Asianet Suvarna News Asianet Suvarna News

WTC Final: ಟೆಸ್ಟ್‌ ಫೈನಲ್‌ಗೆ ಬ್ಯಾಟರ್‌ ಸ್ನೇಹಿ ಪಿಚ್‌?

ಲಂಡನ್‌ನ ದಿ ಓವಲ್‌ ಕ್ರೀಡಾಂಗಣದಲ್ಲಿ ನಾಳೆಯಿಂದ ಭಾರತ vs ಆಸ್ಪ್ರೇಲಿಯಾ ಫೈನಲ್‌ ಸೆಣಸಾಟ
ಪಿಚ್‌ ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ
3ನೇ ದಿನದಿಂದ ಸ್ಪಿನ್ನರ್‌ಗಳಿಗೆ ಅನುಕೂಲ?

WTC Final London The Oval a batter friendly surface say report kvn
Author
First Published Jun 6, 2023, 8:33 AM IST

ಲಂಡನ್‌(ಜೂ.06): ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ಗೆ ಇನ್ನೊಂದೇ ದಿನ ಬಾಕಿ ಇದ್ದು, ಬುಧವಾರದಿಂದ ಆರಂಭಗೊಳ್ಳಲಿರುವ ಪಂದ್ಯಕ್ಕೆ ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳು ಕಠಿಣ ಅಭ್ಯಾಸ ಮುಂದುವರಿಸಿವೆ. ಈ ಪಂದ್ಯಕ್ಕೆ ಬಳಸಲಾಗುವ ಪಿಚ್‌ನ ಮೊದಲ ಚಿತ್ರಗಳು ಸೋಮವಾರ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು, ತಜ್ಞರ ಪ್ರಕಾರ ಪಿಚ್‌ ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡಲಿದೆ ಎನ್ನಲಾಗಿದೆ.

ದಿ ಓವಲ್‌ನ ಪಿಚ್‌ ಸಾಂಪ್ರದಾಯಿಕವಾಗಿ ಬ್ಯಾಟರ್‌ ಸ್ನೇಹಿಯಾಗಿದ್ದು, ಇಲ್ಲಿನ ಔಟ್‌ಫೀಲ್ಡ್‌ ಕೂಡ ವೇಗವಾಗಿದೆ. ಇಲ್ಲಿನ ಪಿಚ್‌ನಲ್ಲಿ ವೇಗಿಗಳಿಗೆ ಉತ್ತಮ ಬೌನ್ಸ್‌ ಸಿಗುವ ನಿರೀಕ್ಷೆ ಇದೆ. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡಿದರೆ ಉತ್ತಮ ಎನ್ನಲಾಗುತ್ತಿದ್ದು, ಮೊದಲ ಇನ್ನಿಂಗ್ಸಲ್ಲಿ 350-375+ ರನ್‌ ಗಳಿಸಿದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು ಎಂದು ಅಂದಾಜಿಸಲಾಗಿದೆ. ಸರಾಸರಿ 25 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿರುವ ಕಾರಣ ಪಂದ್ಯ ಸಾಗಿದಂತೆ ಪಿಚ್‌ನಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚಿದ್ದು, 3 ಅಥವಾ 4ನೇ ದಿನದಿಂದ ಪಿಚ್‌ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಬಹುದು. ಹೀಗಾಗಿ ಮೊದಲ ಇನ್ನಿಂಗ್‌್ಸನ ಸ್ಕೋರ್‌ ನಿರ್ಣಾಯವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಸದ್ಯದ ವಾತಾವರಣ ಹಾಗೂ ಹವಾಮಾನ ಮುನ್ಸೂಚನೆ ಪ್ರಕಾರ ಪಂದ್ಯಕ್ಕೆ ಮಳೆಯ ಭೀತಿ ಇಲ್ಲ. ಆದರೆ ಇಂಗ್ಲೆಂಡ್‌ನಲ್ಲಿ ಯಾವಾಗ ಬೇಕಿದ್ದರೂ ಮಳೆ ಬೀಳಬಹುದು.

ಭಾರತಕ್ಕೆ 3 ಸ್ಥಾನಗಳಿಗೆ ಆಯ್ಕೆ ಗೊಂದಲ?

ಪಂದ್ಯಕ್ಕೆ ಒಂದೇ ದಿನ ಬಾಕಿ ಇದ್ದರೂ ಭಾರತ ತಂಡಕ್ಕಿನ್ನೂ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾದಂತೆ ಕಾಣುತ್ತಿಲ್ಲ. ಸೋಮವಾರ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರೂ, ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಮೂಲಗಳ ಪ್ರಕಾರ ಕೋಚ್‌ ದ್ರಾವಿಡ್‌, ನಾಯಕ ರೋಹಿತ್‌ ಶರ್ಮಾ ಹಾಗೂ ಇನ್ನುಳಿದ ಸಹಾಯಕ ಸಿಬ್ಬಂದಿಯನ್ನು ಒಳಗೊಂಡ ತಂಡದ ಆಡಳಿತಕ್ಕೆ ಇನ್ನೂ 3 ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ. 

WTC Final: ಜಡೇಜಾ/ಅಶ್ವಿನ್‌ ಇಬ್ಬರಲ್ಲಿ ಯಾರಿಗೆ ಸ್ಥಾನ? ಸನ್ನಿ ಆಯ್ಕೆ ಮಾಡಿದ ಭಾರತ ತಂಡ ಹೇಗಿದೆ?

ಮೊದಲನೇಯದ್ದು, ಜಡೇಜಾ ಹಾಗೂ ಅಶ್ವಿನ್‌ ಇಬ್ಬರನ್ನೂ ಆಡಿಸುವುದಾ? ಅಥವಾ ಜಡೇಜಾ ಒಬ್ಬರೇ ಸಾಕಾ?. ಎರಡನೇಯದ್ದು, ಶಾರ್ದೂಲ್‌ ಠಾಕೂರ್‌ ಅಥವಾ ಉಮೇಶ್‌ ಯಾದವ್‌ ನಡುವೆ ಯಾರನ್ನು ಆಯ್ಕೆ ಮಾಡಬೇಕು. ಮೂರನೇಯದ್ದು, ವಿಕೆಟ್‌ ಕೀಪರ್‌ ಆಗಿ ಇಶಾನ್‌ ಕಿಶನ್‌ ಅಥವಾ ಕೆ.ಎಸ್‌.ಭರತ್‌ ಪೈಕಿ ಯಾರಿಗೆ ಸ್ಥಾನ ನೀಡಬೇಕು ಎನ್ನುವುದು. ಟಾಸ್‌ ಆದ ಮೇಲೆಯೇ ಈ ಕುತೂಹಲಕ್ಕೆ ಉತ್ತರ ಸಿಗಲಿದೆ ಎನ್ನುವುದು ಬಹುತೇಕ ಖಚಿತ.

ಟೆಸ್ಟ್‌ ಡ್ರಾಗೊಂಡರೆ ಪ್ರಶಸ್ತಿ ಯಾರಿಗೆ?

ಫೈನಲ್‌ ಪಂದ್ಯವು ಡ್ರಾ ಅಥವಾ ಟೈಗೊಂಡರೆ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ. ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಪಡೆದ ಸ್ಥಾನಗಳು ಈಗ ಮಹತ್ವ ಪಡೆದಿಲ್ಲ. ಇನ್ನು ಮೀಸಲು ದಿನ ಇದೆಯಾದರೂ, ಮಳೆಯಿಂದಾಗಿ ಒಟ್ಟು ಎಷ್ಟುಓವರ್‌ಗಳ ಆಟ ವ್ಯರ್ಥವಾಗಿದೆ ಎನ್ನುವುದರ ಮೇಲೆ ಮೀಸಲು ದಿನದ ಬಳಕೆಯ ಬಗ್ಗೆ ಮ್ಯಾಚ್‌ ರೆಫ್ರಿ ನಿರ್ಧರಿಸಲಿದ್ದಾರೆ.

ದಿ ಓವಲ್‌ನಲ್ಲಿ ಮೊದಲ ಬಾರಿಗೆ ಜೂನಲ್ಲಿ ಟೆಸ್ಟ್‌!

ಇಂಗ್ಲೆಂಡ್‌ನಲ್ಲಿ ಮೊಟ್ಟಮೊದಲ ಬಾರಿಗೆ (1880ರಲ್ಲಿ) ಟೆಸ್ಟ್‌ ಪಂದ್ಯ ನಡೆದಿದ್ದು ಇದೇ ಕ್ರೀಡಾಂಗಣದಲ್ಲಿ. ಇಲ್ಲಿ ಈ ವರೆಗೂ 101 ಟೆಸ್ಟ್‌ ಪಂದ್ಯಗಳು ನಡೆದಿವೆ. ಆದರೆ ಯಾವ ಪಂದ್ಯವೂ ಜೂನ್‌ ತಿಂಗಳಲ್ಲಿ ನಡೆದಿಲ್ಲ. ಮೊದಲ ಬಾರಿಗೆ ಇಲ್ಲಿ ಜೂನ್‌ನಲ್ಲಿ ಟೆಸ್ಟ್‌ ನಡೆಯಲಿದ್ದು, ಸ್ಥಳೀಯ ವಾತಾವರಣ, ಪಿಚ್‌ ವರ್ತನೆ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ.

Follow Us:
Download App:
  • android
  • ios