WTC Final ಕಾದಾಟಕ್ಕೆ ವೇದಿಕೆ ಸಜ್ಜುಪ್ರಶಸ್ತಿಗಾಗಿ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ಕಾದಾಟಭಾರತ ಗೆಲ್ಲಬೇಕಿದ್ದರೇ ಈ ಆಟಗಾರನ ಪ್ರದರ್ಶನ ಅತಿಮುಖ್ಯವೆಂದ ಪಾಂಟಿಂಗ್

ಲಂಡನ್‌(ಜೂ.02): ಬಹುನಿರೀಕ್ಷಿತ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಜೂನ್ 07ರಂದು ಇಲ್ಲಿನ ದಿ ಓವಲ್‌ ಮೈದಾನದಲ್ಲಿ ನಡೆಯಲಿದ್ದು, ಚಾಂಪಿಯನ್ ಪಟ್ಟಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ. ಸದ್ಯ ಭಾರತ ಕ್ರಿಕೆಟ್ ತಂಡವು ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ಎದುರು ನೋಡುತ್ತಿದ್ದು, ದಶತಕದ ಬಳಿಕ ಐಸಿಸಿ ಪ್ರಶಸ್ತಿ ಜಯಿಸಲು ತುದಿಗಾಲಿನಲ್ಲಿ ನಿಂತಿದೆ. 

ಭಾರತ ಕ್ರಿಕೆಟ್ ತಂಡದ ಮಾರಕ ವೇಗಿ ಮೊಹಮ್ಮದ್ ಶಮಿ, ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಪರ ಅನುಭವಿ ವೇಗಿ ಶಮಿ 28 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಭಾರತದ ವಾತಾವರಣಕ್ಕೂ ಹಾಗೂ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಆಂಗ್ಲರ ನಾಡಿನಲ್ಲಿ ಶಮಿ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. 

WTC Final: ಟೆಸ್ಟ್‌ ವಿಶ್ವಕಪ್‌ಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು? ರವಿಶಾಸ್ತ್ರಿ ಕೊಟ್ರು ಸುಳಿವು

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ವೇಗಿ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಿದ್ದಾರೆ. ಹೀಗಾಗಿ ಅನುಭವಿ ವೇಗಿ ಮೊಹಮ್ಮದ್ ಶಮಿ ಟೀಂ ಇಂಡಿಯಾ, ವೇಗದ ಬೌಲಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ ಅವರಂತಹ ದೈತ್ಯ ಆಟಗಾರರನ್ನು ಕಟ್ಟಿಹಾಕುವ ಸವಾಲು ಶಮಿ ಅವರ ಮುಂದಿದೆ. ಒಂದು ವೇಳೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜಯಿಸಬೇಕಿದ್ದರೇ, ಮೊಹಮ್ಮದ್ ಶಮಿ ಅತ್ಯದ್ಭುತ ಪ್ರದರ್ಶನ ತೋರಬೇಕಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

"ಒಂದು ವೇಳೆ ಆಸ್ಟ್ರೇಲಿಯಾ ಎದುರು ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜಯಿಸಬೇಕಿದ್ದರೇ, ಮೊಹಮ್ಮದ್ ಶಮಿ, ಮತ್ತೊಂದು ಹಂತದ ಅತ್ಯುತ್ತಮ ಬೌಲಿಂಗ್ ಮಾಡಬೇಕಿದೆ. ಅದು ಹೊಸ ಬಾಲ್ ಆಗಿರಲಿ ಅಥವಾ ಹಳೆಯ ಬಾಲ್ ಆಗಿರಲಿ, ಭಾರತದಲ್ಲಿ ಆಗಲಿ ಅಥವಾ ಆಸ್ಟ್ರೇಲಿಯಾದಲ್ಲಿ ಆಗಲಿ ಕಾಂಗರೂ ಪಡೆಯ ಬ್ಯಾಟರ್‌ಗಳಿಗೂ ಗೊತ್ತಿದೆ ಮೊಹಮ್ಮದ್ ಶಮಿ ಎಷ್ಟು ಅಪಾಯಕಾರಿ ಬೌಲರ್ ಎನ್ನುವುದು ಎಂದು ಪಾಂಟಿಂಗ್ ಹೇಳಿದ್ದಾರೆ.

ಭಾರತ ತಂಡ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್‌.ಭರತ್‌, ಆರ್‌.ಅಶ್ವಿನ್‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಶಾರ್ದೂಲ್‌ ಠಾಕೂರ್‌, ಮೊಹಮದ್‌ ಶಮಿ, ಮೊಹಮದ್‌ ಸಿರಾಜ್‌, ಉಮೇಶ್‌ ಯಾದವ್‌, ಜಯದೇವ್‌ ಉನಾದ್ಕತ್‌, ಇಶಾನ್‌ ಕಿಶನ್‌.

ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್‌, ಮುಕೇಶ್‌ ಕುಮಾರ್‌, ಸೂರ್ಯಕುಮಾರ್‌ ಯಾದವ್‌.