ವಿವಾದಾತ್ಮಕ ತೀರ್ಪಿಗೆ ಬಲಿಯಾದ ಶುಭ್‌ಮನ್‌ ಗಿಲ್‌ಚರ್ಚೆಯ ಕೇಂದ್ರಬಿಂದುವಾದ ಕ್ಯಾಮರೋನ್ ಗ್ರೀನ್ ಹಿಡಿದ ಕ್ಯಾಚ್ಕ್ಯಾಚ್ ಕುರಿತಂತೆ ಐಸಿಸಿ ನಿಯಮವೇನಿದೆ?

ಲಂಡನ್‌(ಜೂ.11): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯವು ರೋಚಕ ಘಟ್ಟದತ್ತ ಸಾಗುತ್ತಿದೆ. ಆದರೆ ಟೆಸ್ಟ್ ವಿಶ್ವಕಪ್‌ನ ನಾಲ್ಕನೇ ದಿನದಾಟದ ಭಾರತದ ಎರಡನೇ ಇನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ ಔಟ್ ನೀಡಿದ ಥರ್ಡ್‌ ಅಂಪೈರ್ ತೀರ್ಮಾನ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ 

ಹೌದು, ಭಾರತ ಉತ್ತಮ ಆರಂಭ ಪಡೆದು ಮುನ್ನುಗ್ಗುತ್ತಿದ್ದ ವೇಳೆ ಸ್ಕಾಟ್ ಬೋಲೆಂಡ್‌ರ ಬೌಲಿಂಗ್‌ನಲ್ಲಿ ಆಫ್‌ಸ್ಟಂಪ್‌ನಿಂದ ಹೊರಹೋಗುತ್ತಿದ್ದ ಚೆಂಡು ಶುಭ್‌ಮನ್ ಗಿಲ್‌ರ ಬ್ಯಾಟ್‌ಗೆ ತಾಗಿ ಸ್ಲಿಫ್ಸ್‌ನತ್ತ ಸಾಗಿತು. ಕ್ಯಾಮರೂನ್‌ ಗ್ರೀನ್‌ ತಮ್ಮ ಎಡಕ್ಕೆ ಜಿಗಿದು ಆಕರ್ಷಕ ಕ್ಯಾಚ್‌ ಹಿಡಿದರು. ಆದರೆ ಚೆಂಡು ನೆಲಕ್ಕೆ ತಾಗಿದೆಯೇ ಎನ್ನುವ ಅನುಮಾನ ಪರಿಹರಿಸಿಕೊಳ್ಳಲು 3ನೇ ಅಂಪೈರ್‌ನ ನೆರವು ಪಡೆಯಲಾಯಿತು. 3ನೇ ಅಂಪೈರ್‌ ಹಲವು ಬಾರಿ ದೃಶ್ಯಗಳನ್ನು ಪರಿಶೀಲಿಸಿ, ಐಸಿಸಿಯ ನಿಯಮವನ್ನು ಗಮನದಲ್ಲಿಟ್ಟುಕೊಂಡು ಔಟ್‌ ಎಂದು ತೀರ್ಪಿತ್ತರು. 

Scroll to load tweet…

ಆದರೆ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಚೆಂಡು ಗ್ರೀನ್‌ರ ಬೆರಳುಗಳ ನಡುವೆ ನೆಲಕ್ಕೆ ತಾಗುತ್ತಿರುವಂತೆ ಕಾಣುತ್ತದೆ. ಹೀಗಾಗಿ ಅಂಪೈರ್‌ ತೀರ್ಪು ವಿವಾದಕ್ಕೆ ಕಾರಣವಾಗಿದ್ದು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಐಸಿಸಿಯ ನಿಯಮಾನುಸಾರ ಗಮನಿಸಿದಾಗ, ಗ್ರೀನ್‌ ನೆಲದಿಂದ 6 ಇಂಚು ಮೇಲೆ ಚೆಂಡನ್ನು ಹಿಡಿದಿದ್ದು, ಚೆಂಡು ಹಾಗೂ ತಮ್ಮ ಚಲನೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಹೀಗಾಗಿ ಔಟ್‌ ಎಂದು ತೀರ್ಪು ಕೊಡಲಾಯಿತು ಎಂದು ವಿಶ್ಲೇಷಿಸಲಾಗಿದೆ.

ಐಸಿಸಿ ನಿಯಮಗಳು ಏನು?

1. ಚೆಂಡು ಬ್ಯಾಟರ್‌ನ ಬ್ಯಾಟ್‌ಗೆ ತಾಗಿ, ಅದನ್ನು ಫೀಲ್ಡರ್‌ ನೆಲಕ್ಕೆ ತಾಗದಂತೆ ಹಿಡಿದರೆ ಅದು ಔಟ್‌.

2. ಚೆಂಡು ಫೀಲ್ಡರ್‌ನ ಕೈ/ಕೈಗಳಲ್ಲಿ ಸುರಕ್ಷಿತವಾಗಿದ್ದು, ಕೈ/ಕೈಗಳು ನೆಲಕ್ಕೆ ತಾಗುತ್ತಿದ್ದರೂ ಅದು ಔಟ್‌.

3. ಚೆಂಡು ಫೀಲ್ಡರ್‌ನ ಕೈ ಸೇರಿದ ಕ್ಷಣದಿಂದ ಕ್ಯಾಚ್‌ನ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಫೀಲ್ಡರ್‌ ಚೆಂಡು ಹಾಗೂ ತನ್ನ ಚಲನೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದಾಗ ಕ್ಯಾಚ್‌ ಪೂರ್ಣಗೊಳ್ಳಲಿದೆ.

