ಆಸ್ಟ್ರೇಲಿಯಾ 184 ರನ್‌ಗಳಿಂದ 4ನೇ ಟೆಸ್ಟ್ ಗೆದ್ದು ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಈ ಗೆಲುವು ಆಸೀಸ್‌ಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಸುಗಮಗೊಳಿಸಿದೆ. ಭಾರತದ ಫೈನಲ್ ಪ್ರವೇಶದ ಸಾಧ್ಯತೆ ಕಠಿಣವಾಗಿದ್ದು, ಸಿಡ್ನಿ ಟೆಸ್ಟ್ ಗೆಲುವು ಮತ್ತು ಶ್ರೀಲಂಕಾ ಆಸ್ಟ್ರೇಲಿಯಾವನ್ನು ಸೋಲಿಸಬೇಕಿದೆ.

ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 184 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಾಂಗರೂ ಪಡೆ 2-1ರ ಮುನ್ನಡೆ ಸಾಧಿಸಿದೆ. ಇನ್ನು ಈ ಸೋಲಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಮತ್ತಷ್ಟು ದುರ್ಗಮವಾಗಿದೆ. ಆದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಗೆಲುವು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ರೇಸ್‌ಗೆ ಮತ್ತಷ್ಟು ಬಲ ತಂದುಕೊಟ್ಟಿದೆ. 

ಆಸ್ಟ್ರೇಲಿಯಾಗೆ ಬಿಗ್ ಬೂಸ್ಟ್‌:

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕೊನೆಯ ದಿನದವರೆಗೂ ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಿದ್ದೂ ಕೊನೆಯ ಸೆಷನ್‌ನಲ್ಲಿ ರಿಷಭ್ ಪಂತ್ ವಿಕೆಟ್ ಪಡೆಯುವ ಮೂಲಕ ಕಾಂಗರೂ ಪಡೆ ಗೆಲುವಿನ ಕನಸು ಕಾಣಲಾರಂಭಿಸಿತು. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಜಯಿಸುತ್ತಿದ್ದಂತೆಯೇ ಆಸ್ಟ್ರೇಲಿಯಾ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ರೇಸ್‌ ಕನಸಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ.

ಸದ್ಯ ಆಸ್ಟ್ರೇಲಿಯಾ ತಂಡವು 61.45 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಆಸ್ಟ್ರೇಲಿಯಾ ತಂಡವು ಸಿಡ್ನಿಯಲ್ಲಿ ಭಾರತ ವಿರುದ್ದ ಒಂದು ಹಾಗೂ ಶ್ರೀಲಂಕಾ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಮೂರು ಪಂದ್ಯಗಳ ಪೈಕಿ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಎರಡನೇ ತಂಡವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಲಗ್ಗೆಯಿಡಲಿದೆ. ಈಗಾಗಲೇ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಮೊದಲ ತಂಡವಾಗಿ ಅರ್ಹತೆ ಪಡೆದುಕೊಂಡಿದೆ.

ಭಾರತಕ್ಕೆ ಬಲವಾದ ಹೊಡೆತ:

ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್ ಎದುರು 3 ಪಂದ್ಯಗಳ ಸರಣಿಯಲ್ಲಿ ವೈಟ್‌ವಾಷ್ ಅನುಭವಿಸಿತ್ತು. ಇನ್ನು ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿದ್ದ ಭಾರತ, ಅಡಿಲೇಡ್ ಟೆಸ್ಟ್‌ನಲ್ಲಿ ಮುಗ್ಗರಿಸಿತ್ತು. ಇನ್ನು ಬ್ರಿಸ್ಬೇನ್‌ನ ಗಾಬಾ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಗೆದ್ದಿದ್ದರೇ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ ಸುಗಮವಾಗುತ್ತಿತ್ತು. ಆದರೆ ಮೆಲ್ಬರ್ನ್ ಟೆಸ್ಟ್ ಸೋಲಿನೊಂದಿಗೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 53.27 ಅಂಕಗಳಿಗೆ ಕುಸಿದಿದೆ. ಇದೀಗ ಭಾರತ ತಂಡವು ಸಿಡ್ನಿ ಟೆಸ್ಟ್ ಪಂದ್ಯವನ್ನು ಗೆದ್ದರೇ ಇದೇ ವೇಳೆ ಅದೃಷ್ಟ ಕೂಡಾ ಕೈಹಿಡಿದರೇ ಈಗಲೂ ಸಹಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರಲು ಸಾಧ್ಯವಿದೆ.

ಹೀಗಾಗಬೇಕಿದ್ದರೇ, ಮೊದಲ ಟೀಂ ಇಂಡಿಯಾ ವರ್ಷಾರಂಭದಲ್ಲಿ ನಡೆಯಲಿರುವ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಬೇಕು. ಇದಾದ ಬಳಿಕ ಆಸ್ಟ್ರೇಲಿಯಾ ತಂಡವು ಎರಡು ಪಂದ್ಯಗಳ ಸರಣಿಯನ್ನಾಡಲು ಶ್ರೀಲಂಕಾ ಪ್ರವಾಸ ಮಾಡಲಿದೆ. ಈ ಸರಣಿಯಲ್ಲಿ ಒಂದು ವೇಳೆ ಲಂಕಾ ತಂಡವು 1-0 ಅಥವಾ ಎರಡು 2-0 ಅಂತರದಲ್ಲಿ ಗೆಲುವು ಸಾಧಿಸಿದರೆ ಭಾರತ ತಂಡವು ಎರಡನೇ ತಂಡವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಲಗ್ಗೆಯಿಡಲಿದೆ