WTC Final 'ನಾನು ದೇಶಕ್ಕಾಗಿ ..!' ಕಾಂಗರೂ ಪಡೆಗೆ ವಾರ್ನಿಂಗ್ ಕೊಟ್ಟ ಕಿಂಗ್ ಕೊಹ್ಲಿ
ರೋಚಕ ಘಟ್ಟ ತಲುಪಿದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್
5ನೇ ದಿನದಾಟದಲ್ಲಿ ಭಾರತ ಗೆಲ್ಲಲು 280 ರನ್ ಗುರಿ
ಕೊನೆಯ ದಿನದಾಟಕ್ಕೂ ಮುನ್ನ ಆಸ್ಟ್ರೇಲಿಯಾಗೆ ಎಚ್ಚರಿಕೆ ಕೊಟ್ಟ ವಿರಾಟ್ ಕೊಹ್ಲಿ
ಲಂಡನ್(ಜೂ.11): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟೆಸ್ಟ್ ವಿಶ್ವಕಪ್ ಗೆಲ್ಲಲು 444 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದೆ. ನಾಲ್ಕನೇ ದಿನದಾಟದಂತ್ಯದ ವೇಳೆಗೆ ಟೀಂ ಇಂಡಿಯಾ ಕೇವಲ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದ್ದು, ಚಾಂಪಿಯನ್ ಪಟ್ಟ ಅಲಂಕರಿಸಲು ಕೊನೆಯ ದಿನ 280 ರನ್ ಅಗತ್ಯವಿದೆ. ಭಾರತದ ಪ್ರಮುಖ 3 ವಿಕೆಟ್ ಕಬಳಿಸಿ ಪಂದ್ಯ ಗೆದ್ದಂತೆ ಬೀಗುತ್ತಿದೆ ಆಸ್ಟ್ರೇಲಿಯಾ. ಹೀಗಿರುವಾಗಲೇ ಐದನೇ ದಿನದಾಟ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ, ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಹೌದು, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ರನ್ ಮಷೀನ್ ಎನಿಸಿಕೊಳ್ಳುವುದರ ಜತೆಗೆ ದಶಕಗಳ ಕ್ರಿಕೆಟ್ ಬದುಕಿನಲ್ಲಿ ಓರ್ವ ಯಶಸ್ವಿ ಚೇಸ್ ಮಾಸ್ಟರ್ ಎಂದು ಸಹಾ ಗುರುತಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆದರೆ ಇದೀಗ ಭಾರತವನ್ನು 2013ರ ಬಳಿಕ ಐಸಿಸಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಬೇಕಿದ್ದರೇ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಜೋಡಿ ಅಸಾಧಾರಣ ಪ್ರದರ್ಶನ ತೋರಬೇಕಿದೆ. ಏಕೆಂದರೆ ಭಾರತಕ್ಕೆ ಗೆಲ್ಲಲು 280 ರನ್ ಅಗತ್ಯವಿದ್ದರೇ, ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಲು ಕೇವಲ 7 ವಿಕೆಟ್ ಕಬಳಿಸಬೇಕಿದೆ. ಸದ್ಯ ವಿರಾಟ್ ಕೊಹ್ಲಿ 60 ಎಸೆತಗಳನ್ನು ಎದುರಿಸಿ 7 ಆಕರ್ಷಕ ಬೌಂಡರಿ ಸಹಿತ 44 ರನ್ ಬಾರಿಸಿದ್ದರೆ, ಅಜಿಂಕ್ಯ ರಹಾನೆ 59 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 20 ರನ್ ಗಳಿಸಿ 5ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
WTC Final: 5 ದಿನದ ಕೊಹ್ಲಿ ಟ್ರ್ಯಾಕ್ ರೆಕಾರ್ಡ್ ಹೇಗಿದೆ?
