WTC Final: ಆಸೀಸ್‌ಗೆ ಭಾರತೀಯ ಸ್ಪಿನ್ನರ್‌ಗಳದ್ದೇ ತಲೆಬಿಸಿ..!
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 07ರಿಂದ ಆರಂಭ
ಆಸೀಸ್‌ಗೆ ಭಾರತದ ತಂಡ ಸಂಯೋಜನೆ ಬಗ್ಗೆ ತಲೆಬಿಸಿ
ಟೆಸ್ಟ್ ವಿಶ್ವಕಪ್ ಫೈನಲ್‌ಗೆ 4 ದಿನ ಬಾಕಿ
ಲಂಡನ್(ಜೂ.03): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಇನ್ನು ಕೇವಲ 4 ದಿನ ಬಾಕಿ ಇದ್ದು, ಆಸ್ಪ್ರೇಲಿಯಾಗೆ ಭಾರತ ತಂಡದ ಸಂಯೋಜನೆ ಬಗ್ಗೆ ತಲೆಬಿಸಿ ಶುರುವಾದಂತಿದೆ. ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಫೈನಲ್ ಜೂ.7ರಿಂದ ಇಲ್ಲಿನ ‘ದಿ ಓವಲ್’ ಕ್ರೀಡಾಂಗಣದಲ್ಲಿ ನಡೆಯಲಿದೆ.
ಶುಕ್ರವಾರ ತಂಡದ ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಕೋಚ್ ಡೇನಿಯಲ್ ವೆಟ್ಟೋರಿ, ‘ರವೀಂದ್ರ ಜಡೇಜಾರ ಬ್ಯಾಟಿಂಗ್ ಸಾಮರ್ಥ್ಯವನ್ನು ಪರಿಗಣಿಸಿ ಭಾರತ ಅವರನ್ನು ಆಡಿಸುವುದು ಬಹುತೇಕ ಖಚಿತ. ಜಡೇಜಾ ಬೌಲಿಂಗ್ ಎದುರಿಸಲು ನಾವು ವಿಶೇಷ ತಯಾರಿ ನಡೆಸುತ್ತಿದ್ದೇವೆ. ಆದರೆ ಭಾರತ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುತ್ತದೆಯೋ ಅಥವಾ ಹೆಚ್ಚುವರಿ ವೇಗಿಯನ್ನು ಕಣಕ್ಕಿಳಿಸುತ್ತದೆಯೋ ಎನ್ನುವ ಬಗ್ಗೆ ನಮಗೆ ಇನ್ನೂ ಸ್ಪಷ್ಟತೆ ಸಿಗುತ್ತಿಲ್ಲ. ಅಶ್ವಿನ್ ಆಡುತ್ತಾರೋ ಅಥವಾ ಶಾರ್ದೂಲ್‌ರನ್ನು ಆಡಿಸಲಾಗುತ್ತದೆಯೋ ಎನ್ನುವ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ’ ಎಂದಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ತವರಿನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಜಯಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಅರ್ಹತೆ ಗಿಟ್ಟಿಸಿಕೊಂಡಿತ್ತು. ಆ ಸರಣಿಯಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 25 ವಿಕೆಟ್ ಕಬಳಿಸಿದರೆ, ಮತ್ತೋರ್ವ ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ 22 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ಈ ಸ್ಪಿನ್ ಜೋಡಿಯ ನೆರವಿನಿಂದ ಬಲಿಷ್ಠ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ ಸುಲಭವಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿತ್ತು.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸಹಾಯಕ ಕೋಚ್ ಡೇನಿಯಲ್ ವೆಟ್ಟೋರಿ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಟೀಂ ಮ್ಯಾನೇಜ್‌ಮೆಂಟ್, ಭಾರತದ ಸಂಭಾವ್ಯ ಬೌಲಿಂಗ್ ಪಡೆ ಹೇಗಿರಲಿದೆ ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. "ನಮ್ಮ ಪ್ರಕಾರ ಜಡೇಜಾ ಖಂಡಿತವಾಗಿಯೂ ಆಡುತ್ತಾರೆ. ನಂಬರ್ 6ನೇ ಕ್ರಮಾಂಕದಲ್ಲಿ ಅವರು ಎಷ್ಟು ಯಶಸ್ವಿಯಾಗಿದ್ದಾರೆ ಎನ್ನುವುದು ನಮ್ಮೆಲ್ಲರಿಗೂ ಗೊತ್ತಿದೆ" ಎಂದು ವೆಟ್ಟೋರಿ ಹೇಳಿದ್ದಾರೆ.
