ಶುಭ್‌ಮನ್ ಗಿಲ್ ವಿವಾದಾತ್ಮಕ ಔಟ್..! ಥರ್ಡ್ ಅಂಪೈರ್‌ನನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದ ಫ್ಯಾನ್ಸ್..!
ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದ ಶುಭ್‌ಮನ್ ಗಿಲ್
ಥರ್ಡ್ ಅಂಪೈರ್ ತೀರ್ಪಿಗೆ ವಿರೇಂದ್ರ ಸೆಹ್ವಾಗ್ ಸೇರಿ ಹಲವರು ಸಿಡಿಮಿಡಿ
ಸೋಷಿಯಲ್ ಮೀಡಿಯಾದಲ್ಲಿ ಥರ್ಡ್ ಅಂಪೈರ್ ಸಿಕ್ಕಾಪಟ್ಟೆ ಟ್ರೋಲ್
ಲಂಡನ್(ಜೂ.11): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ರೋಚಕ ಘಟ್ಟ ತಲುಪಿದೆ. ಆಸ್ಟ್ರೇಲಿಯಾ ನೀಡಿರುವ 444 ರನ್‌ಗಳ ಬೆಟ್ಟದಂತ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ, ನಾಲ್ಕನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಕೊನೆಯದಾಟದಲ್ಲಿ ಭಾರತ ತಂಡವು ಸುಮಾರು 540 ಎಸೆತಗಳನ್ನು ಎದುರಿಸಲಿದ್ದು, ಕೇವಲ 280 ರನ್ ಗಳಿಸಬೇಕಿದೆ. ಟೀಂ ಇಂಡಿಯಾ ಮಾಜಿ ನಾಯಕ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಹಾಗೂ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್ ಅಜಿಂಕ್ಯ ರಹಾನೆ ಐದನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಹೀಗಾಗಿ ಕೊನೆಯ ದಿನದಾಟದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಇನ್ನು ನಾಲ್ಕನೇ ದಿನದಾಟದಲ್ಲಿ ಶುಭ್‌ಮನ್ ಗಿಲ್ ಅವರ ವಿವಾದಾತ್ಮಕ ತೀರ್ಪು ಇಡೀ ದಿನ ಚರ್ಚೆಗೆ ಗ್ರಾಸವಾಗಿದೆ. ಔಟ್ ನೀಡಿದ ಥರ್ಡ್ ಅಂಪೈರ್ ತೀರ್ಪನ್ನು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಾಗೂ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದಾರೆ.
ಹೌದು, ಇಲ್ಲಿನ ದಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಕಾಂಗರೂ ಪಡೆ ನೀಡಿದ್ದ 444 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ಒದಗಿಸಿಕೊಡುವ ಯತ್ನದಲ್ಲಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 41 ರನ್ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿಕೊಡುವತ್ತ ದಿಟ್ಟ ಹೆಜ್ಜೆಯಿಟ್ಟಿತ್ತು. ಇತ್ತೀಚೆಗಷ್ಟೇ ಮುಕ್ತಾಯವಾದ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ 3 ಶತಕ ಸಹಿತ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ ಗಿಲ್, ಟೆಸ್ಟ್ ವಿಶ್ವಕಪ್ ಫೈನಲ್‌ನ ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದರು. ಗಿಲ್ 19 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 18 ರನ್ ಬಾರಿಸಿದ್ದರು. ಈ ಸಂದರ್ಭದಲ್ಲಿ ಸ್ಕಾಟ್ ಬೋಲೆಂಡ್ ಸ್ಕಾಟ್ ಬೋಲೆಂಡ್‌ರ ಬೌಲಿಂಗ್‌ನಲ್ಲಿ ಆಫ್‌ಸ್ಟಂಪ್‌ನಿಂದ ಹೊರಹೋಗುತ್ತಿದ್ದ ಚೆಂಡು ಶುಭ್‌ಮನ್ ಗಿಲ್‌ರ ಬ್ಯಾಟ್‌ಗೆ ತಾಗಿ ಸ್ಲಿಫ್ಸ್‌ನತ್ತ ಸಾಗಿತು. ಕ್ಯಾಮರೂನ್ ಗ್ರೀನ್ ತಮ್ಮ ಎಡಕ್ಕೆ ಜಿಗಿದು ಆಕರ್ಷಕ ಕ್ಯಾಚ್ ಹಿಡಿದರು. ಆದರೆ ಚೆಂಡು ನೆಲಕ್ಕೆ ತಾಗಿದೆಯೇ ಎನ್ನುವ ಅನುಮಾನ ಪರಿಹರಿಸಿಕೊಳ್ಳಲು 3ನೇ ಅಂಪೈರ್‌ನ ನೆರವು ಪಡೆಯಲಾಯಿತು. 3ನೇ ಅಂಪೈರ್ ರಿಚರ್ಡ್ ಕೆಟೆಲ್‌ಬರ್ಗ್ ಹಲವು ಬಾರಿ ದೃಶ್ಯಗಳನ್ನು ಪರಿಶೀಲಿಸಿ, ಐಸಿಸಿಯ ನಿಯಮವನ್ನು ಗಮನದಲ್ಲಿಟ್ಟುಕೊಂಡು ಔಟ್ ಎಂದು ತೀರ್ಪಿತ್ತರು.
WTC Final ವಿವಾದಾತ್ಮಕ ಕ್ಯಾಚ್‌ಗೆ ಬಲಿಯಾದ ಗಿಲ್! ಐಸಿಸಿ ನಿಯಮಗಳು ಏನು?
ಆದರೆ ಫೋಟೋದಲ್ಲಿ ಚೆಂಡು ಕ್ಯಾಮರೋನ್ ಗ್ರೀನ್‌ರ ಬೆರಳುಗಳ ನಡುವೆ ನೆಲಕ್ಕೆ ತಾಗುತ್ತಿರುವಂತೆ ಕಾಣುತ್ತದೆ. ಹೀಗಾಗಿ ಅಂಪೈರ್ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಥರ್ಡ್ ಅಂಪೈರ್ ರಿಚರ್ಡ್ ಕೆಟೆಲ್‌ಬರ್ಗ್ ಅವರನ್ನು ಹಾಗೂ ಅಂಪೈರಿಂಗ್ ವ್ಯವಸ್ಥೆಯನ್ನು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಕಣ್ಣಿಗೆ ಬಟ್ಟೆಕಟ್ಟಿಕೊಂಡಿರುವ ವ್ಯಕ್ತಿಯೊಬ್ಬನ ಫೋಟೋದೊಂದಿಗೆ, ಶುಭ್‌ಮನ್ ಗಿಲ್ ಅವರ ತೀರ್ಪು ನೀಡುವಾಗ ಥರ್ಡ್ ಅಂಪೈರ್ ಈ ರೀತಿ ಇದ್ದರು. ಸ್ಪಷ್ಟವಾದ ಸಾಕ್ಷ್ಯಾಧಾರಗಳಿಲ್ಲದಿದ್ದರೇ, ಅನುಮಾನವಿದ್ದರೇ, ಅದು ನಾಟ್ ಔಟ್ ಎಂದು ಟ್ವೀಟ್ ಮಾಡಿ, ಥರ್ಡ್ ಅಂಪೈರ್‌ಗೆ ಬಿಸಿ ಮುಟ್ಟಿಸಿದ್ದಾರೆ.
ಇನ್ನು ಭಾರತದ ನೆಟ್ಟಿಗರು ಥರ್ಡ್ ಅಂಪೈರ್ ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಯಾರೆಲ್ಲ ಹೇಗೆಲ್ಲಾ ಟ್ರೋಲ್ ಮಾಡಿದ್ದಾರೆ ಎನ್ನುವುದನ್ನು ಇಲ್ಲೊಮ್ಮೆ ನೋಡಿ..