5ನೇ ದಿನದಾಟದ ಆರಂಭಕ್ಕೂ ಮುನ್ನ ಐಸಿಸಿ ಜತೆಗೆ ಮಾತನಾಡಿರುವ ವಿರಾಟ್ ಕೊಹ್ಲಿ, "ನನಗೆ ಭಾರತವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದೆಯಲ್ಲ ಎನ್ನುವುದೇ ನನಗೆ ಪ್ರತಿ ಬಾರಿ ಪ್ರೇರಣೆಯನ್ನು ನೀಡುತ್ತದೆ. ನಾನು ದೇಶಕ್ಕಾಗಿ ಆಡುತ್ತೇನೆ. ನನ್ನ ತಂಡವನ್ನು ಗೆಲ್ಲಿಸುವುದಕ್ಕಾಗಿ ಆಡುತ್ತೇನೆ" ಎಂದು ಹೇಳುವ ಮೂಲಕ ಆಸ್ಟ್ರೇಲಿಯಾಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
"ಕ್ರೀಡೆಗಿಂತ ದೊಡ್ಡ ಸ್ಪೂರ್ತಿ ಮತ್ತೊಂದಿದೆ ಎಂದು ನನಗನಿಸುತ್ತಿಲ್ಲ. ನಾನು ಬೆಳಗ್ಗೆ ಎದ್ದ ಬಳಿಕ ನಾನು ಆಡುವ ಯಾವುದೇ ಕ್ರೀಡೆಯಿರಲಿ, ಆ ಪಂದ್ಯವನ್ನು ನನ್ನ ತಂಡಕ್ಕಾಗಿ ಗೆಲ್ಲಿಸುತ್ತೇನೆ ಎಂಬ ವಿಶ್ವಾಸದೊಂದಿಗೆ ಆಡುತ್ತೇನೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ
ನಾನು ಕ್ರೀಸ್‌ನಲ್ಲಿದ್ದಾಗ ನನ್ನ ತಂಡವು ಆರಾಮಾದಾಯಕವಾಗಿರುವಂತೆ ನೋಡಲು ಬಯಸುತ್ತೇನೆ. ನಾನು ನನ್ನ ಕೆಲವನ್ನು ಮಾಡುತ್ತೇನೆ. ಈ ಕುರಿತಂತೆ ನನ್ನ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆಯಿದೆ. ನನ್ನಿಂದ ತಂಡವು ಏನು ನಿರೀಕ್ಷೆ ಮಾಡುತ್ತದೆಯೋ ಅದನ್ನು ನೀಡಲು ಪ್ರಯತ್ನಿಸುತ್ತೇನೆ ಹಾಗೂ ತಂಡವು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
2013ರಲ್ಲಿ ಭಾರತ ತಂಡವು ಕೊನೆಯ ಬಾರಿಗೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಐಸಿಸಿ ಟ್ರೋಫಿ ಜಯಿಸಿತ್ತು. 2013ರಲ್ಲಿ ಇಂಗ್ಲೆಂಡ್‌ನಲ್ಲೇ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಹಲವು ಐಸಿಸಿ ಟೂರ್ನಿಗಳಲ್ಲಿ ಭಾರತ ಕಣಕ್ಕಿಳಿದರೂ ನಾಕೌಟ್ ಹಂತಗಳಲ್ಲೇ ಹೊರಬಿದ್ದು ನಿರಾಸೆ ಅನುಭವಿಸುತ್ತಾ ಬಂದಿದೆ. ಇದೀಗ ಬರೋಬ್ಬರಿ ಒಂದು ದಶಕದ ಬಳಿಕ ಐಸಿಸಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶ ಬಂದೊದಗಿದ್ದು, ಟೀಂ ಇಂಡಿಯಾ ಗೆಲುವಿನ ದಡ ಸೇರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಈ ಟೆಸ್ಟ್ ಡ್ರಾನಲ್ಲಿ ಅಂತ್ಯವಾದರೆ, ಭಾರತ ಹಾಗೂ ಆಸ್ಟ್ರೇಲಿಯಾ ತಂಡವನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.