ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಜೂನ್ 07ರಿಂದ ಆರಂಭಪ್ರಶಸ್ತಿಗಾಗಿ ಭಾರತ-ಆಸ್ಟ್ರೇಲಿಯಾ ನಡುವೆ ಕಾದಾಟಭಾರತದ ಬಲಿಷ್ಠ ಸಂಭಾವ್ಯ ತಂಡ ಹೆಸರಿಸಿದ ಸುನಿಲ್ ಗವಾಸ್ಕರ್

ನವದೆಹಲಿ(ಜೂ.05): ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯವು ಜೂನ್ 07ರಿಂದ ಆರಂಭವಾಗಲಿದ್ದು, ಚಾಂಪಿಯನ್ ಪಟ್ಟಕ್ಕಾಗಿ ಲಂಡನ್‌ನ ದಿ ಓವಲ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ. ಮುಂಬರುವ ಟೆಸ್ಟ್ ವಿಶ್ವಕಪ್‌ ಫೈನಲ್‌ಗೆ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್‌, ಭಾರತದ ಬಲಿಷ್ಠ ಆಡುವ ಹನ್ನೊಂದರ ಬಳಗವನ್ನು ಹೆಸರಿಸಿದ್ದು, ಹಲವು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಟೆಸ್ಟ್‌ ವಿಶ್ವಕಪ್ ಫೈನಲ್‌ಗೆ ಭಾರತ ತಂಡದಲ್ಲಿ ಪ್ರಮುಖ ಎರಡು ಸ್ಥಾನಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿದೆ. ವಿಕೆಟ್‌ ಕೀಪರ್ ರೂಪದಲ್ಲಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಹಾಗೂ ಕೆ ಎಸ್ ಭರತ್ ನಡುವೆ ಪೈಪೋಟಿ ಇದೆ. ಇನ್ನೊಂದೆಡೆ ಕೇವಲ ಒಬ್ಬರು ಸ್ಪಿನ್ನರ್ ಕಣಕ್ಕಿಳಿಸಬೇಕೇ ಅಥವಾ ಇಬ್ಬರು ಸ್ಪಿನ್ನರ್ ಕಣಕ್ಕಿಳಿಸಬೇಕೇ ಎನ್ನುವ ಚರ್ಚೆ ಜಾರಿಯಲ್ಲಿದೆ. ಈ ಕುರಿತಂತೆ ಸನ್ನಿ ಇದೀಗ ಪರ್ಪೆಕ್ಟ್ ಆಡುವ ಹನ್ನೊಂದರ ಬಳಗವನ್ನು ಹೆಸರಿಸಿದ್ದಾರೆ.

ಸುನಿಲ್ ಗವಾಸ್ಕರ್, ಅಡಿಲೇಡ್ ಓವಲ್ ಮೈದಾನದಲ್ಲಿ ಭಾರತ ತಂಡವು ಮೂವರು ತಜ್ಞ ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲು ಸಲಹೆ ನೀಡಿದ್ದಾರೆ. ಪರಿಸ್ಥಿತಿಗನುಗುಣವಾಗಿ ತಂಡವನ್ನು ಆಯ್ಕೆ ಮಾಡುವ ಬಗ್ಗೆ ಸನ್ನಿ ಸಲಹೆ ಕೊಟ್ಟಿದ್ದಾರೆ. 

"ನಾನು ಬ್ಯಾಟಿಂಗ್ ಬಗ್ಗೆ ಹೇಳಬೇಕೆಂದರೆ, ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಆರಂಭಿಕರಾಗಿರಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ನಾಲ್ಕನೇ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಇರಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

"ನಾನು ಆರನೇ ಕ್ರಮಾಂಕದಲ್ಲಿ ಕೆ ಎಸ್ ಭರತ್ ಹಾಗೂ ಇಶಾನ್ ಕಿಶನ್ ಇಬ್ಬರಲ್ಲಿ ಯಾರಿರಲಿದ್ದಾರೆ ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳುತ್ತಿದ್ದೇನೆ. ಈ ಹಿಂದೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಎದುರು ಆಡಿದ ಅನುಭವ ಇರುವುದರಿಂದ ಆರನೇ ಕ್ರಮಾಂಕದಲ್ಲಿ ಕೆ ಎಸ್ ಭರತ್ ಅವರನ್ನು ನೋಡಲು ಬಯಸುತ್ತೇನೆ" ಎಂದು ಸನ್ನಿ ಹೇಳಿದ್ದಾರೆ.

WTC Final: ಟೆಸ್ಟ್‌ ವಿಶ್ವಕಪ್ ಫೈನಲ್‌ಗೆ ಕ್ಷಣಗಣನೆ..?

ಇನ್ನು ಬೌಲಿಂಗ್ ವಿಭಾಗದ ಬಗ್ಗೆ ಹೇಳುವುದಾದರೇ, ಗವಾಸ್ಕರ್ ಇಬ್ಬರು ಸ್ಪಿನ್ನರ್‌ಗಳು ಕಣಕ್ಕಿಳಿಯಲಿ ಎಂದು ಸಲಹೆ ನೀಡಿದ್ದಾರೆ. ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಜತೆಗೆ ಮೂವರು ವೇಗಿಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಅವರಿಗೆ ಸ್ಥಾನ ನೀಡಿದ್ದಾರೆ.

"7ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಇರಲಿದ್ದಾರೆ. ಇನ್ನು ಒಂದು ವೇಳೆ ತಿಳಿ ಆಗಸ ಅಥವಾ ಬಿಸಿಲಿನ ವಾತಾವರಣವಿದ್ದರೇ ಜಡೇಜಾ ಹಾಗೂ ಅಶ್ವಿನ್ ಇಬ್ಬರೂ ಕಣಕ್ಕಿಳಿಯಲಿ ಎಂದು ಬಯಸುತ್ತೇನೆ. ಇನ್ನು 9,10 ಹಾಗೂ 11ನೇ ಕ್ರಮಾಂಕದಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಇರಲಿ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸುನಿಲ್ ಗವಾಸ್ಕರ್ ಆಯ್ಕೆ ಮಾಡಿದ ಸಂಭಾವ್ಯ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ ಎಸ್ ಭರತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.