scroll to load tweet…
Scroll to load tweet…

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: 5ನೇ ದಿನದಾಟ ಪಂದ್ಯ ನಡೆಯುತ್ತಾ?

ಕಿರು ಅವಧಿಗೆ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ ಯೂನಿಸ್ ಖಾನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮುಂಬರುವ ದಿನಗಳಲ್ಲೂ ಅವರು ಯುವ ಕ್ರಿಕೆಟಿಗರಿಗೆ ತಮ್ಮ ಅನುಭವವನ್ನು ಧಾರೆ ಎರೆಯಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ವಾಸೀಂ ಖಾನ್ ತಿಳಿಸಿದ್ದಾರೆ. 

ಇದೀಗ ಪಾಕಿಸ್ತಾನ ಕ್ರಿಕೆಟ್‌ ತಂಡವು ಬ್ಯಾಟಿಂಗ್ ಕೋಚ್ ಇಲ್ಲದೇ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆಗೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬ್ಯಾಟಿಂಗ್ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಪಾಕಿಸ್ತಾನ ತಂಡವು ಜೂನ್‌ 25ಕ್ಕೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಇಂಗ್ಲೆಂಡ್ ಪ್ರವಾಸದಲ್ಲಿ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.