ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ತಮ್ಮ ಏಳನೇ ಟೆಸ್ಟ್ ಶತಕವನ್ನು ಸಿಡಿಸಿದ್ದಾರೆ. ಅವರಿಗೆ ಉತ್ತಮ ಸಾಥ್ ನೀಡಿದ ಸಾಯಿ ಸುದರ್ಶನ್ ಕೂಡ ಅರ್ಧಶತಕ ಬಾರಿಸಿದ್ದು, ಈ ಯುವ ಜೋಡಿಯ ಬೃಹತ್ ಜತೆಯಾಟದಿಂದ ಭಾರತ ಬೃಹತ್ ಮೊತ್ತದತ್ತ ಸಾಗಿದೆ.
ನವದೆಹಲಿ: ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಬೌಂಡರಿ ಮೂಲಕವೇ ಖಾತೆ ತೆರೆದ ಎಡಗೈ ಬ್ಯಾಟರ್, 145 ಎಸೆತಗಳನ್ನು ಎದುರಿಸಿ ಟೆಸ್ಟ್ ವೃತ್ತಿಜೀವನದ ಏಳನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಸಾಯಿ ಸುದರ್ಶನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದ ಕೆ ಎಲ್ ರಾಹುಲ್ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಭಾರತ 58 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು.
ಯಶಸ್ವಿ ಜೈಸ್ವಾಲ್-ಸಾಯಿ ಸುದರ್ಶನ್ ಭರ್ಜರಿ ಜತೆಯಾಟ
ಇನ್ನು ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾಟದ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. 53 ಓವರ್ ಅಂತ್ಯದ ವೇಳೆಗೆ ಎರಡನೇ ವಿಕೆಟ್‌ಗೆ ಈ ಜೋಡಿ 213 ಎಸೆತಗಳನ್ನು ಎದುರಿಸಿ 147 ರನ್‌ಗಳ ಮುರಿಯದ ಜತೆಯಾಟವಾಡಿದೆ. ಭಾರತ ಸದ್ಯ ಒಂದು ವಿಕೆಟ್ ಕಳೆದುಕೊಂಡು 205 ರನ್ ಬಾರಿಸಿದೆ.
ಅಪರೂಪದ ದಾಖಲೆ ಬರೆದ ಜೈಸ್ವಾಲ್
23 ವರ್ಷದ ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಅವರು ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ 7ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಅಂದಹಾಗೆ ಜೈಸ್ವಾಲ್ ಏಳು ವಿವಿಧ ಸ್ಟೇಡಿಯಂನಲ್ಲಿ ಏಳು ಟೆಸ್ಟ್ ಶತಕ ಸಿಡಿಸಿದ್ದು ವಿಶೇಷ ಎನಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತಿಹೆಚ್ಚು ಟೆಸ್ಟ್ ಶತಕ ಸಿಡಿಸಿದ ಆರಂಭಿಕ ಬ್ಯಾಟರ್‌ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಇದೀಗ ಎರಡನೇ ಸ್ಥಾನಕ್ಕೇರಿದ್ದಾರೆ. ಜೈಸ್ವಾಲ್, ಲಂಕಾದ ದಿಮುತ್ ಕರುಣರತ್ನೆ ಹಾಗೂ ಉಸ್ಮಾನ್ ಖವಾಜಾ ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು 9 ಟೆಸ್ಟ್ ಶತಕ ಸಿಡಿಸಿದ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇನ್ನು ಯಶಸ್ವಿ ಜೈಸ್ವಾಲ್‌ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಸಾಯಿ ಸುದರ್ಶನ್ ತಮ್ಮ ಎರಡನೇ ಟೆಸ್ಟ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ವಿಂಡೀಸ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಸಾಯಿ ಸುದರ್ಶನ್ ಸದ್ಯ 113 ಎಸೆತಗಳನ್ನು ಎದುರಿಸಿ 62 ರನ್ ಗಳಿಸಿ ಮಿಂಚಿದ್ದಾರೆ.