WTC Final: ಟೆಸ್ಟ್ ವಿಶ್ವಕಪ್‌ಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು? ರವಿಶಾಸ್ತ್ರಿ ಕೊಟ್ರು ಸುಳಿವು
"ಈ ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ, ಆಲ್ರೌಂಡರ್ ರೂಪದಲ್ಲಿ ಶಾರ್ದೂಲ್ ಠಾಕೂರ್ ಸೇರಿದಂತೆ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯುತ್ತಾರೋ ಅಥವಾ ಅಶ್ವಿನ್ ಕಣಕ್ಕಿಳಿಯುತ್ತಾರೋ ನೋಡಬೇಕು. ಯಾಕೆಂದರೆ ಇಬ್ಬರೂ ಒಳ್ಳೆಯ ಆಯ್ಕೆಯೇ ಆಗಿದೆ ಎಂದು ವೆಟ್ಟೋರಿ ಹೇಳಿದ್ದಾರೆ. ಹೀಗಿದ್ದೂ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಅಶ್ವಿನ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಇತ್ತೀಚಿಗಿನ ವರ್ಷಗಳಲ್ಲಿ ಇಂಗ್ಲೆಂಡ್ ನೆಲದಲ್ಲಿ ಅಶ್ವಿನ್ ರೆಕಾರ್ಡ್ ಹೇಳಿಕೊಳ್ಳುವಂತೇನು ಇಲ್ಲ ಎಂದಿದ್ದಾರೆ..
WTC Final ಭಾರತ ಗೆಲ್ಲಬೇಕಿದ್ದರೇ...? ಅಚ್ಚರಿಯ ಹೇಳಿಕೆ ನೀಡಿದ ರಿಕಿ ಪಾಂಟಿಂಗ್..!
ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್‌ನಲ್ಲಿ 7 ಟೆಸ್ಟ್ ಪಂದ್ಯಗಳನ್ನಾಡಿ 28.11ರ ಸರಾಸರಿಯಲ್ಲಿ 18 ವಿಕೆಟ್ ಕಬಳಿಸಿದ್ದಾರೆ. ಆದರೆ ಅಶ್ವಿನ್, ದಿ ಓವಲ್ ಮೈದಾನದಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯವನ್ನಷ್ಟೇ ಆಡಿದ್ದಾರೆ.
ಅಶ್ವಿನ್ ಓರ್ವ ಅತ್ಯದ್ಭುತ ಬೌಲರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಹುತೇಕ ತಂಡಗಳ ಪಾಲಿಗೆ ಅವರೊಬ್ಬ ಮೊದಲ ಆಯ್ಕೆಯ ಬೌಲರ್ ಬೌಲರ್ ಎನಿಸಿಕೊಳ್ಳುತ್ತಾರೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ತಂಡದ ಸಂಯೋಜನೆಯ ದೃಷ್ಟಿಯಿಂದ ಅವರು ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ ಎಂದು ವೆಟ್ಟೋರಿ ಹೇಳಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮದ್ ಶಮಿ, ಮೊಹಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್, ಇಶಾನ್ ಕಿಶನ್.
ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಕೇಶ್ ಕುಮಾರ್, ಸೂರ್ಯಕುಮಾರ್ ಯಾದವ್.