ಕೈಮ್ಯಾಕ್ಸ್‌ ತಲುಪಿದ ಟೆಸ್ಟ್‌ ಫೈನಲ್‌!

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಕ್ಲೈಮ್ಯಾಕ್ಸ್‌ ಹಂತ ತಲುಪಿದ್ದು, ಕೊನೆಯ ದಿನವಾದ ಭಾನುವಾರ ಹೊಸ ಚಾಂಪಿಯನ್‌ ಯಾರು ಎನ್ನುವುದು ನಿರ್ಧಾರವಾಗಲಿದೆ. 2ನೇ ಇನ್ನಿಂಗ್‌್ಸನಲ್ಲಿ 8 ವಿಕೆಟ್‌ಗೆ 280 ರನ್‌ ಗಳಿಸಿದ ಆಸ್ಪ್ರೇಲಿಯಾ ಡಿಕ್ಲೇರ್‌ ಮಾಡಿಕೊಂಡು, ಭಾರತಕ್ಕೆ 444 ರನ್‌ ಗುರಿ ನಿಗದಿಪಡಿಸಿದ್ದು 4ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 164 ರನ್‌ ಗಳಿಸಿರುವ ಭಾರತ, ಕೊನೆಯ ದಿನ ಗೆಲ್ಲಲು ಇನ್ನೂ 280 ರನ್‌ ಕಲೆಹಾಕಬೇಕಿದೆ.

‘ಚೇಸ್‌ ಮಾಸ್ಟರ್‌’ ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಕ್ರೀಸ್‌ ಕಾಯ್ದುಕೊಂಡಿದ್ದು ಇವರಿಬ್ಬರು ಭಾನುವಾರ ಭಾರತದ ಕೋಟ್ಯಂತರ ಅಭಿಮಾನಿಗಳು ನಿರೀಕ್ಷೆಯ ಭಾರ ಹೊತ್ತು ಆಡಬೇಕಿದೆ.

WTC Final: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆಲುವಿನಿಂದ 280 ರನ್‌ ದೂರದಲ್ಲಿ ಭಾರತ!

ಭಾರತದ ಕೈಗೆಟುಕದ ಗುರಿ ನಿಗದಿ ಪಡಿಸಿದ್ದೇವೆ ಎನ್ನುವ ವಿಶ್ವಾಸದೊಂದಿಗೆ ಆಸೀಸ್‌ ಇನ್ನಿಂಗ್‌್ಸ ಡಿಕ್ಲೇರ್‌ ಮಾಡಿಕೊಂಡ ಮೇಲೆ ಭಾರತ ಸಕಾರಾತ್ಮಕವಾಗಿ 2ನೇ ಇನ್ನಿಂಗ್‌್ಸ ಆರಂಭಿಸಿತು. ಶುಭ್‌ಮನ್‌ ಗಿಲ್‌ ಹಾಗೂ ರೋಹಿತ್‌ ಶರ್ಮಾ ಮೊದಲ ವಿಕೆಟ್‌ಗೆ 41 ರನ್‌ ಕಲೆಹಾಕಿದರು.

ಗಿಲ್‌ ವಿವಾದಾತ್ಮಕ ಕ್ಯಾಚ್‌ಗೆ ಬಲಿಯಾದ ಬಳಿಕ, ರೋಹಿತ್‌ ಆಕರ್ಷಕ ಬ್ಯಾಟಿಂಗ್‌ ಮುಂದುವರಿಸಿದರು. 91 ರನ್‌ಗೆ 1 ವಿಕೆಟ್‌ ಕಳೆದುಕೊಂಡಿದ್ದ ಭಾರತ ದಿಢೀರನೆ ಕುಸಿಯಿತು. ಲಯನ್‌ರ ಎಸೆತವನ್ನು ಸ್ವೀಪ್‌ ಮಾಡುವಾಗ ರೋಹಿತ್‌ ಎಲ್‌ಬಿ ಬಲೆಗೆ ಬಿದ್ದರೆ, ಐಪಿಎಲ್‌ ಆಡದೆ ಫೈನಲ್‌ನಲ್ಲಿ ಆಡುತ್ತಿರುವ ಭಾರತದ ಏಕೈಕ ಆಟಗಾರ ಚೇತೇಶ್ವರ್‌ ಪೂಜಾರ, ಐಪಿಎಲ್‌ನಲ್ಲಿ ಆಡುವಂತಹ ದುಬಾರಿ ಅಪ್ಪರ್‌-ಕಟ್‌ಗೆ ಯತ್ನಿಸಿ ಔಟಾದರು. 93 ರನ್‌ಗೆ 3 ವಿಕೆಟ್‌ ಬೀಳುತ್ತಿದ್ದಂತೆ ಭಾರತ ಒತ್ತಡಕ್ಕೆ ಸಿಲುಕಿತು.

ಕೊಹ್ಲಿ-ರಹಾನೆ ಆಸರೆ: 4ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ಕೊಹ್ಲಿ ಹಾಗೂ ರಹಾನೆ, ರನ್‌ ಕಲೆಹಾಕುವುದರ ಜೊತೆಗೆ ವಿಕೆಟ್‌ ಸಹ ಕಾಪಾಡಿಕೊಂಡು ಆಸೀಸ್‌ ಮೇಲೆ ಒತ್ತಡ ಹೇರಿದರು. ಇವರಿಬ್ಬರು ಮುರಿಯದ 4ನೇ ವಿಕೆಟ್‌ಗೆ 71 ರನ್‌ ಸೇರಿಸಿದ್ದಾರೆ. ಕೊಹ್ಲಿ ಔಟಾಗದೆ 44, ರಹಾನೆ ಔಟಾಗದೆ 20 ರನ್‌ ಗಳಿಸಿದ್ದಾರೆ.